ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ. ಪಕ್ಷದ 19-20 ಶಾಸಕರು ರಹಸ್ಯವಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿ, ಸಂಪುಟ ಪುನಾರಚನೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟ ಬೆನ್ನಲ್ಲೇ ಪಕ್ಷದ ನಾಯಕತ್ವ ಎಚ್ಚೆತ್ತುಕೊಂಡಿದೆ. ಪಕ್ಷದಲ್ಲಿ ಯಾವುದೇ ಬಂಡಾಯ ಅಥವಾ ಭಿನ್ನಮತ ಇಲ್ಲ ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಶನಿವಾರ ಪ್ರಯತ್ನಿಸಿದೆ.
ಅಕ್ಟೋಬರ್ 29ರ ಗುರುವಾರ ಶ್ರೀನಗರದಲ್ಲಿ ಪಕ್ಷದ ಶಾಸಕರೊಬ್ಬರ ನಿವಾಸದಲ್ಲಿ 19 ಶಾಸಕರು ರಹಸ್ಯ ಸಭೆ ನಡೆಸಿದ್ದರು. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಆಪ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು, ಸಚಿವ ಸಂಪುಟವನ್ನು ಪುನರ್ರಚಿಸಬೇಕು, ಮುಖ್ಯಮಂತ್ರಿಯ ಸಲಹೆಗಾರ ಸೇರಿದಂತೆ ಅವರ ಆಪ್ತ ವಲಯದಲ್ಲಿರುವ ಪ್ರಮುಖ ಪದಾಧಿಕಾರಿಗಳನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಈ ಸಭೆಯ ವಿಚಾರ ಬಹಿರಂಗವಾಗುತ್ತಿದ್ದಂತೆ ನ್ಯಾಷನಲ್ ಕಾನ್ಫರೆನ್ಸ್ನಲ್ಲಿ ರಾಜಕೀಯ ಸಂಚಲನ ಮೂಡಿದೆ. ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶದಿಂದ ಒಮರ್ ಅಬ್ದುಲ್ಲಾ ಅವರು ದೆಹಲಿಯಿಂದ ತಮ್ಮ ಆಪ್ತ ಸಹಾಯಕರೊಬ್ಬರನ್ನು ಅಸಮಾಧಾನಿತ ಶಾಸಕರ ಜೊತೆ ಮಾತುಕತೆ ನಡೆಸಲು ಕಳುಹಿಸಿದ್ದರು. ಆದರೆ, ಶಾಸಕರು ಆಪ್ತ ಸಹಾಯಕರ ಜೊತೆ ಮಾತುಕತೆ ನಡೆಸಲು ನಿರಾಕರಿಸಿದ್ದು, ಮುಖ್ಯಮಂತ್ರಿಯೇ ನೇರವಾಗಿ ತಮ್ಮೊಂದಿಗೆ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ.
ಆದರೆ, ಪಕ್ಷದ ನಾಯಕರು ಈ ಬೆಳವಣಿಗೆಯನ್ನು ಬಂಡಾಯವೆಂದು ಎಂಬುದನ್ನು ತಳ್ಳಿಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ನ ಪ್ರಾಂತೀಯ ಅಧ್ಯಕ್ಷ ಶೌಕತ್ ಅಹ್ಮದ್ ಮೀರ್, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಹೇಳಿದ್ದಾರೆ. ಶಾಸಕರು ಒಟ್ಟಾಗಿ ಭೋಜನಕೂಟ ನಡೆಸಿರುವುದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಅದನ್ನು ಬಂಡಾಯ ಎಂದು ಪರಿಗಣಿಸಬೇಕಿಲ್ಲ ಎಂದು ಹೇಳಿದ್ದಾರೆ.
ಸಚಿವ ಸಂಪುಟದ ಹಿರಿಯ ಸದಸ್ಯ ಹಾಗೂ ಪಕ್ಷದ ನಾಯಕ ಜಾವೇದ್ ಅಹ್ಮದ್ ರಾಣಾ ಕೂಡ ಶಾಸಕರ ಸಭೆಯಲ್ಲಿ ಯಾವುದೇ ತಪ್ಪಿಲ್ಲ. ಪಕ್ಷದ ಆಂತರಿಕ ವೇದಿಕೆಯಲ್ಲಿಯೇ ಶಾಸಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಅವರ ಎಲ್ಲ ಬೇಡಿಕೆಗಳನ್ನು ಆಲಿಸಿ, ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಎಲ್ಲರನ್ನೂ ಏಕಕಾಲದಲ್ಲಿ ತೃಪ್ತಿಪಡಿಸುವುದು ಸಾಧ್ಯವಿಲ್ಲದಿದ್ದರೂ, ಶಾಸಕರ ಅಹವಾಲುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಅವರ ಇತರ ಬೇಡಿಕೆಗಳನ್ನೂ ಈಡೇರಿಸಲಾಗುವುದು ಎಂದು ರಾಣಾ ಭರವಸೆ ನೀಡಿದ್ದಾರೆ.
ಶಾಸಕರ ಪ್ರಮುಖ ಬೇಡಿಕೆಗಳೇನು?
ಅಸಮಾಧಾನಿತ ಶಾಸಕರು ಹಲವು ಪ್ರಮುಖ ಬೇಡಿಕೆಗಳನ್ನು ಪಕ್ಷದ ಮುಂದಿಟ್ಟಿದ್ದಾರೆ. ಅವುಗಳಲ್ಲಿ ಮೊದಲನೆಯದು ದಾಚಿಗಾಮ್ ಘೋಷಣೆಯ (Dachigam Declaration) ಅನುಷ್ಠಾನ. ಈ ಘೋಷಣೆಯಲ್ಲಿ ಮಾಡಲಾಗಿದ್ದ ಒಪ್ಪಂದ ಹಾಗೂ ಭರವಸೆಗಳನ್ನು ಉಲ್ಲಂಘಿಸಲಾಗಿದೆ ಎಂದು ಶಾಸಕರು ಆರೋಪಿಸಿದ್ದು, ಅದನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎರಡನೆಯದಾಗಿ, ಎರಡು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿರುವ ನಾಲ್ವರು ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂಬುದು ಶಾಸಕರ ಬೇಡಿಕೆ. ಅವರ ಬದಲಿಗೆ ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸುವ ಮೂಲಕ ಆಡಳಿತದಲ್ಲಿ ಬದಲಾವಣೆ ತರಬೇಕು ಎಂಬುದು ಅವರ ನಿಲುವಾಗಿದೆ.
ಮೂರನೆಯದಾಗಿ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸಲಹೆಗಾರರನ್ನು ಹಾಗೂ ಪಕ್ಷದ ಕೆಲವು ಪ್ರಮುಖ ಪದಾಧಿಕಾರಿಗಳನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ. ಕಾಶ್ಮೀರ ಪ್ರಾಂತೀಯ ಅಧ್ಯಕ್ಷ ಶೌಕತ್ ಅಹ್ಮದ್ ಮೀರ್ ಅವರು ಪಕ್ಷಕ್ಕೆ ಹಾನಿ ಮಾಡುತ್ತಿದ್ದಾರೆ ಮತ್ತು ಮುಖ್ಯಮಂತ್ರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ ಎಂಬ ಆರೋಪವನ್ನು ಅಸಮಾಧಾನಿತ ಶಾಸಕರು ಮಾಡಿದ್ದಾರೆ. ಶಮ್ಮಿ ಒಬೆರಾಯ್ ಅವರ ಬಗ್ಗೆಯೂ ಶಾಸಕರಲ್ಲಿ ಅಸಮಾಧಾನವಿದ್ದು, ಅವರ ವಿರುದ್ಧವೂ ದೂರುಗಳಿವೆ ಎನ್ನಲಾಗಿದೆ. ಮುಖ್ಯಮಂತ್ರಿಯ ಸಲಹೆಗಾರರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂಬುದು ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ.
ಜಮ್ಮು ಮತ್ತು ಪೀರ್ ಪಂಜಾಲ್ ಪ್ರದೇಶಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂಬ ಬೇಡಿಕೆಯನ್ನೂ ಶಾಸಕರು ಮುಂದಿಟ್ಟಿದ್ದಾರೆ. ಪೀರ್ ಪಂಜಾಲ್ ಪ್ರದೇಶದ ಶಾಸಕರು ಉಪಮುಖ್ಯಮಂತ್ರಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಾದ ಅನುದಾನವನ್ನು ಉಪಮುಖ್ಯಮಂತ್ರಿಯವರು ತಮ್ಮ ಸ್ವಂತ ಕ್ಷೇತ್ರಕ್ಕೆ ಮಾತ್ರ ಬಳಸಿಕೊಂಡಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.
ಇದರ ಜತೆಗೆ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವಕ್ಕೆ ಆದ್ಯತೆ ನೀಡಬೇಕು. ಶಾಸಕರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು ಹಾಗೂ ಪಕ್ಷದ ನಿರ್ಧಾರಗಳಲ್ಲಿ ಅವರಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಂಡಾಯ ಶಮನಕ್ಕೆ ಫಾರೂಕ್ ಅಬ್ದುಲ್ಲಾ ಯತ್ನ
ಪಕ್ಷದೊಳಗಿನ ಭಿನ್ನಮತವನ್ನು ಶಮನಗೊಳಿಸಲು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ ಕೂಡ ಮಧ್ಯಪ್ರವೇಶಿಸಿದ್ದಾರೆ. ಅಸಮಾಧಾನಿತ ಶಾಸಕರ ಪೈಕಿ ಹಲವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಅವರು, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಸದ್ಯಕ್ಕೆ ಸಚಿವ ಸಂಪುಟ ಪುನರ್ರಚನೆಗೆ ಅವಕಾಶ ನೀಡಲು ಸಾಧ್ಯವಾಗದಿದ್ದರೂ, ಇನ್ನೂ ಒಂದೂವರೆ ವರ್ಷದ ಬಳಿಕ ಸಂಪುಟ ಪುನರ್ರಚನೆ ನಡೆಸಲಾಗುವುದು. ಈಗ ಸಚಿವ ಸ್ಥಾನ ಸಿಗದವರಿಗೆ ಆಗ ಅವಕಾಶ ಕಲ್ಪಿಸಲಾಗುವುದು ಎಂಬ ಪ್ರಸ್ತಾಪವನ್ನು ಫಾರೂಕ್ ಅಬ್ದುಲ್ಲಾ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಆದರೆ, ಫಾರೂಕ್ ಅಬ್ದುಲ್ಲಾ ಅವರ ಈ ಭರವಸೆಯನ್ನೂ ಅಸಮಾಧಾನಿತ ಶಾಸಕರು ಒಪ್ಪಿಕೊಂಡಿಲ್ಲ. ತಮ್ಮ ಬೇಡಿಕೆಗಳನ್ನು ಈಗಲೇ ಈಡೇರಿಸಬೇಕು ಎಂಬ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಪಕ್ಷದೊಳಗಿನ ಅಸಮಾಧಾನ ಇನ್ನೂ ಶಮನಗೊಂಡಿಲ್ಲ ಎನ್ನಲಾಗಿದೆ.
ಆದರೆ, ಈ ಅಸಮಾಧಾನಿತ ಶಾಸಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬಿಜೆಪಿಯ ಬೆಂಬಲ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯೊಂದಿಗೆ ಕೈಜೋಡಿಸುವ ಬದಲು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದೊಳಗೇ ಇದ್ದುಕೊಂಡು ತಮ್ಮ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ, ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕತ್ವ ಹೇಳುತ್ತಿದ್ದರೂ, ಹಲವು ಶಾಸಕರ ಸಂಘಟಿತ ಸಭೆ, ಮುಖ್ಯಮಂತ್ರಿಯ ಆಪ್ತರ ಜೊತೆಗೆ ಮಾತುಕತೆಗೆ ನಿರಾಕರಣೆ ಹಾಗೂ ಸಂಪುಟ ಪುನರ್ರಚನೆಗೆ ಪಟ್ಟು ಹಿಡಿದಿರುವ ಬೆಳವಣಿಗೆಗಳು ಪಕ್ಷದ ಆಂತರಿಕ ರಾಜಕೀಯದಲ್ಲಿ ಉಂಟಾಗಿರುವ ಅಸಮಾಧಾನವನ್ನು ಬಹಿರಂಗಪಡಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ