
ಹೈದರಾಬಾದ್ : ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗಿಯಾದ 7 ತಿಂಗಳ ಗರ್ಭಿಣಿಯಾಗಿರುವ ದೆಹಲಿ ಪೊಲೀಸ್ ಪೇದೆಯೊಬ್ಬರು 145 ಕೆಜಿ ತೂಕ ಎತ್ತುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಪೊಲೀಸ್ ಕಾನ್ಸ್‌ಟೇಬಲ್ (Police Constable) ಸೋನಿಕಾ ಯಾದವ್ ಅವರು ಏಳು ತಿಂಗಳ ಗರ್ಭಿಣಿಯಾಗಿದ್ದರೂ, ಆಂಧ್ರ ಪ್ರದೇಶದಲ್ಲಿ ನಡೆದ ಆಲ್ ಇಂಡಿಯಾ ಪೊಲೀಸ್ ವೇಟ್‌ಲಿಫ್ಟಿಂಗ್ ಕ್ಲಸ್ಟರ್ 2025–26ರಲ್ಲಿ ಸ್ಪರ್ಧಿಸಿ ಒಟ್ಟು 145 ಕಿಲೋ ಭಾರ ಎತ್ತುವ ಮೂಲಕ ಕಂಚಿನ ಪದಕವನ್ನು ಗೆದ್ದಿದ್ದಾರೆ. ಇವರ ಈ ಸಾಹಸದ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋನಿಕಾ ಯಾದವ್ ಅವರು ತಮ್ಮ ಅಂತಿಮ ಡೆಡ್‌ಲಿಫ್ಟ್ ಅನ್ನು ಪೂರ್ಣಗೊಳಿಸಿದಾಗ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ಆ ಮೂಲಕ ಅವರು ಧೈರ್ಯ ಮತ್ತು ದೃಢಸಂಕಲ್ಪ ಎಲ್ಲರನ್ನೂ ಬೆರಗುಗೊಳಿಸಿತು.

ಮೇ ತಿಂಗಳಲ್ಲಿ ಸೋನಿಕಾ ಯಾದವ್ ಗರ್ಭಿಣಿ ಎಂದು ತಿಳಿದಾಗ ಅವರು ತಮ್ಮ ವ್ಯಾಯಾಮವನ್ನು ನಿಲ್ಲಿಸುತ್ತಾರೆಂದು ಪತಿ ಭಾವಿಸಿದ್ದರು. ಆದರೆ ಸೋನಿಕಾ ಯಾದವ್ ವೈದ್ಯರ ಮಾರ್ಗದರ್ಶನದೊಂದಿಗೆ ದೃಢ ನಿಶ್ಚಯದಿಂದ ತರಬೇತಿಯನ್ನು ಮುಂದುವರೆಸಿದರು.
ಚಾಂಪಿಯನ್‌ಶಿಪ್‌ನಲ್ಲಿ ಅವರು ಸ್ಕ್ವಾಟ್‌ಗಳಲ್ಲಿ 125 ಕೆಜಿ, ಬೆಂಚ್ ಪ್ರೆಸ್‌ನಲ್ಲಿ 80 ಕೆಜಿ ಮತ್ತು ಡೆಡ್‌ಲಿಫ್ಟ್‌ನಲ್ಲಿ 145 ಕೆಜಿ ಎತ್ತಿ ಅದ್ಭುತ ಪ್ರದರ್ಶನ ನೀಡಿದರು. ಗರ್ಭಾವಸ್ಥೆಯಲ್ಲಿ ತೂಕ ಎತ್ತಿದ್ದ ಲೂಸಿ ಮಾರ್ಟಿನ್ಸ್ ಅವರಿಂದ ತನಗೆ ಸ್ಫೂರ್ತಿ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ. ಸಲಹೆ ಪಡೆಯಲು ಮತ್ತು ಸುರಕ್ಷಿತ ತರಬೇತಿ ವಿಧಾನಗಳನ್ನು ಅನುಸರಿಸಲು ಸೋನಿಕಾ ಇನ್‌ಸ್ಟಾಗ್ರಾಮ್ ಮೂಲಕ ಲೂಸಿ ಅವರನ್ನು ಸಂಪರ್ಕಿಸಿದ್ದರು.
2014ರ ಬ್ಯಾಚ್‌ನ ಕಾನ್‌ಸ್ಟೇಬಲ್ ಆಗಿರುವ ಸೋನಿಕಾ, ಪ್ರಸ್ತುತ ಸಮುದಾಯ ಪೊಲೀಸ್ ಸೆಲ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು, ಅವರು ಮಜ್ನು ಕಾ ತಿಲಾದಲ್ಲಿ ಬೀಟ್ ಅಧಿಕಾರಿಯಾಗಿ ಕೆಲಸ ಮಾಡಿದರು. ಅಲ್ಲಿ ಅವರು ಮಾದಕ ದ್ರವ್ಯ ವಿರೋಧಿ ಅಭಿಯಾನಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಅವರ ಸಾಧನೆಗೆ 2022ರಲ್ಲಿ ದೆಹಲಿ ಪೊಲೀಸ್ ಆಯುಕ್ತರಿಂದ ಗೌರವ ಮತ್ತು ಮಹಿಳಾ ದಿನದಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಂದ ಮೆಚ್ಚುಗೆ ಸೇರಿದಂತೆ ಹಲವು ಮನ್ನಣೆಗಳನ್ನು ಗಳಿಸಿದ್ದಾರೆ.
ವೇಟ್‌ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡುವ ಮೊದಲು, ಸೋನಿಕಾ ಯಾದವ್ ಕಬಡ್ಡಿ ಆಡುತ್ತಿದ್ದರು. ನಂತರ ಅವರು ಪವರ್‌ಲಿಫ್ಟಿಂಗ್ ಪ್ರಯತ್ನಿಸಿದರು. 2023ರ ದೆಹಲಿ ರಾಜ್ಯ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು.


ನಿಮ್ಮ ಕಾಮೆಂಟ್ ಬರೆಯಿರಿ