ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 3ರ ವರೆಗೆ ಮಳೆ : ಮುನ್ಸೂಚನೆ

ಬೆಂಗಳೂರು : ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿಯಲ್ಲಿ ಮಧ್ಯಮ ಸ್ತರದಲ್ಲಿ ಉಂಟಾಗಿರುವ ವಾಯುಭಾರ ತಿರುವಿನ ಪ್ರಭಾವದಿಂದ, ದಕ್ಷಿಣ ಬಾರತದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ, ತೆಲಂಗಾಣ, ಆಂಧ್ರ ಮತ್ತು ಕೇರಳದ ಕೆಲವು ಪ್ರದೇಶಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಅಥವಾ ಅಲ್ಲಲ್ಲಿ ಚದುರಿದ ಮಳೆ ಆಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಕರ್ನಾಟಕದ ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ 3ರ ವರೆಗೆ ಬಿಟ್ಟು ಬಿಟ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ವಿಶೇಷವಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿಜಿಲ್ಲೆಗಳ ಕರಾವಳಿ ತೀರ ಭಾಗಗಳಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮಳೆಯ ಹೆಚ್ಚಿರುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಸೆಪ್ಟೆಂಬರ್ 3ರ ತನಕ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹೇಳಿದೆ.

ಮಲೆನಾಡಿನ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಎರಡು ಮೂರು ದಿನ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ. ಶಿವಮೊಗ್ಗ ಜಿಲ್ಲೆಯ ಕೆಲವು ಕಡೆ ಸಾಮಾನ್ಯ ಮಳೆಯಾಗಬಹುದು. ಸೆಪ್ಟೆಂಬರ್ 2 ಹಾಗೂ 3ರಂದು ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳಿವೆ. ಸೆಪ್ಟೆಂಬರ್ 3ರ ಬಳಿಕ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಉತ್ತರ ಒಳನಾಡಿನ ಭಾಗಗಳಲ್ಲಿ ಮಳೆ ಚುರುಕಾಗುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಯಲ್ಲಾಪುರ : ಸಾರಿಗೆ ಸಂಸ್ಥೆ ಬಸ್-ಮಿನಿ ಬಸ್ ಡಿಕ್ಕಿ : 10 ಮಂದಿಗೆ ಗಾಯ

ಉತ್ತರ ಒಳನಾಡಿನ ಗದಗ ಮತ್ತು ಬಳ್ಳಾರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಬೆಳಗಾವಿ, ಧಾರವಾಡ,ಹಾವೆೇರಿ, ಬಾಗಲಕೋಟೆ, ಬೀದರ, ಗದಗ, ಕಲಬರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ , ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆ ಸುರಿಯುವ ಸಾಧ್ಯತೆಯಿದೆ. ಸೆಪ್ಟೆಂಬರ್ 2ರಿಂದ ದಕ್ಷಿಣ ಒಳನಾಡಿನ ಹಲವೆಡೆ ಮಳೆ ಚುರುಕಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement