ಮುಂಬೈ: ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಅಜಿತ ಪವಾರ್, ಪಕ್ಷ ತೊರೆದು ಹಲವಾರು ಶಾಸಕರ ಬೆಂಬಲದೊಂದಿಗೆ ಇಂದು, ಭಾನುವಾರ ಏಕನಾಥ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಅಜಿತ ಪವಾರ್ ಅವರ ಜೊತೆ, ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ, ಅದಿತಿ ತತ್ಕರೆ, ಧನಂಜಯ್ ಮುಂಡೆ, ಹಸನ್ ಮುಶ್ರೀಫ್, ಧರ್ಮರಾಜ್ ಬಾಬಾರಾವ್ ಅತ್ರಮ್, ಸಂಜಯ ಬನ್ಸೋಡೆ ಮತ್ತು ಅನಿಲ್ ಭೈದಾಸ್ ಪಾಟೀಲ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು, ಹಲವು ವರ್ಷಗಳ ನಂತರ ಮಹಾರಾಷ್ಟ್ರ ಕಂಡ ನಾಲ್ಕನೇ ಪ್ರಮಾಣ ವಚನ ಸಮಾರಂಭ.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶವು ಪ್ರಗತಿಯಲ್ಲಿದೆ. ಅವರು ಇತರ ದೇಶಗಳಲ್ಲಿಯೂ ಜನಪ್ರಿಯರಾಗಿದ್ದಾರೆ. ಮತ್ತು ಅವರ ನಾಯಕತ್ವವನ್ನು ಮೆಚ್ಚುತ್ತಾರೆ. ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ನಾವು ಅವರ ಜೊತೆ (ಬಿಜೆಪಿ) ಸೇರಿ ಹೋರಾಡುತ್ತೇವೆ ಮತ್ತು ಅದಕ್ಕಾಗಿಯೇ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ
ಎಂದು ಅಜಿತ್ ಪವಾರ್ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಯುವ ಇಚ್ಛೆ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಅಜಿತ ಪವಾರ್ ಎನ್‌ಸಿಪಿಯಿಂದ ಹೊರಬರುವ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯದಲ್ಲಿನ 53 ಎನ್‌ಸಿಪಿ ಶಾಸಕರ ಪೈಕಿ ಅಜಿತ್ ಪವಾರ್ ತಮಗೆ 40 ಮಂದಿಯ ಬೆಂಬಲವಿದೆ ಎಂದು ಪ್ರತಿಪಾದಿಸಿದ್ದಾರೆ, ಪಕ್ಷಾಂತರ ವಿರೋಧಿ ಕಾನೂನಿನ ನಿಬಂಧನೆಗಳಿಂದ ಪಾರಾಗಲು ಅಗತ್ಯವಿರುವ ಸಂಖ್ಯೆಗಿಂತ ನಾಲ್ವರು ಹೆಚ್ಚು.
ನಮಗೆ ಎಲ್ಲಾ ಸಂಖ್ಯಾಬಲವಿದೆ, ಎಲ್ಲಾ ಶಾಸಕರು ನನ್ನೊಂದಿಗಿದ್ದಾರೆ. ನಾವು ಪಕ್ಷವಾಗಿ ಇಲ್ಲಿದ್ದೇವೆ. ನಾವು ಎಲ್ಲ ಹಿರಿಯರಿಗೂ ತಿಳಿಸಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಯುವ ನಾಯಕತ್ವವು ಮುಂದೆ ಬರಬೇಕು ಎಂದು ಪವಾರ್ ಹೇಳಿದರು.
ಮಹಾರಾಷ್ಟ್ರ ಕ್ಯಾಬಿನೆಟ್ ಈಗ ಬಿಜೆಪಿಯಿಂದ ಒಂಬತ್ತು, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಒಂಬತ್ತು ಮತ್ತು ಎನ್‌ಸಿಪಿಯಿಂದ ಒಂಬತ್ತು ಮಂತ್ರಿಗಳನ್ನು ಹೊಂದಿದ್ದು, ಮುಖ್ಯಮಂತ್ರಿ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳು ಸೇರಿದ್ದಾರೆ. ಇದು ಗರಿಷ್ಠ 43 ಸದಸ್ಯರನ್ನು ಹೊಂದಬಹುದಾಗಿದೆ.
ಈಗ ನಾವು ಒಬ್ಬ ಮುಖ್ಯಮಂತ್ರಿ ಮತ್ತು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೊಂದಿದ್ದೇವೆ. ಡಬಲ್ ಇಂಜಿನ್ ಸರ್ಕಾರವು ಈಗ ಟ್ರಿಪಲ್ ಇಂಜಿನ್ ಆಗಿದೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ, ನಾನು ಅಜಿತ್ ಪವಾರ್ ಮತ್ತು ಅವರ ನಾಯಕರನ್ನು ಸ್ವಾಗತಿಸುತ್ತೇನೆ. ಅಜಿತ್ ಪವಾರ್ ಅವರ ಅನುಭವವು ಸಹಾಯ ಮಾಡುತ್ತದೆ,” ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಇದಕ್ಕೂ ಮುನ್ನ ಅಜಿತ ಪವಾರ್ ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಕೆಲವು ಮುಖಂಡರು ಮತ್ತು ಶಾಸಕರನ್ನು ಭೇಟಿಯಾದರು. ಆದರೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸಭೆಯ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಈ ಸಭೆಯನ್ನು ಏಕೆ ಕರೆಯಲಾಗಿದೆ ಎಂದು ನನಗೆ ನಿಖರವಾಗಿ ತಿಳಿದಿಲ್ಲ ಆದರೆ, ವಿರೋಧ ಪಕ್ಷದ ನಾಯಕರಾಗಿರುವ ಅವರು [ಅಜಿತ ಪವಾರ್] ಶಾಸಕರ ಸಭೆಯನ್ನು ಕರೆಯುವ ಹಕ್ಕು ಹೊಂದಿದ್ದಾರೆ. ಅವರು ಅದನ್ನು ನಿಯಮಿತವಾಗಿ ಮಾಡುತ್ತಾರೆ. ಈ ಬಗ್ಗೆ ನನಗೆ ಹೆಚ್ಚಿನ ವಿವರಗಳಿಲ್ಲ ಎಂದು ಪವಾರ್ ಹೇಳಿದ್ದರು.
ಏಕನಾಥ್ ಶಿಂಧೆ 40 ಸೇನಾ ಶಾಸಕರೊಂದಿಗೆ ಹೊರನಡೆದು ಬಿಜೆಪಿ ಬೆಂಬಲದೊಂದಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇವಲ ಒಂದು ವರ್ಷದ ನಂತರ ಎನ್‌ಸಿಪಿಯಲ್ಲಿನ ಬಿಕ್ಕಟ್ಟು ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆಯ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯನ್ನು ದುರ್ಬಲಗೊಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ