ಕರ್ನಾಟಕ ಹೈಕೋರ್ಟ್​ನ 6 ಮಂದಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ

ಬೆಂಗಳೂರು : ಕರ್ನಾಟಕ ಹೈಕೋರ್ಟ್‌ನ ಆರು ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆಯ ಸಂದೇಶ ಬಂದಿದ್ದು, ಬೆದರಿಕೆ ಹಾಕಿರುವವರು 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಹಾಗೂ ಅದನ್ನು ಪಾಕಿಸ್ತಾನದ ಬ್ಯಾಂಕ್‌ ಅಕೌಂಟ್‌ಗೆ ಹಾಕಿ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಕೊಲೆ ಬೆದರಿಕೆ ಹಿಂದೆ ಪಾಕಿಸ್ತಾನದ ಕೈವಾಡದ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೈಕೋರ್ಟ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಕೆ ಮುರಳೀಧರ ಅವರ ಅಧಿಕೃತ ವಾಟ್ಸ್‌ಆಪ್‌ ಸಂಖ್ಯೆಗೆ ಸಂದೇಶವನ್ನು ಕಳುಹಿಸುವ ಮೂಲಕ ಅಪರಿಚಿತ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾನೆ. ಹಾಗೂ ಪಾಕಿಸ್ತಾನದ ಅಲೈಡ್‌ ಬ್ಯಾಂಕ್‌ ಲಿಮಿಟೆಡ್‌ನಲ್ಲಿರುವ ಬ್ಯಾಂಕ್‌ ಖಾತೆಗೆ 50 ಲಕ್ಷ ರೂ. ಅನ್ನು ಜಮೆ ಮಾಡುವಂತೆ ಜುಲೈ 12ರಂದು ವಾಟ್ಸ್‌ಆಪ್‌ಗೆ ಸಂದೇಶ ಕಳುಹಿಸಿ ಬೇಡಿಕೆ ಇಟ್ಟಿದ್ದಾನೆ.
ದುಬೈ ಗ್ಯಾಂಗ್ ಮೂಲಕ ಆರು ಹೈಕೋರ್ಟ್‌ ನ್ಯಾಯಾಧೀಶರನ್ನು ಕೊಲ್ಲುವುದಾಗಿ ವಾಟ್ಸ್‌ಆಪ್‌ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಮುರಳೀಧರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಹಣ ಹಾಕದಿದ್ದರೆ ದುಬೈ ಸುಪಾರಿ ಹಂತಕರ ಮೂಲಕ ಅವರನ್ನು ಹತ್ಯೆ ಮಾಡಿಸುವುದಾಗಿ ಹಿಂದಿ, ಉರ್ದು, ಇಂಗ್ಲಿಷ್​ ಭಾಷೆಗಳಲ್ಲಿ ಸಂದೇಶ ಕಳುಹಿಸಲಾಗಿದೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಮೊಹಮ್ಮದ್‌ ನವಾಜ್‌, ಎಚ್‌.ಟಿ. ನರೇಂದ್ರ ಪ್ರಸಾದ, ಅಶೋಕ ಜಿ. ನಿಜಗಣ್ಣವರ್‌, ಎಚ್‌.ಪಿ. ಸಂದೇಶ, ಕೆ ನಟರಾಜನ್‌ ಹಾಗೂ ಬಿ ವೀರಪ್ಪ ಅವರ ಹೆಸರನ್ನು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ಹೈಕೋರ್ಟ್‌ ಪಿಆರ್‌ಒ ಕೆ ಮುರಳೀಧರ ಅವರ ದೂರನ್ನು ಆಧರಿಸಿ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜುಲೈ 12 ರಂದು ಹೈಕೋರ್ಟ್ ಪಿಆರ್‌ಒಗೆ ಕೊಲೆ ಬೆದರಿಕೆ ಸಂದೇಶ ಬಂದಿದ್ದು, ಜುಲೈ 14 ರಂದು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement