ಯತ್ನಾಳ ಉಚ್ಚಾಟನೆ ಆದೇಶ ಏ.10ರೊಳಗೆ ಹಿಂಪಡೆಯಿರಿ, ಇಲ್ಲದಿದ್ದರೆ ಪ್ರತಿಭಟನೆ : ಬಿಜೆಪಿಗೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಬೆಳಗಾವಿ: ಏಪ್ರಿಲ್‌ 10ರ ಒಳಗೆ ಬಸನಗೌಡ ಪಾಟೀಲ ಯತ್ನಾಳ​ ಅವರ ಉಚ್ಚಾಟನೆ ಮಾಡಿರುವ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಏಪ್ರಿಲ್‌ 13ರಂದು‌ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಿಜೆಪಿ ಹೈಕಮಾಂಡ್​ಗೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಶಿಸ್ತುಪಾಲನಾ ಸಮಿತಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ​ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದನ್ನು ಬೆಳಗಾವಿಯ ಗಾಂಧಿ ಭವನದಲ್ಲಿ ಗುರುವಾರ ಪಂಚಮಸಾಲಿ ಮುಖಂಡರು ಗುರುವಾರ ಸಭೆ ನಡೆಸಿದರು.
ಸಭೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದು ಉತ್ತರ ಕರ್ನಾಟಕದ “ಹಿಂದುತ್ವ ಪರ” ಮತ್ತು “ಅಭಿವೃದ್ಧಿ ಪರ” ಇರುವ ನಾಯಕರನ್ನು ನಿಗ್ರಹಿಸುವ ಪಿತೂರಿಯಾಗಿದೆ ಎಂದು ಹೇಳಿದ್ದಾರೆ.

ಪಂಚಮಸಾಲಿ ಮೀಸಲಾತಿ ಹೋರಾಟದ ರಾಷ್ಟ್ರೀಯ ಅಧ್ಯಕ್ಷ, ಹಿಂದೂ ಫೈರ್ ಬ್ರ್ಯಾಂಡ್ ಯತ್ನಾಳ ಅವರನ್ನು ಬಿಜೆಪಿ ಉಚ್ಚಾಟಿಸಿದೆ. ಯಡಿಯೂರಪ್ಪ, ಬಿ ವೈ ವಿಜಯೇಂದ್ರ ಕುತಂತ್ರದಿಂದ ಉಚ್ಚಾಟನೆ ಮಾಡಲಾಗಿದೆ. ಇದನ್ನು ಇಡೀ ಪಂಚಮಸಾಲಿ ಸಮುದಾಯ ಖಂಡಿಸುತ್ತದೆ ಎಂದು ಹೇಳಿದರು.
ಲಿಂಗಾಯತ ಸಮುದಾಯ ಕಡೆಗಣಿಸಿ ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜನತಾದಳ ಇಬ್ಭಾಗವಾದಾಗ ನಮ್ಮ ಸಮಾಜ ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿತ್ತು. ಆದರೆ, ಇದೇ ಯಡಿಯೂರಪ್ಪ ನಮ್ಮ ಸಮಾಜದ ಮೀಸಲಾತಿ ಹೋರಾಟ ಹತ್ತಿಕ್ಕಿದ್ದರು. ಈಗ ಯತ್ನಾಳ​ ಲಿಂಗಾಯತ ನಾಯಕರಾಗಿ ಹೊಮ್ಮುತ್ತಿದ್ದರು ಎಂಬ ಕಾರಣಕ್ಕೆ ಕುತಂತ್ರ ಮಾಡಿ ಅವರನ್ನು ಉಚ್ಚಾಟನೆ ಮಾಡಿಸಿದ್ದಾರೆ ಎಂದು ಹೇಳಿದರು.
ಯತ್ನಾಳ ಅವರ​ ಹಲವು ಸಮುದಾಯಗಳ ಜನರಿದ್ದಾರೆ. ಮೀಸಲಾತಿ ಹೋರಾಟ ಹತ್ತಿಕ್ಕುವ ಕೆಲಸವನ್ನು ಹಿಂದಿನ ಬಿಜೆಪಿ ಸರ್ಕಾರ ಮಾಡಿತು. ಅದಕ್ಕಾಗಿ ನಮ್ಮ ಸಮಾಜ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ನಿಂತಿತ್ತು. ಆದರೆ, ಈ ಸರ್ಕಾರ ಮೀಸಲಾತಿ ನೀಡದೇ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿಸಿತು. ಅನೇಕರು ಸಮಾಜದ ಹೆಸರು ಹೇಳಿ ಅಧಿಕಾರ ಬಂದ ಮೇಲೆ ಕೈಕೊಟ್ಟರು. ಆದರೆ ಯತ್ನಾಳ ಅವರು ಪಂಚಮಸಾಲಿ ಮೀಸಲಾತಿ ಹೋರಾಟ ಕೈ ಬಿಡಲಿಲ್ಲ. ಆದರೆ, ಕುತಂತ್ರದಿಂದ ಏಕಾಏಕಿ ಯತ್ನಾಳರನ್ನು ಉಚ್ಚಾಟನೆ ಮಾಡಲಾಗಿದೆ. ಹೀಗಾಗಿ ಅವರ ಬೆನ್ನಿಗೆ ಸಮಾಜ ನಿಲ್ಲಬೇಕಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಏಪ್ರಿಲ್‌ 10ರೊಳಗೆ ಉಚ್ಚಾಟನೆ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ 13ರಂದು‌ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಭಾರೀ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ತತ್ತರ ; ಬುಲ್ಡೋಜರ್‌ ನಲ್ಲಿ ಪರಿಸ್ಥಿತಿ ವೀಕ್ಷಿಸಿದ ಶಾಸಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement