ಬೆಂಗಳೂರು: ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಅಲ್ಲಿ ನಿಯಂತ್ರಣಕ್ಕೆ ತರಲು ಹೆಚ್ಚು ಗಮನ ನೀಡಬೇಕು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಮಂಗಳವಾರ ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ -19 ನಿಯಂತ್ರಣದ ಕುರಿತು ಸಭೆ ನಡೆಸಿ ಚರ್ಚಿಸಿ ಕೆಲ ಗ್ರಾಮಗಳಲ್ಲಿ ಜನತೆ ಕೊರೊನಾ ಪರೀಕ್ಷೆಗೆ ಹಿಂದೇಟು ಹಾಕುತ್ತಿರುವುದು ಕೇಳಿಬರುತ್ತಿದೆ. ಇವರ ಮನವೊಲಿಕೆ ಮಾಡಿ ಪರೀಕ್ಷೆ ನಡೆಸಬೇಕು. ಹಾಗೆಯೇ, ಗ್ರಾಮಗಳಲ್ಲಿ ಮನೆಯಲ್ಲೇ ಐಸೋಲೇಶನ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಡಿ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ನಗರ ಪ್ರದೇಶಗಳಂತೆ ಹಳ್ಳಿಗಳಲ್ಲಿಯೂ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ವಲಯ
ಕೊರೊನಾ ಪ್ರಮಾಣ ಹೆಚ್ಚಾಗಿರುವ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಒತ್ತು ನೀಡಿ ಮೈಕ್ರೋ ಕಂಟೈನ್ಮೆಂಟ್ ವಲಯ ನಿರ್ಮಾಣ ಮಾಡಿ ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಗೃಹ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೈಕ್ರೋ ಕಂಟೈನ್ಮೆಂಟ್ ವಲಯ ಸ್ಥಾಪಿಸುವ ಜವಾಬ್ದಾರಿಯನ್ನು ಪಿಡಿಓ, ತಾಲೂಕು ಆರೋಗ್ಯ ಅಧಿಕಾರಿ ಮತ್ತು ಪೊಲೀಸರಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಕೋವಿಡ್ ಸೋಂಕಿತರು ಯಾವ ಗ್ರಾಮ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಆ ಗ್ರಾಮಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ಜೋನ್ ಗಳನ್ನು ಮಾಡಬೇಕು. ಈ ರೀತಿ ಜೋನ್ ನಿರ್ಮಿಸದ ಹೊರತು ಕೋವಿಡ್ ಹರಡುವಿಕೆ ತಡೆಯುವುದು ಗ್ರಾಮೀಣ ಪ್ರದೇಶಗಳಲ್ಲಿ ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ಕಂಟೈನ್ಮೆಂಟ್ ಜೋನ್ ಮಾಡಿ ಅದರ ಮೇಲೆ ನಿಗಾ ಇಡಬೇಕು. ಅಲ್ಲಿನ ಸೋಂಕಿತರ ತಪಾಸಣೆ ನಡೆಸುವಂತೆ ವೈದ್ಯರಿಗೆ ಆದೇಶ ನೀಡಲಾಗಿದೆ. ಪ್ರಾಥಮಿಕ ಮಾಹಿತಿಯನ್ನು ಕಡ್ಡಾಯವಾಗಿ ಆರ್ಟಿಪಿಸಿಆರ್ ಮತ್ತು ಆರ್ಎಟಿ ಟೆಸ್ಟಿಗೆ ಒಳಪಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಆಯ್ದ ಗ್ರಾಪಂಗಳ ಜತೆ ಸಿಎಂ ಸಂವಾದ
ಕೊರೊನಾ ಹೆಚ್ಚಾಗಿ ಕಾಣಿಸಿಕೊಂಡಿರುವ ರಾಜ್ಯದ ಆಯ್ದ ಗ್ರಾಮಪಂಚಾಯಿತಿಗಳ ಅಧ್ಯಕ್ಷರ ಜತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಮುಖ್ಯಮಂತ್ರಿಗಳು ಗ್ರಾಮಾಂತರ ಪ್ರದೇಶದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಸಿಎಂ ಅವಲೋಕನ ಮಾಡಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ