ಹೈದರಾಬಾದ್: ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಬಯ್ಯಾರಂನ ಸ್ಥಳೀಯ ಶಾಲೆಯೊಂದರಲ್ಲಿ ಮೂರನೇ ತರಗತಿಯ ವಿದ್ಯಾರ್ಥಿ ಎಂಟು ವರ್ಷದ ಬಾಲಕ, ತನ್ನ ಶಿಕ್ಷಕನ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ..!
ಬಯ್ಯಾರಂನಲ್ಲಿರುವ ಖಾಸಗಿ ಶಾಲೆಯ IIIನೇ ತರಗತಿ ವಿದ್ಯಾರ್ಥಿ ತನ್ನ ಗಣಿತ ಶಿಕ್ಷಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಸಂಪರ್ಕಿಸುವ ಮೂಲಕ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾನೆ.
ಶಿಕ್ಷಕ ತನಗೆ ಪದೇ ಪದೇ ಥಳಿಸುತ್ತಾರೆ ಎಂದು ಆರೋಪಿಸಿರುವ ಬಾಲಕ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಶನಿವಾರ ಮಂಡಲ ಕೇಂದ್ರ ಪಟ್ಟಣದ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅವರಿಗೆ ಹೇಳಿದ್ದಾನೆ.
ಬಾಲಕ ತನ್ನ ಶಾಲೆಯ ಗಣಿತ ಶಿಕ್ಷಕರ ವಿರುದ್ಧ ದೂರು ದಾಖಲಿಸಲು ಕೋರಿ ಬಯ್ಯಾರಂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಮಾ ದೇವಿ ಅವರನ್ನು ಸಂಪರ್ಕಿಸಿದ್ದಾನೆ.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೂಡಲೇ ಸಂಬಂಧಪಟ್ಟ ಶಿಕ್ಷಕರನ್ನು ಠಾಣೆಗೆ ಕರೆಸಿ ವಿವರಣೆ ಕೇಳಿದ್ದಾರೆ. ಯೋಗದ ಸಮಯದಲ್ಲಿ ಕಣ್ಣು ತೆರೆದಿದ್ದಕ್ಕಾಗಿ ಹುಡುಗನಿಗೆ ಬೈಯ್ದಿದ್ದೇನೆ ಮತ್ತು ಪಾಠದತ್ತ ಗಮನ ಹರಿಸುವಂತೆ ಹೇಳಿದ್ದೇನೆ ಎಂದು ಶಿಕ್ಷಕರು ಪೊಲೀಸರಿಗೆ ತಿಳಿಸಿದ್ದಾರೆ. ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡ ಹೇರದಂತೆ ಪೊಲೀಸರು ಶಿಕ್ಷಕರಿಗೆ ಸಲಹೆ ನೀಡಿದರು.
ಪೊಲೀಸರ ಪ್ರಕಾರ, ವಿದ್ಯಾರ್ಥಿ ಶನಿವಾರ ಧ್ಯಾನ ತರಗತಿಗೆ ಹಾಜರಾಗಿದ್ದನು ಮತ್ತು ಅವನು ಇತರರಿಗೆ ತೊಂದರೆ ನೀಡಿದಾಗ, ಅವನ ಶಿಕ್ಷಕರು ಶಿಕ್ಷೆಯ ಎಚ್ಚರಿಕೆ ನೀಡಿದರು. ಊಟದ ವಿರಾಮದ ವೇಳೆ ವಿದ್ಯಾರ್ಥಿ ಶಾಲೆಯಿಂದ 200 ಮೀಟರ್ ದೂರದಲ್ಲಿರುವ ಬಯ್ಯಾರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸುವಂತೆ ಬಾಲಕ ಬಯ್ಯಾರಂ ಎಸ್‌ಐ ಎಂ.ರಮಾದೇವಿ ಅವರನ್ನು ಕೋರಿದ್ದಾನೆ. ‘ದೂರು’ ಸಹಿತ ಪೊಲೀಸ್ ಠಾಣೆಯಲ್ಲಿ ಮಗುವನ್ನು ನೋಡಿ ಆಶ್ಚರ್ಯವಾಯಿತು ಎಂದು ಎಸ್‌ಐ ತಿಳಿಸಿದರು. ಆದರೆ, ಪೊಲೀಸರಿಗೆ ಶಿಕ್ಷಕ ಬಾಲಕನಿಗೆ ಎಚ್ಚರಿಕೆ ನೀಡಿರುವುದು ಮಾತ್ರ ಕಂಡುಬಂದಿದೆ.
ತನ್ನ ಕುಂದುಕೊರತೆಗಳನ್ನು ನಿರ್ಭಯವಾಗಿ ಹಾಗೂ ಸ್ವತಂತ್ರವಾಗಿ ಪೊಲೀಸರಿಗೆ ತಿಳಿಸುವಲ್ಲಿ ಧೈರ್ಯ ತೋರಿದ ಹುಡುಗನನನ್ನು ಶ್ಲಾಘಿಸಿದರು, ಅಲ್ಲದೆ ಅಲ್ಲದೆ, ಬಾಲಕ ಠಾಣೆಗೆ ಆಗಮಿಸುವಾಗ ಮಾಸ್ಕ್ ಧರಿಸಿ ಕೊರೊನಾ ನಿಯಮಗಳನ್ನು ಪಾಲಿಸಿದ್ದಾನೆ. ಇದೀಗ ಈ ಘಟನೆ ಮೆಹಬೂಬಬಾದ್ ಜಿಲ್ಲೆಯಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಇದು ಜನಸ್ನೇಹಿ ಪೋಲೀಸಿಂಗ್ ಮೂಲಕ ಜನರಲ್ಲಿ ಪೊಲೀಸರು ತುಂಬಿದ ವಿಶ್ವಾಸಕ್ಕೆ ಕಾರಣವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ