ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರ ನೀಟ್ ಪರೀಕ್ಷೆ ರದ್ದು : ಸಿಬಿಐ ತನಿಖೆಗೆ ಆದೇಶ

ನವದೆಹಲಿ: ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಾತಿಗಾಗಿ ಮೇ 3 ರಂದು ನಡೆದಿದ್ದ ‘ನೀಟ್-ಯುಜಿ 2026’ (NEET-UG) ಪರೀಕ್ಷೆಯನ್ನು ಪೇಪರ್ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಂಗಳವಾರ ಅಧಿಕೃತವಾಗಿ ರದ್ದುಗೊಳಿಸಿದೆ. ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವ ದೃಷ್ಟಿಯಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಹೊಸ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ.
ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (SOG) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಆಘಾತಕಾರಿ ವಿಷಯಗಳು ಹೊರಬಂದಿವೆ. ಪರೀಕ್ಷೆಗಿಂತ ಎರಡು-ಮೂರು ದಿನಗಳ ಮೊದಲೇ ಕೈಬರಹದ ರೂಪದಲ್ಲಿದ್ದ ‘ಗೆಸ್ ಪೇಪರ್’ (Guess Paper) ಒಂದು ಹರಿದಾಡುತ್ತಿತ್ತು. ಈ ಗೆಸ್‌ ಪೇಪರ್‌ನಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಶ್ನೆಗಳು ಅಸಲಿ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಕಳೆದ ಮೇ 3ರಂದು ಭಾನುವಾರ ದೇಶಾದ್ಯಂತ ನೀಟ್ ಪರೀಕ್ಷೆ ನಡೆದಿತ್ತು. ತನಿಖೆಯ ಪ್ರಕಾರ ಅಸಲಿ ಪ್ರಶ್ನೆಪತ್ರಿಕೆಯ ಸುಮಾರು 140 ಪ್ರಶ್ನೆಗಳು ಈ ಕೈಬರಹದ ಪೇಪರ್‌ನಲ್ಲಿ ಕಂಡುಬಂದಿವೆ. ಒಟ್ಟು 720 ಅಂಕಗಳಲ್ಲಿ ಸುಮಾರು 600 ಅಂಕಗಳಷ್ಟು ಪ್ರಶ್ನೆಗಳು ಈ ಸೋರಿಕೆಯಾದ ಪತ್ರಿಕೆಯೊಂದಿಗೆ ಹೊಂದಾಣಿಕೆಯಾಗಿವೆ.
ಪ್ರಕರಣ ಈಗ ಸಿಬಿಐ ತನಿಖೆಗೆ ; 45 ಮಂದಿ ವಶಕ್ಕೆ
ಪೇಪರ್ ಸೋರಿಕೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಇದರ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸಿದೆ. ಪರೀಕ್ಷಾ ಅಕ್ರಮದ ಹಿಂದೆ ಯಾವುದಾದರೂ ಸಂಘಟಿತ ಜಾಲವಿದೆಯೇ ಎಂಬುದನ್ನು ಸಿಬಿಐ ಪತ್ತೆಹಚ್ಚಲಿದೆ. ಈ ಸಂಬಂಧ ರಾಜಸ್ಥಾನವೊಂದರಲ್ಲೇ ಈವರೆಗೆ 45ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಎನ್‌ಟಿಎ (NTA) ಸ್ಪಷ್ಟನೆ:
“ಕಾನೂನು ಜಾರಿ ಸಂಸ್ಥೆಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಪ್ರಸ್ತುತ ಪರೀಕ್ಷಾ ಪ್ರಕ್ರಿಯೆಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ಪರೀಕ್ಷೆಯ ಪಾರದರ್ಶಕತೆಯನ್ನು ಉಳಿಸಿಕೊಳ್ಳಲು ಮರು ಪರೀಕ್ಷೆಯೊಂದೇ ದಾರಿ,” ಎಂದು ಎನ್‌ಟಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪರೀಕ್ಷಾ ದಿನಗಳ ನಂತರವೇ ಅಕ್ರಮದ ಸುಳಿವು ಸಿಕ್ಕಿದ್ದರಿಂದ ಎನ್‌ಟಿಎ ತಕ್ಷಣವೇ ತನಿಖಾ ಸಂಸ್ಥೆಗಳನ್ನು ಎಚ್ಚರಿಸಿತ್ತು.
ಸುಮಾರು 22 ಲಕ್ಷ ವಿದ್ಯಾರ್ಥಿಗಳ ಮೇಲೆ ಮರುಪರೀಕ್ಷೆಯ ನಿರ್ಧಾರ ನೇರ ಪರಿಣಾಮ ಬೀರಲಿದ್ದು, ಮರು ಪರೀಕ್ಷೆಗೆ ಸಂಬಂಧಿಸಿದಂತೆ ಎನ್‌ಟಿಎ ಕೆಲವು ಅಂಶಗಳನ್ನು ಸ್ಪಷ್ಟಪಡಿಸಿದೆ.
ಮರು ಪರೀಕ್ಷೆಗೆ ವಿದ್ಯಾರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಹಳೆಯ ದತ್ತಾಂಶವನ್ನೇ ಬಳಸಲಾಗುತ್ತದೆ.
ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕವನ್ನು ಪಾವತಿಸುವಂತಿಲ್ಲ. ಈಗಾಗಲೇ ಪಾವತಿಸಿದ ಶುಲ್ಕವನ್ನು ಹಿಂದಿರುಗಿಸುವ ಪ್ರಕ್ರಿಯೆಯೂ ನಡೆಯಲಿದೆ.
ಮರು ಪರೀಕ್ಷೆಗೆ ಮುನ್ನ ಹೊಸ ಪ್ರವೇಶ ಪತ್ರಗಳನ್ನು (Admit Cards) ನೀಡಲಾಗುತ್ತದೆ.
ಸಾಮಾನ್ಯವಾಗಿ ಹಿಂದಿನ ಪರೀಕ್ಷಾ ಕೇಂದ್ರಗಳೇ ಮುಂದುವರಿಯುವ ಸಾಧ್ಯತೆಯಿದೆ.
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳನ್ನು ನಂಬಬಾರದು ಮತ್ತು ಅಧಿಕೃತ ಮಾಹಿತಿಗಾಗಿ ಎನ್‌ಟಿಎ ವೆಬ್‌ಸೈಟ್ ಅನ್ನು ಮಾತ್ರ ಗಮನಿಸಬೇಕು ಎಂದು ತಿಳಿಸಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement