ನವದೆಹಲಿ: ಮಾನವನ ದೇಹದ ಒಳಗಿನ ರಹಸ್ಯಗಳನ್ನು ಭೇದಿಸಲು ಐಐಟಿ ದೆಹಲಿಯ ಸಂಶೋಧಕರು ಏಮ್ಸ್ ಸಹಯೋಗದಲ್ಲಿ ಒಂದು ಅತ್ಯಾಧುನಿಕ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಸಣ್ಣ ಕರುಳಿನಿಂದ ನೇರವಾಗಿ ಬ್ಯಾಕ್ಟೀರಿಯಾಗಳ ಮಾದರಿಯನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಮನುಷ್ಯನ ಜೀರ್ಣಾಂಗ ವ್ಯವಸ್ಥೆಯ ಅಧ್ಯಯನದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿದೆ ಎಂದು ಭಾವಿಸಲಾಗಿದೆ.
ನುಂಗಬಹುದಾದ ಈ ಸಣ್ಣ ಸಾಧನವು (Ingestible device) ಜೀರ್ಣಾಂಗವ್ಯೂಹದ ಒಳಗಿನ ಮೈಕ್ರೋಬಯೋಮ್‌ಗಳನ್ನು ಪತ್ತೆಹಚ್ಚುತ್ತದೆ.
ಮಾತ್ರೆಯಂತರುವ ಈ ಸಣ್ಣ ಸಾಧನವು ಹೊಟ್ಟೆಯ ಆಮ್ಲೀಯ ಪರಿಸರದಲ್ಲಿ (Stomach) ತೆರೆಯದೆ, ಸಣ್ಣ ಕರುಳನ್ನು ತಲುಪಿದಾಗ ಮಾತ್ರ ಸಕ್ರಿಯಗೊಂಡು ಅಲ್ಲಿನ ಬ್ಯಾಕ್ಟೀರಿಯಾಗಳನ್ನು ಸಂಗ್ರಹಿಸುತ್ತದೆ. ಕೆಲಸ ಮುಗಿದ ನಂತರ ತನ್ನಷ್ಟಕ್ಕೆ ತಾನೇ ಲಾಕ್ ಆಗುವ ಮೂಲಕ ಮಾದರಿಯನ್ನು ಸುರಕ್ಷಿತವಾಗಿಡುತ್ತದೆ. ದೆಹಲಿ ಐಐಟಿ ಹಾಗೂ ಏಮ್ಸ್ (AIIMS) ಸಂಶೋಧಕರು ಜಂಟಿಯಾಗಿ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಐಸಿಎಂಆರ್ (ICMR) ಧನಸಹಾಯ ನೀಡಿದೆ.
ಈ ಸಾಧನ ಏಕೆ ಮುಖ್ಯ?
ಮಾನವ ದೇಹದ ಎಲ್ಲಾ ಜೀವಕೋಶಗಳಲ್ಲಿ ಸುಮಾರು ಅರ್ಧದಷ್ಟು ಸೂಕ್ಷ್ಮಜೀವಿಗಳಾಗಿವೆ. ಎಲ್ಲಾ ಬ್ಯಾಕ್ಟೀರಿಯಾಗಳು ಹಾನಿಕಾರಕವಲ್ಲ, ನಮ್ಮ ದೇಹದಲ್ಲಿರುವ ಕೋಟ್ಯಂತರ ಸೂಕ್ಷ್ಮಾಣುಜೀವಿಗಳು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದಾಗ್ಯೂ, ಅವುಗಳನ್ನು ಅಧ್ಯಯನ ಮಾಡುವುದು ಸವಾಲಿನ ಸಂಗತಿಯಾಗಿದೆ. ಈವರೆಗೆ ಇವುಗಳನ್ನು ಅಧ್ಯಯನ ಮಾಡಲು ಎಂಡೋಸ್ಕೋಪಿ ಅಥವಾ ಮಲದ ಮಾದರಿಯನ್ನು ಅವಲಂಬಿಸಬೇಕಿತ್ತು. ಆದರೆ, ಈ ಹೊಸ ಸಾಧನವು ಯಾವುದೇ ನೋವಿಲ್ಲದೆ ಸಣ್ಣ ಕರುಳಿನ ನಿಖರವಾದ ಮಾಹಿತಿಯನ್ನು ನೀಡಲಿದೆ.
“ನಾವು ಬಾಹ್ಯಾಕಾಶ ಸಂಶೋಧನೆಗೆ ರೋವರ್‌ಗಳನ್ನು ಕಳುಹಿಸುವಂತೆಯೇ, ಮಾನವನ ದೇಹದ ಒಳಗಿನ ಗುಪ್ತ ವಿಶ್ವವನ್ನು ಅನ್ವೇಷಿಸಲು ಈ ಪುಟ್ಟ ಸಾಧನವನ್ನು ತಯಾರಿಸಿದ್ದೇವೆ” ಎಂದು ಐಐಟಿ ದೆಹಲಿಯ ಪ್ರೊ. ಸರ್ವೇಶಕುಮಾರ ಶ್ರೀವಾಸ್ತವ ತಿಳಿಸಿದ್ದಾರೆ.
ಈ ಸಂಶೋಧನೆಯು ಅಕ್ಕಿ ಕಾಳಿನ ಗಾತ್ರದ ಸಾಧನದ ಮೂಲಕ ಪ್ರಾಣಿಗಳ ಮೇಲೆ ಯಶಸ್ವಿಯಾಗಿ ಪರೀಕ್ಷಿಸಲ್ಪಟ್ಟಿದೆ. ಯಾವುದೇ ಅಡ್ಡಪರಿಣಾಮಗಳಿಲ್ಲದೆ ಇದು ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಗತ್ಯ ಅನುಮೋದನೆಗಳ ನಂತರ ಶೀಘ್ರದಲ್ಲೇ ಇದು ಭಾರತೀಯ ರೋಗಿಗಳ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ