ರಾಮ ಮಂದಿರ ಟ್ರಸ್ಟ್‌ ದೇಣಿಗೆ ದುರ್ಬಳಕೆ ಆರೋಪ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ : ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ರಾಮ ಮಂದಿರ ನಿರ್ಮಾಣಕ್ಕಾಗಿ ಬಂದಿರುವ ದೇಣಿಗೆ ಹಣದ ದುರ್ಬಳಕೆ ನಡೆದಿದೆ ಎಂಬ ಆರೋಪಗಳ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯಮೂರ್ತಿ ಎಂ.ಎಂ. ಸುಂದರೇಶ ಹಾಗೂ ನ್ಯಾಯಮೂರ್ತಿ ಶೀಲ್ ನಾಗು ಅವರಿದ್ದ ಪೀಠವು ನ್ಯಾಯಾಲಯದ ರಜೆಗಳು ಮುಗಿದ ನಂತರ ಅರ್ಜಿಯನ್ನು ಮುಂದಿನ ಪರಿಗಣನೆಗಾಗಿ ನಿಯಮಿತ ಪೀಠದ ಮುಂದೆ ಪಟ್ಟಿ ಮಾಡುವಂತೆ ಅದು ನಿರ್ದೇಶಿಸಿದೆ. ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಕೇಂದ್ರ ತನಿಖಾ ದಳದ (CBI) ವಿಶೇಷ ತನಿಖಾ ತಂಡ (SIT) ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.ಈ ವೇಳೆ ಅರ್ಜಿದಾರರು ಸ್ವತಃ ನ್ಯಾಯಾಲಯದಲ್ಲಿ ಹಾಜರಾಗಿ, ತುರ್ತು ವಿಚಾರಣೆಗೆ ಪ್ರಕರಣವನ್ನು ಉಲ್ಲೇಖಿಸಿದ್ದರು.

ಪ್ರಕರಣವನ್ನು ಪ್ರಸ್ತಾಪಿಸಿದ ವೇಳೆ, ದೇವಸ್ಥಾನದ ದೇಣಿಗೆ ಹಣದ ದುರ್ಬಳಕೆ ಆರೋಪಗಳು ಅತ್ಯಂತ ಗಂಭೀರವಾಗಿದ್ದು, ಅವುಗಳ ಬಗ್ಗೆ ತಕ್ಷಣವೇ ವಿಚಾರಣೆ ನಡೆಸಬೇಕೆಂದು ಅರ್ಜಿದಾರರು ಮನವಿ ಮಾಡಿದರು. ಆದರೆ, ನ್ಯಾಯಮೂರ್ತಿ ಸುಂದರೇಶ ಅವರು, “ಈ ಪ್ರಕರಣದಲ್ಲಿ ತುರ್ತು ವಿಚಾರಣೆ ನಡೆಸಬೇಕಾದ ಅಗತ್ಯವೇನು?” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅರ್ಜಿದಾರರು, “ರಾಜ್ಯ ಸರ್ಕಾರ ಈ ಪ್ರಕರಣವನ್ನು ನಿರ್ವಹಿಸುತ್ತಿರುವ ರೀತಿ ಅನುಮಾನಗಳನ್ನು ಹುಟ್ಟುಹಾಕುತ್ತಿದೆ” ಎಂದು ವಾದಿಸಿದರು. ಆದರೆ, ಅರ್ಜಿದಾರರ ವಾದದಿಂದ ತೃಪ್ತಿಗೊಳ್ಳದ ನ್ಯಾಯಪೀಠವು, ನ್ಯಾಯಾಲಯದ ಬೇಸಿಗೆ ರಜೆಯ ಬಳಿಕ ನಿಯಮಿತ ಪೀಠದ ಮುಂದೆ ಪಟ್ಟಿ ಮಾಡುವಂತೆ ನಿರ್ದೇಶನ ನೀಡಿತು.

ಪ್ರಮುಖ ಸುದ್ದಿ :-   ‘ಮುತ್ತು ಮಾಸ್ಟರ್’ ಹೆಸರಿನಲ್ಲಿ 37 ವರ್ಷ ಪುರುಷನಂತೆ ಬದುಕಿದ ಮಹಿಳೆ : ಹೀಗೆ ಬದುಕುವ ನಿರ್ಧಾರದ ಹಿಂದಿನ ಕಾರಣವೇನು ?

ಅರ್ಜಿಯಲ್ಲಿ, ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಹಾಗೂ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಭಕ್ತರು ಮತ್ತು ದಾನಿಗಳ ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.
ಇದಲ್ಲದೆ, ಟ್ರಸ್ಟ್‌ಗೆ ಸಂಬಂಧಿಸಿದಂತೆ ಹಣ ನಾಪತ್ತೆಯಾಗಿದೆ ಹಾಗೂ ಇತರ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಅಂತಿಮವಾಗಿ ಸಾಬೀತಾಗಲಿ ಅಥವಾ ಸಾಬೀತಾಗದಿರಲಿ, ಇಂತಹ ವರದಿಗಳು ರಾಮ ಮಂದಿರ ಚಳವಳಿಗೆ ಬೆಂಬಲ ನೀಡಿದವರು ಹಾಗೂ ದೇಣಿಗೆ ನೀಡಿದ ಭಕ್ತರಲ್ಲಿ ವ್ಯಾಪಕ ಆತಂಕ ಉಂಟುಮಾಡಿವೆ. ಅಯೋಧ್ಯೆಯ ವೈಭವ ಮರುಸ್ಥಾಪನೆಗಾಗಿ ಪೀಳಿಗೆಗಳ ಕಾಲ ಹೋರಾಡಿದ ಜನರಲ್ಲಿ ಇಂತಹ ವರದಿಗಳು ತೀವ್ರ ಕಳವಳ ಮೂಡಿಸಿವೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇದೇ ರೀತಿಯ ಆರೋಪಗಳನ್ನು ಒಳಗೊಂಡ ಮತ್ತೊಂದು ಪ್ರತ್ಯೇಕ ಅರ್ಜಿಯನ್ನೂ ವಕೀಲ ನರೇಂದ್ರಕುಮಾರ ಗೋಸ್ವಾಮಿ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement