ಬ್ಯಾಡಗಿ: ಸಾಲ ನೀಡಲಿಲ್ಲವೆಂದು ಬ್ಯಾಂಕಿಗೇ ಬೆಂಕಿ ಇಟ್ಟ ಭೂಪ..!

ಹಾವೇರಿ: ಸಾಲ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಬ್ಯಾಂಕ್‍ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಗರದ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ನಡೆದಿದೆ.
ವಸೀಮ್ (33) ಬೆಂಕಿ ಹಚ್ಚಿದ ಆರೋಪಿ. ವಸೀಮ್ ರಟ್ಟೀಹಳ್ಳಿ ನಿವಾಸಿಯಾಗಿದ್ದು, ಬೆಳಗ್ಗಿನ ಜಾವ ಕೆನರಾ ಬ್ಯಾಂಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬ್ಯಾಂಕಿನಲ್ಲಿದ್ದ ಕಾಗದ ಪತ್ರಗಳು ಹಾಗೂ ನಗದು ಹಣ ಸುಟ್ಟು ಕರಕಲಾಗಿವೆ.
ಗ್ರಾಮಸ್ಥರು ಆರೋಪಿಯನ್ನು ಹಿಡಿದು ಧರ್ಮದೇಟು ನೀಡಿದ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಬ್ಯಾಂಕಿನ ಮ್ಯಾನೇಜರ್ ತನಗೆ ಲೋನ್ ಕೊಡಲಿಲ್ಲ ಎಂಬ ಕಾರಣಕ್ಕೆ ವಸೀಮ್ ಬೆಳಗಿನ ಜಾವ ಹೆಡಿಗ್ಗೊಂಡ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್​​ಗೆ ಬೆಂಕಿ ಹಚ್ಚಿ ಪರಾರಿಯಾಗಲು ಯತ್ನಿಸಿದ್ದಾನೆ. ಬೆಂಕಿ ಹಚ್ಚಿ ಕಟ್ಟಡದ ಮೇಲಿಂದ ಜಿಗಿದು ಹೋಗಲು ಯತ್ನಿಸುತ್ತಿದ್ದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಗಿನೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement