ಬೆಚ್ಚಿಬೀಳಿಸುವ ಸಿಸಿಟಿವಿ ವೀಡಿಯೊ..| ಪೊಲೀಸ್‌ ಠಾಣೆಯಲ್ಲಿ ಶಿವಸೇನೆ ನಾಯಕನ ಮೇಲೆ ಗುಂಡಿನ ದಾಳಿ; ಬಿಜೆಪಿ ಶಾಸಕನ ಬಂಧನ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಶಿವಸೇನಾ ಬಣದ ಮುಖಂಡನ ಮೇಲೆ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಹಿಲ್‌ಲೈನ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಉಲ್ಲಾಸನಗರ ಪ್ರದೇಶದ ಹಿಲ್‌ಲೈನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ನ ಕೊಠಡಿಯೊಳಗೆ ಶಿವಸೇನಾ ನಾಯಕ ಮಹೇಶ ಗಾಯಕ್ವಾಡ ಅವರ ಮೇಲೆ ಕಲ್ಯಾಣ ಕ್ಷೇತ್ರದ ಬಿಜೆಪಿಯ ಶಾಸಕ ಗಣಪತ್ ಗಾಯಕ್ವಾಡ್ ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ ಆರೋಪದ ಮೇರೆ ಅವರನ್ನು ಬಂಧಿಸಲಾಗಿದೆ.
ಮಹೇಶ್ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಥಾಣೆಯ ಖಾಸಗಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೇರವೇರಿದೆ ಎಂದು ಶಿವಸೇನಾ ಶಿಂಧೆ  ಬಣದ ನಾಯಕ ಗೋಪಾಲ ಲಂಡ್ಗೆ ಹೇಳಿದ್ದಾರೆ.

ಭೂ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಗಣಪತ್ ಗಾಯಕ್ವಾಡ್ ಅವರ ಪುತ್ರ ಠಾಣೆಗೆ ತೆರಳಿದ್ದರು. ಗಣಪತ್ ಗಾಯಕ್ವಾಡ್ ಕೂಡ ಆಗಮಿಸಿದ್ದರು. ಮಹೇಶ ಗಾಯಕ್ವಾಡ್ ಸಹ ತನ್ನ ಬೆಂಬಲಿಗರೊಂದಿಗೆ ಬಂದಿದ್ದರು. ಈ ವೇಳೆ ನಡೆದ ವಾಗ್ವಾದದಲ್ಲಿ ಇನ್‌ಸ್ಪೆಕ್ಟರ್ ಕೊಠಡಿಯೊಳಗೆ ಮಹೇಶ ಅವರ ಮೇಲೆ ಗಣಪತ್ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯಲ್ಲಿ ಮಹೇಶ ಸಹಚರ ಸಹ ಗಾಯಗೊಂಡಿದ್ದಾರೆ. ಪ್ರಕರಣದಲ್ಲಿ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದೇನೆ…
ಪೊಲೀಸ್ ಠಾಣೆಯೊಳಗೆ ನನ್ನ ಮಗನನ್ನು ಥಳಿಸಿದ ನಂತರ ಆತ್ಮರಕ್ಷಣೆಗಾಗಿ ಶಿವಸೇನೆ ನಾಯಕನ ಮೇಲೆ ಗುಂಡು ಹಾರಿಸಿದ್ದೇನೆ ಮತ್ತು ನನಗೆ ಈ ಬಗ್ಗೆ ಯಾವುದೇ ವಿಷಾದವಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ ಹೇಳಿದ್ದಾರೆ..
ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಸೇರಿದ ಮಹೇಶ ಗಾಯಕ್ವಾಡ ಹಾಗೂ ಮತ್ತೊಬ್ಬ ಬೆಂಬಲಿಗ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದಾರೆ.
“ಹೌದು, ನಾನೇ (ಅವನಿಗೆ) ಗುಂಡು ಹಾರಿಸಿದ್ದೇನೆ. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ಪೊಲೀಸ್ ಠಾಣೆಯೊಳಗೆ ಪೊಲೀಸರ ಮುಂದೆ ನನ್ನ ಮಗನನ್ನು ಹೊಡೆಯುತ್ತಿದ್ದರೆ, ನಾನೇನು ಮಾಡಬೇಕು” ಎಂದು ಗಣಪತ್‌ ಗಾಯಕ್ವಾಡ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಅವರ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಗಣಪತ್ ಗಾಯಕ್ವಾಡ್ ಕೂಡ ಮುಖ್ಯಮಂತ್ರಿಯ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದರು ಮತ್ತು ಅವರು “ಮಹಾರಾಷ್ಟ್ರದಲ್ಲಿ ಅಪರಾಧಿಗಳ ಸಾಮ್ರಾಜ್ಯವನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದರು.
“ಶಿಂಧೆ ಸಾಹೇಬರು ಉದ್ಧವ್ (ಠಾಕ್ರೆ) ಸಾಹೇಬ್‌ಗೆ ದ್ರೋಹ ಮಾಡಿದ್ದಾರೆ, ಅವರು ಬಿಜೆಪಿಗೆ ದ್ರೋಹ ಮಾಡುತ್ತಾರೆ. ಮಹಾರಾಷ್ಟ್ರ ಉತ್ತಮವಾಗಿ ಇರಬೇಕಾದರೆ ಶಿಂಧೆ ರಾಜೀನಾಮೆ ನೀಡಬೇಕು. ಇದು ದೇವೇಂದ್ರ ಫಡ್ನವಿಸ್ (ಉಪ ಮುಖ್ಯಮಂತ್ರಿ) ಮತ್ತು ಪ್ರಧಾನಿಯವರಿಗೆ ನನ್ನ ವಿನಮ್ರ ವಿನಂತಿ. ಎಂದು ಅವರು ಹೇಳಿರುವುದಾಗಿ ವರದಿಗಳು ತಿಳಿಸಿವೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement