ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

ಮುಂಬೈ : ಕೋಟಕ್‌ ಮಹೀಂದ್ರಾ ಬ್ಯಾಂಕ್‌ ತನ್ನ ಆನ್‌ಲೈನ್‌ ಮತ್ತು ಮೊಬೈಲ್‌ ಬ್ಯಾಂಕಿಂಗ್‌ ವೇದಿಕೆ ಮೂಲಕ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡುವುದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬುಧವಾರ ನಿರ್ಬಂಧ ಹೇರಿದೆ.
ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಅನುಸರಿಸುವಂತೆ ಪದೇ ಪದೇ ಸೂಚಿಸಿದರೂ ಅದನ್ನು ಪಾಲಿಸದಿರುವುದಕ್ಕೆ ಆರ್‌ಬಿಐ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಕ್ರೆಡಿಟ್‌ ಕಾರ್ಡನ್ನು ಕೂಡ ಹೊಸದಾಗಿ ನೀಡುವಂತಿಲ್ಲ. ಮೇಲ್ವಿಚಾರಣೆಗಳಲ್ಲಿನ ಸಮಸ್ಯೆಯನ್ನು ಉಲ್ಲೇಖಿಸಿ ಹೊಸದಾಗಿ ಕ್ರೆಡಿಟ್ ಕಾರ್ಡ್‌ ನೀಡುವುದಕ್ಕೂ ನಿರ್ಬಂಧ ವಿಧಿಸಿದೆ. ಇವೆಲ್ಲ ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಆರ್‌ಬಿಐ ತಿಳಿಸಿದೆ. ಈಗ ಅಸ್ತಿತ್ವದಲ್ಲಿರುವ ಆನ್‌ಲೈನ್‌ ಗ್ರಾಹಕರಿಗೆ ಈ ಕ್ರಮವು ಅನ್ವಯಿಸುವುದಿಲ್ಲ. ಈಗಾಗಲೇ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರಿಗೆ ಸೇವೆಯನ್ನು ಮುಂದುವರಿಸಬಹುದಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಬ್ಯಾಂಕ್‌ನ ಮಾಹಿತಿ ತಂತ್ರಜ್ಞಾನ ಅಪಾಯ ನಿರ್ವಹಣೆಯಲ್ಲಿ ಗಂಭೀರ ದೋಷಗಳಿವೆ ಎಂದು ಆರ್‌ಬಿಐ ಹೇಳಿದೆ. 2022 ಮತ್ತು 2023ರಲ್ಲಿ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಆರ್‌ಬಿಐ ಪರಿಶೀಲನೆಗೆ ಒಳಪಡಿಸಿತ್ತು. ಈ ವೇಳೆ ದೋಷಗಳು ಪತ್ತೆಯಾಗಿದ್ದವು. ಈ ದೋಷಗಳನ್ನು ಸಮಗ್ರವಾಗಿ ಮತ್ತು ಸಕಾಲದಲ್ಲಿ ಸರಿಪಡಿಸಲು ಬ್ಯಾಂಕ್‌ ವಿಫಲವಾಗಿತ್ತು ಎಂದು ಹೇಳಿದೆ.
ಬ್ಯಾಂಕ್‌ನ ಐ.ಟಿ ತಪಶೀಲು ನಿರ್ವಹಣೆ, ಬಳಕೆದಾರರ ದತ್ತಾಂಶ ನಿರ್ವಹಣೆ, ಕಾರ್ಯಾಚರಣೆಯ ಅಪಾಯದ ಮೇಲ್ವಿಚಾರಣೆ, ದತ್ತಾಂಶ ಭದ್ರತೆ, ದತ್ತಾಂಶ ಸೋರಿಕೆ ತಡೆಯ ಕಾರ್ಯತಂತ್ರಕ್ಕೆ ಸಂಬಂಧಿಸಿದ ಕ್ರಮಗಳು ಅಪಾಯದ ಸ್ಥಿತಿಯಲ್ಲಿವೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

ಈ ಎರಡು ವರ್ಷಗಳಿಗೆ ಸಂಬಂಧಿಸಿದಂತೆ ತಲೆದೋರಿರುವ ದೋಷಗಳ ಬಗ್ಗೆ ಬ್ಯಾಂಕ್‌ ಸಲ್ಲಿಸಿರುವ ವರದಿಯು ಸಮಪರ್ಕವಾಗಿಲ್ಲ. ಮುಂದಿನ ದಿನಗಳಲ್ಲಿ ಬ್ಯಾಂಕ್‌ನ ಡಿಜಿಟಲ್‌ ಬ್ಯಾಂಕಿಂಗ್ ಮತ್ತು ಪೇಮೆಂಟ್‌ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ತಲೆದೋರದಂತೆ ಮುಂಜಾಗ್ರತೆ ವಹಿಸಬೇಕಿದೆ. ಹೀಗಾಗಿ, ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್‌ 35ಎ ಅನ್ವಯ ಈ ಕ್ರಮಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ.
2020ರ ಡಿಸೆಂಬರ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಡಿಜಿಟಲ್‌ ಪೇಮೆಂಟ್‌ ಸೇವೆಯಲ್ಲಿಯೂ ಇದೇ ಮಾದರಿಯ ಸಮಸ್ಯೆ ತಲೆದೋರಿತ್ತು. ಆಗ ಅದರ ವಿರುದ್ಧವೂ ನಿರ್ಬಂಧ ಹೇರಲಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement