ಸಿಎಂ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ವಿರುದ್ಧ ಮುಂಡಗೋಡು ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.
ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಅನಂತ ಕುಮಾರ ಹೆಗಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಈ ತಡೆ ನೀಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ಅರ್ಜಿದಾರರ ಪರ ವಕೀಲ ಎಚ್‌ ಪವನಚಂದ್ರ ಶೆಟ್ಟಿ ಅವರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ಮುಂಡಗೋಡು ಠಾಣಾ ಪೊಲೀಸರು ಮತ್ತು ದೂರುದಾರ ಕಾನ್‌ಸ್ಟೆಬಲ್‌ ಗಣಪತಿ ಬಸವಂತಪ್ಪ ಹುನ್ನಳ್ಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಪಾಳಾ ಮತ್ತು ಇಂದೂರ ಗ್ರಾಮದಲ್ಲಿ 2024ರ ಫೆಬ್ರವರಿ 23ರಂದು ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಅನಂತ ಕುಮಾರ ಹೆಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ “ಸಿದ್ರಾಮುಲ್ಲಾ ಖಾನ್‌ ಅತ್ಯಂತ ಹೇಸಿಗೆ ಬರುವ ರೀತಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವಲ್ಲಿ ನಿರತರಾಗಿದ್ದಾರೆ. ಇಂತಹ ಸರ್ಕಾರವನ್ನು ನಾವೆಲ್ಲೂ ನೋಡಿಲ್ಲ. ಇವರ ಕೈಯಲ್ಲಿ ಅಧಿಕಾರ ಕೊಟ್ಟರೆ ನಮ್ಮನ್ನು ಮಾರಾಟ ಮಾಡುತ್ತಾರೆ. ಹಿಂದೂಗಳ ದೇವಸ್ಥಾನದ ಹುಂಡಿಗೆ ಹಾಕಿದ ಹಣವನ್ನು, ಚರ್ಚ್‌, ಮಸೀದಿಗೆ ಕೊಡುತ್ತಾರೆ. ಹಿಂದೂಗಳ ದೇವಸ್ಥಾನದಲ್ಲಿ ದೇವರಿಲ್ಲವೇ?” ಎಂದು ‍ಪ್ರಶ್ನಿಸಿದ್ದರು.

ಪ್ರಮುಖ ಸುದ್ದಿ :-   ಮೇ 7ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ?

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಆ ಮೂಲಕ ಶಾಂತಿ-ಸೌರ್ಹದ ಕದಡುವ, ಜಾತಿ, ಧರ್ಮಗಳ ನಡುವೆ ದ್ವೇಷ ಹರಡವು, ಕಾನೂನು ಸುವ್ಯವಸ್ಥೆಗೆ ಭಂಗ ತರುವ ರೀತಿಯಲ್ಲಿ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಸಂಸದ ಅನಂತ ಕುಮಾರ ಹೆಗಡೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪ್ರಧಾನ ಜಿಲ್ಲಾ (ಕಿರಿಯ ಶ್ರೇಣಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.
ಮತ್ತೊಂದು ಪ್ರಕರಣ: ಉತ್ತರ ಕನ್ನಡ ಜಿಲ್ಲೆಯ ತೆಂಗಿನಗುಂಡಿ ಬಂದರಿನಲ್ಲಿ 2024ರ ಜನವರಿ 21ರಂದು ಮತ್ತು 30ರಂದು ಅನಧಿಕೃತವಾಗಿ ಧ್ವಜದ ಕಟ್ಟೆ ಕಟ್ಟಿದ ಮತ್ತು ಆ ಕಟ್ಟೆಗೆ ವೀರ ಸಾವರ್ಕರ್‌ ಎಂಬ ನಾಮಫಲಕ ಅಳವಡಿಸಿ, ಧ್ವಜಸ್ತಂಭಕ್ಕೆ ಭಗವಾಧ್ವಜ ಅಳವಡಿಸಲಾಗಿದೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಅನಂತ ಕುಮಾರ ಹೆಗಡೆ ವಿರುದ್ಧ ಭಟ್ಕಳ ಗ್ರಾಮಾಂತರ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠ ಶುಕ್ರವಾರ ತಡೆ ನೀಡಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement