ಧಾರವಾಡ: ಡಿಮ್ಹಾನ್ಸ್ ನಲ್ಲಿ ಎಂಆರ್‌ಐ ಯಂತ್ರ ಅಳವಡಿಸುವವರೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ವೇತನ ತಡೆಹಿಡಿಯಲು ಹೈಕೋರ್ಟ್ ಆದೇಶ

ಧಾರವಾಡ: ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್) ಎಂಆರ್‌ಐ ಯಂತ್ರ ಅಳವಡಿಸಿ ಕಾರ್ಯನಿರ್ವಹಿಸುವ ವರೆಗೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ವೈದ್ಯಕೀಯ ಶಿಕ್ಷಣ) ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ವೇತನವನ್ನು ತಡೆಹಿಡಿಯುವಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಎಸ್‌ಆರ್ ಕೃಷ್ಣ ಕುಮಾರ್ ಅವರ ವಿಭಾಗೀಯ ಪೀಠವು ಎರಡು ವರ್ಷಗಳ ಹಿಂದೆ ಯಂತ್ರವನ್ನು ಖರೀದಿಸಲು ಆರು ವಾರಗಳ ಕಾಲಾವಕಾಶವನ್ನು ನೀಡಿದ್ದರೂ ಈವರೆಗೂ ಕಾರ್ಯನಿರ್ವಹಿಸಲಿಲ್ಲ ಎಂದು ಗಮನಿಸಿ ಈ ಆದೇಶ ಮಾಡಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಹಲವು ಬಾರಿ ಅಳವಡಿಸುವ ವಿಚಾರದಲ್ಲಿ ವಿಳಂಬ ಮಾಡಿದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದಾರೆ ಮತ್ತು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ನ್ಯಾಯಾಲಯ ಟೀಕಿಸಿದೆ.

ಹೀಗಾಗಿ ಎಂಆರ್‌ಐ ಯಂತ್ರ ಅಳವಡಿಸಿ ಕಾರ್ಯಾರಂಭ ಮಾಡುವವರೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ವೇತನವನ್ನು ನೀಡುವುದು ಬೇಡ ಎಂದು ನ್ಯಾಯಾಲಯ ಸೂಚಿಸಿದೆ.
ಮಾರ್ಚ್ 5, 2020 ರಂದು, ಡಿಮ್ಹಾನ್ಸ್ ಬಳಕೆಗೆ ಅಗತ್ಯವಿರುವ ಎಂಆರ್‌ಐ ಯಂತ್ರ ಖರೀದಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆರು ವಾರಗಳ ಕಾಲಾವಕಾಶ ನೀಡಲಾಯಿತು. ನ್ಯಾಯಾಲಯವು ಮತ್ತೆ ಮತ್ತೆ ಸಮಯವನ್ನು ನೀಡಿತು. ಆದರೆ ಎಂಆರ್‌ಐ ಯಂತ್ರ ಮಾತ್ರ ಅಲವಡಿಕೆಯಾಗಿಲ್ಲ.ಸಂಬಂಧಿಸಿದ ಅಧಿಕಾರಿಗಳ ಕಾರ್ಯವೈಖರಿಯನ್ನು ನಾವು ಪ್ರಶಂಸಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಕಾರವಾರ: ಕೊಡಸಳ್ಳಿ ಡ್ಯಾಂ ರಸ್ತೆಯಲ್ಲಿ ಗುಡ್ಡ ಕುಸಿತ

ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಸ್ಕ್ಯಾನ್ ಯಂತ್ರವನ್ನು ಡಿಮ್ಹಾನ್ಸ್‌ (DIMHANS)ಗೆ ತಲುಪಿಸಲಾಗಿದೆ, ಆದರೆ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ರಾಜ್ಯವು ನ್ಯಾಯಾಲಯಕ್ಕೆ ತಿಳಿಸಿದೆ.
ಪೀಠವು ವಿಳಂಬದ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು, ಹಿಂದಿನ ವಿಚಾರಣೆಯ ಸಮಯದಲ್ಲಿ ಮಾರ್ಚ್ 30 ರೊಳಗೆ ಎಂಆರ್‌ಐ ಯಂತ್ರವನ್ನು ಕಾರ್ಯಗತಗೊಳಿಸಲಾಗುವುದು ಎಂದು ರಾಜ್ಯವು ಭರವಸೆ ನೀಡಿತ್ತು. ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 21 ರಂದು ನಡೆಯಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement