ಬೆಳಗಾವಿ : ನಗರದ ಜಿಲ್ಲಾ ಆಸ್ಪತ್ರೆ ಬಿಮ್ಸ್ಗೆ ದಾಖಲಾಗಿದ್ದ ಮೂವರು ಮಕ್ಕಳ ನಿಗೂಢ ಸಾವು ಈಗ ತೀವ್ರ ಚರ್ಚೆಗೆ ಗುರಿಯಾಗಿದೆ. ಮಕ್ಕಳ ಏಕಾಏಕಿ ಸಾವಿಗೆ ಕಾರಣವಾದರೂ ಏನು ಎನ್ನುವುದು ಗೊತ್ತಾಗಬೇಕಿದೆ.
ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ 13 ತಿಂಗಳ ಪವಿತ್ರಾ , 14 ತಿಂಗಳ ಮಧು ಹಾಗೂ ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಒಂದೂವರೆ ವರ್ಷದ ಚೇತನ್ ಪೂಜಾರಿ ಮೃತ ಮಕ್ಕಳು.
ಇವರಿಗೆ ಜನವರಿ 12 ರಂದು ಬೋಚಬಾಳ ಗ್ರಾಮದಲ್ಲಿ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ರುಬೆಲ್ಲಾ ಚುಚ್ಚುಮದ್ದು ನೀಡಲಾಗಿತ್ತು. ಚುಚ್ಚುಮದ್ದು ಹಾಕಿಸಿಕೊಂಡು ಮನೆಗೆ ಹೋದ ನಂತರ ಮಕ್ಕಳಲ್ಲಿ ಐವರು ಅಸ್ವಸ್ಥಗೊಂಡು ತೀವ್ರ ವಾಂತಿ ಭೇದಿಯಿಂದ ಬಳಲಿದರು. ತಕ್ಷಣ ಐವರು ಮಕ್ಕಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಆದರೆ ಮೂವರು ಮಕ್ಕಳು ಮೃತಪಟ್ಟಿವೆ. ಪುಟ್ಟ ಕಂದಮ್ಮಗಳ ಸಾವಿನಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕಟಕೊಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕೆವೇ ಈ ನಿಗೂಢ ಸಾವಿನ ಬಗ್ಗೆ ಕಾರಣ ತಿಳಿಯಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಚ್ ಒ ಮುನ್ಯಾಳ, ಹಸುಗೂಸುಗಳು ಮೃತಪಟ್ಟ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಕ್ಕಳ ಸಾವಿನ ಬಗ್ಗೆ ಸೂಕ್ತ ಕಾರಣಗಳನ್ನು ಕಂಡುಹಿಡಿಯಲಾಗುವುದು, ನಂತರ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ