ಹೈದರಾಬಾದ್: ಇಲ್ಲಿನ ಸಿಕಂದರಾಬಾದ್‌ನ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಹಳೆಯ ಮರವೊಂದು ಬಿದ್ದು ಪತಿ ಸಾವಿಗೀಡಾಗಿದ್ದು, ಪತ್ನಿ ಗಾಯಗೊಂಡ ದಾರುಣ ಘಟನೆ ನಡೆದಿದೆ.
ದಂಪತಿ ಚಿಕಿತ್ಸೆಗೆಂದು ಬಂದಿದ್ದ ಸಿಕಂದರಾಬಾದ್‌ನ ಬೋಲಾರಂ ಕಂಟೋನ್ಮೆಂಟ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ತುಮಕುಂಟಾ ನಿವಾಸಿಗಳಾದ ದಂಪತಿ ಚಿಕಿತ್ಸೆಗಾಗಿ ಸ್ಕೂಟರ್‌ನಲ್ಲಿ ಆಸ್ಪತ್ರೆಯ ಕಾಂಪೌಂಡ್‌ಗೆ ಪ್ರವೇಶಿಸಿದ ಕೂಡಲೇ ಹಳೆಯ ಮರ ಅವರ ಮೇಲೆ ಬಿದ್ದಿದೆ. ಬೈಕ್ ಚಲಾಯಿಸುತ್ತಿದ್ದ ರವೀಂದ್ರ ಎಂಬವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಪತ್ನಿ ಸರಳಾದೇವಿಗೆ ಗಂಭೀರ ಗಾಯಗಳಾಗಿವೆ. ಆಕೆಯನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಕಿಯಾಗಿರುವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ.
ಪೊಲೀಸರು ರವೀಂದ್ರ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈಚೆಗೆ ಸುರಿದ ಮಳೆಗೆ ಕ್ಷೀಣಿಸಿದ್ದ ಹಳೆಯ ಮರವೊಂದು ದಂಪತಿ ಮೇಲೆ ಬಿದ್ದಿದೆ. ನಿರಂತರ ಮಳೆಯಿಂದಾಗಿ ಮರ ಉರುಳಿ ಬಿದ್ದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಪಘಾತದ ಸಿಸಿಟಿವಿ ದೃಶ್ಯಾವಳಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮರವು ವಾಲಿತ್ತು. ಆದರೆ ಅದನ್ನು ತೆರವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಮರ ಬಿದ್ದ ನಂತರ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರವೀಂದ್ರ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ