‘ಮುತ್ತು ಮಾಸ್ಟರ್’ ಹೆಸರಿನಲ್ಲಿ 37 ವರ್ಷ ಪುರುಷನಂತೆ ಬದುಕಿದ ಮಹಿಳೆ : ಹೀಗೆ ಬದುಕುವ ನಿರ್ಧಾರದ ಹಿಂದಿನ ಕಾರಣವೇನು ?

ತಮಿಳುನಾಡಿನ ಒಂದು ಸಣ್ಣ ಹಳ್ಳಿಯಲ್ಲಿ ಹಲವು ವರ್ಷಗಳಿಂದ “ಮುತ್ತು ಮಾಸ್ಟರ್” ಎಂದು ಪರಿಚಿತರಾಗಿದ್ದ ವ್ಯಕ್ತಿಯ ಬದುಕಿನ ಹಿಂದಿನ ಅಚ್ಚರಿಯ ಸತ್ಯ ಇದೀಗ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಗ್ರಾಮಸ್ಥರು ಪುರುಷನೆಂದು ನಂಬಿದ್ದ ಮುತ್ತು ಮಾಸ್ಟರ್ ವಾಸ್ತವವಾಗಿ ಪೆಚ್ಚಿಯಮ್ಮಾಳ್ ಎಂಬ ಮಹಿಳೆಯಾಗಿದ್ದು, ತಮ್ಮ ಪತಿಯ ಸಾವಿನ ಬಳಿಕ ಸುರಕ್ಷತೆ ಮತ್ತು ಮಗಳ ಭವಿಷ್ಯಕ್ಕಾಗಿ 37 ವರ್ಷಗಳ ಕಾಲ ಪುರುಷನ ವೇಷದಲ್ಲೇ ಬದುಕಿದ್ದರು…!
ಪೆಚ್ಚಿಯಮ್ಮಾಳ್ ಅವರು ಚಿಕ್ಕ ವಯಸ್ಸಿನಲ್ಲೇ ಅಂದರೆ ಮದುವೆಯಾದ ಕೆಲ ದಿನಗಳಲ್ಲಿ ತಮ್ಮ 20ನೇ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡಿದ್ದರು. ಆ ವೇಳೆ ಅವರು ಗರ್ಭಿಣಿಯಾಗಿದ್ದರು. ಅವರಿಗೆ ಏಕಾಂಗಿಯಾಗಿ ಮಗುವನ್ನು ಸಾಕುವ ಜವಾಬ್ದಾರಿ ಎದುರಾಯಿತು. ಅವರು ಷಣ್ಮುಗಸುಂದರಿ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಪೆಚ್ಚಿಯಾಮ್ಮಾಳ್ ಒಬ್ಬಂಟಿಯಾಗಿ ಮಗುವನ್ನು ಬೆಳೆಸುವುದು ಕಷ್ಟಕರವೆಂದು ಅರಿತರು ಮತ್ತು ಅವರು ತಮ್ಮ ಮಗಳನ್ನು ಪೋಷಿಸಲು ಕಟ್ಟಡ ನಿರ್ಮಾಣ ಕೆಲಸ, ಹೋಟೆಲ್‌ಗಳು ಮತ್ತು ಚಹಾ ಅಂಗಡಿಗಳಲ್ಲಿ ಕೆಲಸ ಮಾಡಿದರು. ಅಲ್ಲದೆ, ಅವರು ತಮ್ಮ ಮಗುವಾಗಿ ಮತ್ತೆ ಮದುವೆಯಾಗದಿರಲು ನಿರ್ಧರಿಸಿದ್ದರು.
ಪುರುಷರೇ ಹೆಚ್ಚಾಗಿದ್ದ ಈ ಎಲ್ಲ  ಕೆಲಸದ ಸ್ಥಳಗಳಲ್ಲಿ ಅವರು ಕಿರುಕುಳವನ್ನು ಅನುಭವಿಸಿದರು. ತಿಂಗಳುಗಳ ಕಾಲ ಲೈಂಗಿಕ ನಿಂದನೆ ಮತ್ತು ಕಷ್ಟಗಳನ್ನು ಎದುರಿಸಿದರು. ಇದೇ ವೇಳೆ ಕಿರುಕುಳದ ಘಟನೆಯೊಂದು ಅವರ ಜೀವನದ ದಿಕ್ಕನ್ನೇ ಬದಲಿಸಿತು. ಮಹಿಳೆಯಾಗಿ ಬದುಕುವುದು ಸುರಕ್ಷಿತವಲ್ಲ ಎಂಬ ಭಾವನೆ ಮೂಡಿದ ಹಿನ್ನೆಲೆಯಲ್ಲಿ ಅವರು ಕೂದಲನ್ನು ಕತ್ತರಿಸಿಕೊಂಡು, ಪುರುಷರ ಉಡುಪು ಧರಿಸಿ “ಮುತ್ತು” ಎಂಬ ಹೊಸ ಹೆಸರನ್ನು ಇಟ್ಟುಕೊಂಡರು.
ಮುತ್ತು ಮಾಸ್ಟರ್ ಎಂಬ ಹೆಸರಿನಲ್ಲಿ ಅವರು ಹಲವು ವರ್ಷಗಳ ಕಾಲ ಕೃಷಿ ಕೂಲಿ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಕೊಂಡು ಸರಳ ಜೀವನ ನಡೆಸಿದ ಅವರು, ಪುರುಷರಂತೆ ಬಿಳಿ ಅಂಗಿ, ಧೋತಿ ಧರಿಸುವುದು, ಬೀಡಿ ಸೇದುವುದು ಹಾಗೂ ಗ್ರಾಮದ ದೇವಾಲಯದ ಸಮೀಪ ಒಬ್ಬಂಟಿಯಾಗಿ ವಾಸಿಸುವ ಮೂಲಕ  ಬದುಕಿದರು. ಗ್ರಾಮಸ್ಥರು ಅವರನ್ನು ಶಾಂತ ಸ್ವಭಾವದ, ಪ್ರಾಮಾಣಿಕ ಮತ್ತು ಶ್ರಮಜೀವಿ ವ್ಯಕ್ತಿಯೆಂದು ಗೌರವಿಸುತ್ತಿದ್ದರು.
ಆದರೆ ಈ ರಹಸ್ಯವನ್ನು ಕಾಪಾಡಿಕೊಳ್ಳುವುದು ಸುಲಭವಾಗಿರಲಿಲ್ಲ. ಮಹಿಳೆಯ ದೈಹಿಕ ಲಕ್ಷಣಗಳನ್ನು, ಅದರಲ್ಲೂ ಋತುಚಕ್ರವನ್ನು ಮರೆಮಾಚುವುದು ಅವರಿಗೆ ದೊಡ್ಡ ಸವಾಲಾಗಿತ್ತು. ಆದರೂ ತಮ್ಮ ಸುರಕ್ಷತೆ ಮತ್ತು ಮಗಳ ಉತ್ತಮ ಭವಿಷ್ಯಕ್ಕಾಗಿ ಅವರು ಈ ಪುರುಷ ಬದುಕನ್ನು ಮುಂದುವರಿಸಿದರು.
ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಹಲವು ವರ್ಷಗಳ ವರೆಗೂ ಅವರ ಸ್ವಂತ ಮಗಳಿಗೂ ತಾಯಿಯ ನಿಜವಾದ ಗುರುತು ತಿಳಿದಿರಲಿಲ್ಲ. ಮುತ್ತು ಮಾಸ್ಟರ್ ತಮ್ಮ ರಹಸ್ಯವನ್ನು ಕಾಪಾಡಿಕೊಂಡೇ ಮಗಳಿಗೆ ಸುರಕ್ಷಿತ ಮತ್ತು ಸ್ಥಿರ ಜೀವನವನ್ನು ಒದಗಿಸುವುದನ್ನೇ ಪ್ರಮುಖ ಗುರಿಯನ್ನಾಗಿ ಮಾಡಿಕೊಂಡಿದ್ದರು. ಹಾಗೂ ತಮ್ಮ ರಹಸ್ಯವನ್ನು ಕಾಪಾಡಿಕೊಂಡೇ ಮಗಳನ್ನು ಸುರಕ್ಷಿತವಾಗಿ ಬೆಳೆಸುವಲ್ಲಿ ಯಶಸ್ವಿಯಾದರು. ಸುಮಾರು 20 ವರ್ಷಗಳ ಹಿಂದೆ ಕಟ್ಟುನಾಯಕನಪಟ್ಟಿಯಲ್ಲಿ ಮನೆ ಮಾಡಿದಾಗ ಅಲ್ಲಿಯ ವರೆಗೆ ಬಹಳ ಹತ್ತಿರದ ಸಂಬಂಧಿಕರಿಗೆ ಮಾತ್ರ ಗೊತ್ತಿದ್ದ ವಿಷಯ  ಮಗಳಿಗೂ ಮುತ್ತು ಮಹಿಳೆ ಎಂಬುದು ಗೊತ್ತಾಯಿತು. ಆದರೆ ಅವರೂ ಆ ರಹಸ್ಯವನ್ನು ಕಾಪಾಡಿಕೊಂಡರು.
ಬಳಿಕ ಅವರು ಪುರುಷ ಅಲ್ಲ, ಮಹಿಳೆ ಎಂಬುದು ಬಹಿರಂಗವಾದಾಗ ಗ್ರಾಮಸ್ಥರು ಅಚ್ಚರಿಗೊಂಡರು, ಆದರೆ, ಹಲವು ವರ್ಷಗಳಿಂದ ಪರಿಚಯವಾಗಿದ್ದ ಮುತ್ತು ಮಾಸ್ಟರ್ ಅವರ ಮೇಲಿನ ಗೌರವ ಕಡಿಮೆಯಾಗಲಿಲ್ಲ. ಈಗ ಮಗಳಿಗೆ ಮದುವೆಯಾಗಿದ್ದು, ಕುಟುಂಬವು ಆರ್ಥಿಕವಾಗಿ ಉತ್ತಮವಾಗಿದೆ. ಆದರೆ ಪೆಚ್ಚಿಯಮ್ಮಾಳ್ ಇನ್ನೂ ತನ್ನ ಉಡುಪು ಹಾಗೂ ಗುರುತನ್ನು ಬದಲಾಯಿಸಲು ಸಿದ್ಧರಿಲ್ಲ. ಇದು ತನ್ನ ಮಗಳಿಗೆ ಸುರಕ್ಷಿತ ಜೀವನವನ್ನು ಖಾತ್ರಿಪಡಿಸುತ್ತದೆ ಮತ್ತು ಕೊನೆಯವರೆಗೂ ‘ಮುತ್ತು’ ಆಗಿಯೇ ಉಳಿಯುತ್ತೇನೆ ಎಂದು ಹೇಳಿದ್ದಾರೆ.
ಪ್ರಸ್ತುತ ಮುತ್ತು ಮಾಸ್ಟರ್ ಅವರ ಬದುಕಿನ ಕಥೆ ಸಾಮಾಜಿಕ ಅಸುರಕ್ಷತೆ, ಸಮಾಜದಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು ಹಾಗೂ ಬದುಕಲು ತೆಗೆದುಕೊಳ್ಳಬೇಕಾಗುವ ಕಠಿಣ ನಿರ್ಧಾರಗಳ ಪ್ರತೀಕವಾಗಿ ದೇಶದಾದ್ಯಂತ ಮತ್ತೆ ಚರ್ಚೆಯಾಗುತ್ತಿದೆ. ಅವರ ಈ ನಿರ್ಧಾರವು ಲಿಂಗ ಬದಲಾವಣೆಯ ಉದ್ದೇಶದಿಂದ ಅಲ್ಲ, ಬದಲಾಗಿ ತಮ್ಮ ಸುರಕ್ಷತೆ, ಸ್ವಾಭಿಮಾನ ಮತ್ತು ಮಗಳ ಭವಿಷ್ಯವನ್ನು ಕಾಪಾಡಿಕೊಳ್ಳುವ ದೃಢ ಸಂಕಲ್ಪದಿಂದ ತೆಗೆದುಕೊಳ್ಳಲಾಗಿತ್ತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement