ವಿಜಯಪುರ: ಜಿಲ್ಲೆಯ ಚಡಚಣ ಎಸ್ಬಿಐ ಬ್ಯಾಂಕ್ ದರೋಡೆ (SBI Robbery) ಪ್ರಕರಣದಲ್ಲಿ ದೋಚಿದ್ದ ಚಿನ್ನಾಭರಣ ಪತ್ತೆ ಹಚ್ಚುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ, ದರೋಡೆಗೆ ಬಳಿಸಿದ ವಾಹನದಲ್ಲೂ ಸ್ವಲ್ಪ ಹಣ, ಚಿನ್ನಾಭರಣ ಪತ್ತೆಯಾಗಿದೆ.
ವಿಜಯಪುರ ಮತ್ತು ಮಹಾರಾಷ್ಟ್ರ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಇದು ಸಾಧ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಕಳೆದ 16 ರಂದು ಸಂಜೆ 6ರ ಸುಮಾರಿಗೆ ನಡೆದ ದರೋಡೆ ಪ್ರಕರಣದಲ್ಲಿ ಐವರು ದರೋಡೆಕೋರರ ತಂಡವು ಪಿಸ್ತೂಲ್ ತೋರಿಸಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪರಾರಿಯಾಗುವ ವೇಳೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವಾಡೆ ತಾಲೂಕಿನ ಹುಲ್ಲಜಂತಿ ಗ್ರಾಮದಲ್ಲಿ ದರೋಡೆಕೊರರ ವಾಹನ ಬೈಕ್ ಒಂದಕ್ಕೆ ಡಿಕ್ಕಿಯಾಗಿ ಗಲಾಟೆ ಸ್ಥಳೀಯರ ಜೊತೆ ಜಗಳವಾಡಿದ್ದರು. ಆಗ ವಾಹನವನ್ನು ಅಲ್ಲೆ ಬಿಟ್ಟು ದರೋಡೆಕೋರರು ನಗದು, ಚಿನ್ನಾಭರಣದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದರು. ಅವರು ಹೋಗುವಾಗ ವಾಹನದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣದ ಪ್ಯಾಕೆಟ್ ಸಿಕ್ಕಿದ್ದವು. ಅವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈಗ ಮತ್ತೊಂದು ಬ್ಯಾಗ್ ಪತ್ತೆಯಾಗಿದೆ ಎಂದು ತಿಳಿಸಿದರು.
ಗುರುವಾರ (ಸೆಪ್ಟೆಂಬರ್ 18) ಮಧ್ಯಾಹ್ನ ಮಹಾರಾಷ್ಟ್ರ ಪೊಲೀಸರು ಹಾಗೂ ವಿಜಯಪುರ ಪೊಲೀಸರು ಹುಲ್ಲಜಂತಿ ಗ್ರಾಮದಲ್ಲಿ ಸಭೆ ನಡೆಸಿದ ಗ್ರಾಮಸ್ಥರಲ್ಲಿ ದರೋಡೆಕೋರರು ಹಾಗೂ ಕಳ್ಳತನ ಬ್ಯಾಗ್ಗಳ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿದ್ದರು. ನಂತರ ಪೊಲೀಸರು ಹುಲ್ಲಜಂತಿ ಗ್ರಾಮದ ತೀವ್ರ ಶೋಧ ಕಾರ್ಯ ಮಾಡಿದ್ದರು ಹಾಗೂ ಗ್ರಾಮಕ್ಕೆ ನಾಕಾಬಂದಿ ಮಾಡಿದ್ದರು. ಶೋಧ ಕಾರ್ಯಾಚರಣೆಯಲ್ಲಿ ಗ್ರಾಮದ ಒಂದು ಪಾಳುಬಿದ್ದ ಮನೆಯ ಮೇಲ್ಛಾವಣಿಯಲ್ಲಿ ಒಂದು ಬ್ಯಾಗ್ ಪತ್ತೆಯಾಗಿದೆ. ಪತ್ತೆಯಾದ ಬ್ಯಾಗ್ನಲ್ಲಿ ಒಟ್ಟು 6.540 ಕೆ.ಜಿ. ಚಿನ್ನ ಮತ್ತು 41.04 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.
ದರೋಡೆಕೋರರು ಬ್ಯಾಂಕ್ನಿಂದ ಸುಮಾರು 20 ಕೆ.ಜಿ. ಚಿನ್ನ ಮತ್ತು 1.4 ಕೋಟಿ ರೂಪಾಯಿ ನಗದು ದರೋಡೆ ಮಾಡಿದ್ದರು ಎಂದು ಅಂದಾಜಿಸಲಾಗಿದೆ. ಈಗ ಪತ್ತೆಯಾದದ್ದು ಕೇವಲ ಒಂದು ಬ್ಯಾಗ್ ಮಾತ್ರ. ಇನ್ನೂ ಎರಡು ಬ್ಯಾಗ್ಗಳು ದರೋಡೆಕೋರರ ಬಳಿ ಇರುವ ಶಂಕೆ ಇದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಪೊಲೀಸರ 8 ತಂಡಗಳನ್ನು ರಚಿಸಿ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ