ಕಳೆದ ವರ್ಷ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಮಹಿಳಾ ಮ್ಯಾಜಿಸ್ಟ್ರೇಟ್‌ಗೆ ಬೆದರಿಕೆ ಹಾಕಿದ್ದಕ್ಕಾಗಿ ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದ ನ್ಯಾಯಾಲಯವು ಸೋಮವಾರ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಸೋಮವಾರ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ. ಖಾತೂನ್ ನ್ಯಾಯಾಧೀಶರಾದ ಝೇಬಾ ಚೌಧರಿ ಅವರಿಗೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಧೀಶರ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ವಾರಂಟ್ ಹೊರಡಿಸಿದೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಇಂದು, ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ, ಇಮ್ರಾನ್ ಖಾನ್ ಅವರು ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಕೋರಿ ಮನವಿ ಸಲ್ಲಿಸಿದರು. ಜಿಯೋ ನ್ಯೂಸ್‌ನ ವರದಿಯ ಪ್ರಕಾರ ನ್ಯಾಯಾಲಯವು ಇಮ್ರಾನ್ ಖಾನ್ ಅವರ ಮನವಿಯನ್ನು ತಿರಸ್ಕರಿಸಿತು ಮತ್ತು ಬಂಧನ ವಾರಂಟ್ ಹೊರಡಿಸಿತು.
ಕೋರ್ಟ್ ಆದೇಶದಲ್ಲಿ ಇಮ್ರಾನ್ ಖಾನ್ ಅವರನ್ನು ಮಾರ್ಚ್ 29 ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ತಿಳಿಸಲಾಗಿದೆ.
ಇಮ್ರಾನ್ ಖಾನ್ ಏನು ಹೇಳಿದ್ದರು..?
ಕಳೆದ ವರ್ಷ ಆಗಸ್ಟ್‌ನಲ್ಲಿ, ಇಮ್ರಾನ್ ಖಾನ್ ಅವರು ತಮ್ಮ ವಿಶೇಷ ಸಹಾಯಕ ಶಹಬಾಜ್ ಗಿಲ್ ಅವರೊಂದಿಗೆ ರಾಜಕೀಯ ರ್ಯಾಲಿಯನ್ನು ನಡೆಸಿದರು, ಕಸ್ಟಡಿಯಲ್ಲಿ ತನಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಆ ಭಾಷಣದ ಸಮಯದಲ್ಲಿ, ಇಮ್ರಾನ್ ಖಾನ್ ನ್ಯಾಯಾಧೀಶರಾದ ಝೇಬಾ ಚೌಧರಿ ಅವರಿಗೆ ಬೆದರಿಕೆ ಹಾಕಿದರು ಎಂದು ಆರೋಪಿಸಲಾಗಿದೆ. ಇಮ್ರಾನ್ ಖಾನ್ ಅವರ ಹೇಳಿಕೆಯ ನಂತರ, ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು.
ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 186 (ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ನೌಕರನಿಗೆ ಅಡ್ಡಿಪಡಿಸುವ ಅಪರಾಧ), 188 (ಸಾರ್ವಜನಿಕ ಸೇವಕ ಪ್ರಕಟಿಸಿದ ಆದೇಶಕ್ಕೆ ಅವಿಧೇಯತೆ), 504 (ಅಪರಾಧ ಬೆದರಿಕೆ) ಮತ್ತು 506 (ಅಪರಾಧ ಬೆದರಿಕೆಗೆ ಶಿಕ್ಷೆ) ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
ನಂತರ, ಇಮ್ರಾನ್ ಖಾನ್, ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅಫಿಡವಿಟ್‌ನಲ್ಲಿ, “ತಾವು ಮಿತಿಯ ಗೆರೆ ದಾಟಿರಬಹುದು” ಎಂದು ಒಪ್ಪಿಕೊಂಡರು ಮತ್ತು ನ್ಯಾಯಾಧೀಶರಲ್ಲಿ ಕ್ಷಮೆಯಾಚಿಸಲು ಇಚ್ಛೆ ವ್ಯಕ್ತಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಅವರಿಗೆ ಇಂದು, ಸೋಮವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿತ್ತು. ಅವರ ಗೈರುಹಾಜರಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್‌ಗೆ ಆದೇಶಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ