8 ಜಿಲ್ಲೆ ಹೊರತುಪಡಿಸಿ ಉಳಿದೆಡೆ ಲಾಕ್‌ಡೌನ್‌ ತೆರವು ಇಂದು ಸಂಜೆ ಸಭೆಯಲ್ಲಿ ನಿರ್ಧಾರ..?

ಬೆಂಗಳೂರು: ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಿರುವ ಎಂಟು ಜಿಲ್ಲೆಗಳನ್ನು ಹೊರೆತಪಡಿಸಿ ಸೋಮವಾರದಿಂದ ರಾಜ್ಯದಲ್ಲಿ ಲಾಕ್‌ಡೌನ್‌ ತೆರವು ಪ್ರಕ್ರಿಯೆ ಹಂತಹಂತವಾಗಿ ಆರಂಭವಾಗಲಿದೆ. ಇಂದು (ಗುರುವಾರ ) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಚರ್ಚೆಸಿದ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯೆ ನಿಚ್ಚಳವಾಗಿದೆ.
ಗೃಹ ಕಚೇರಿ ಕೃಷ್ಣದಲ್ಲಿ ಗುರುವಾರ ಕೋವಿಡ್ ಸೋಂಕು ಹೆಚ್ಚಾಗಿರುವ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು, ಮಂಡ್ಯ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಡಿಯೊ ಕಾನ್ಫರೆನ್ಸ್ ನಡೆಸಿದರು.
ಈ ಎಂಟು ಜಿಲ್ಲೆಗಳಲ್ಲಿ ಪ್ರಕರಣ ಹೆಚ್ಚಿರುವ ಕಾರಣ ಈಗಿರುವ ಯಥಾಸ್ಥಿತಿ ಇನ್ನೂ ಒಂದು ವಾರ ಮುಂದುವರೆಯಲಿದೆ ಎನ್ನಲಾಗಿದೆ.
ಈ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಲಾಕ್ಡೌನ್ ಮುಂದುವರೆಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಯಡಿಯೂರಪ್ಪ ಅವರು ಆಯಾ ಜಿಲ್ಲೆಗಳ ಹೊಣೆಗಾರಿಕೆಯನ್ನು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಅವರ ತೀರ್ಮಾನಕ್ಕೆ ಬಿಟ್ಟಿದ್ದಾರೆ.
ರಾಜ್ಯದಲ್ಲಿ ಕೋವಿಡ್ 2ನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕಠಿಣ ನಿಬರ್ಂಧಗಳಿಂದಾಗಿ ಸೋಂಕಿನ ತೀವ್ರತೆ ಇಳಿಮುಖವಾಗುತ್ತಿದೆ. ಆದರೆ ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ ಮತ್ತು ಚಿಕ್ಕಮಗಳೂರು ಈ ಎಂಟು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ತಿಳಿದಷ್ಟು ಇಳಿಕೆಯಾಗಿಲ್ಲ. ಮೈಸೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗಿರುವ ಕುರಿತು ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದರು.
ರಾಜ್ಯದ ಒಟ್ಟು ಪ್ರಕರಣಗಳಲ್ಲಿ 65 ಸಾವಿರ ಸಕ್ರಿಯ ಪ್ರಕರಣಗಳು ಈ ಎಂಟು ಜಿಲ್ಲೆಗಳಲ್ಲಿವೆ. ಈ ಜಿಲ್ಲೆಗಳಲ್ಲಿ ಸೋಂಕಿನ ಇಳಿಕೆಯ ಪ್ರಮಾಣ ಕಡಿಮೆ ಇದೆ. ಪಾಸಿಟಿವಿಟಿ ದರ ಹೆಚ್ಚಿದೆ. ಹೀಗಾಗಿ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಮಾಡುವ ನಿಟ್ಟಿನಲ್ಲಿ ಲಾಕ್‌ಡೌನ್‌ ಮುಂದುವರಿಸಬೇಕು ಎಂದು ಮನವಿ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲಿ ಅತಿ ಹೆಚ್ಚು ಅಂದರೆ, ಸರಾಸರಿ ಶೇಕಡಾ 25.17 ಪಾಸಿಟಿವಿಟಿ ದರ ದಾಖಲಾಗಿದೆ. ಮೈಸೂರಿನಲ್ಲಿಯೂ ಶೇಕಡಾ 22 ರಷ್ಟಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವುದನ್ನು ಖಾತರಿಪಡಿಸಿಕೊಳ್ಳಬೇಕು. ಮೈಕ್ರೋ ಕಂಟೇನ್‍ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಗೆ ಒತ್ತು ನೀಡಬೇಕು.
ಕೋವಿಡ್ ಪ್ರಕರಣ ಇಳಿಕೆಯಾಗುವಂತೆ ಮಾಡಿ ಪಾಸಿಟಿವಿಟಿ ದರ ಸಹ ಶೇಕಡಾ 5ರ ಒಳಗಿರುವಂತೆ ಖಾತರಿ ಪಡಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ೀ ಜಿಲ್ಲೆಗಳಲ್ಲಿ ರಾಪಿಡ್ ಎಂಟಿಜನ್ ಟೆಸ್ಟ್ ಜಾಸ್ತಿ ಮಾಡಲಾಗುತ್ತಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಶೇ. 30 ರಷ್ಟು ನಡೆಸಲು ಸೂಚಿಸಲಾಯಿತು.
ಉಳಿದ ಶೇ. 70ರಷ್ಟು ಆರ್.ಟಿ-ಪಿ.ಸಿ.ಆರ್. ಪರೀಕ್ಷೆ ನಡೆಸಬೇಕು. ಸೋಂಕಿನ ಲಕ್ಷಣ ಇರುವವರಿಗೆ ಮಾತ್ರ ರಾಪಿಡ್ ಆಂಟಿಜೆನ್ ಟೆಸ್ಟ್ ಮಾಡಬೇಕು ಎಂದು ಯಡಿಯುರಪ್ಪ ನಿರ್ದೇಶನ ನೀಡಿದರು.
ಆರ್.ಟಿ.ಪಿ.ಸಿ.ಆರ್. ಪರೀಕ್ಷಾ ವರದಿ 24 ಗಂಟೆಗಳ ಒಳಗೆ ನೀಡಬೇಕು, ಸೋಂಕಿತರ ಆರೋಗ್ಯ ಸ್ಥಿತಿಗನುಗುಣವಾಗಿ ವರ್ಗೀಕರಣ ಮಾಡುವ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕು.
ಮೈಸೂರು ಹೊರತು ಪಡಿಸಿ ಇತರ ಏಳು ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ತೀವ್ರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಿಸಬೇಕು. ಹೋಮ್‌ ಐಸೋಲೇಶನ್‌ ತಪ್ಪಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಈ ಎಂಟು ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ಇನ್ನಷ್ಟು ವೇಗ ಪಡೆದುಕೊಳ್ಳಬೇಕು. ಕೆಲವು ಚಟುವಟಿಕೆಗಳನ್ನು ಹೊರತುಪಡಿಸಿ,ಉಳಿದ ಲಾಕ್‌ಡೌನ್‌ ನಿರ್ಬಂಧಗಳನ್ನು ಮುಂದುವರೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಈ ಬಗ್ಗೆ ಇಂದು ಸಚಿವರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement