ನಾವೆಲ್ಲರೂ ಒಂದು ದಿನ ಸಾಯುತ್ತೇವೆ…: ಪ್ರವಚನ ನೀಡುತ್ತಿದ್ದಾಗಲೇ ತಲೆಯ ಮೇಲೆ ಶಿಲುಬೆ ಬಿದ್ದು ಪಾದ್ರಿ ಸಾವು

ಕ್ವಿಟೊ: ಜೀವನ ಎಷ್ಟು ಅನಿಶ್ಚಿತ ಎಂಬುದರ ಕುರಿತು ಪ್ರವಚನ ನೀಡಿದ ಕೆಲವೇ ಕ್ಷಣಗಳಲ್ಲಿ ಕ್ಯಾಥೋಲಿಕ್‌ ಪಾದ್ರಿಯೊಬ್ಬರು ಸಾವಿಗೀಡಾದ ಘಟನೆ ಈಕ್ವೆಡಾರ್‌ನಲ್ಲಿ ನಡೆದಿದೆ. ಚರ್ಚ್‌ನಲ್ಲಿ ನಡೆಯುತ್ತಿದ್ದ ನೇರ ಪ್ರಸಾರದ (ಲೈವ್‌) ಸಾಮೂಹಿಕ ಪ್ರಾರ್ಥನೆಯ ವೇಳೆ, ಪಾದ್ರಿಯ ಹಿಂದೆ ಗೋಡೆಗೆ ನೇತುಹಾಕಲಾಗಿದ್ದ ಬೃಹತ್‌ ಶಿಲುಬೆ ಏಕಾಏಕಿ ಕಳಚಿ ಅವರ ತಲೆಯ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಪಾದ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ.
ಈಕ್ವೆಡಾರ್‌ನ ಗ್ವಾಯಾಕ್ವಿಲ್‌ನಲ್ಲಿರುವ ಅವರ್‌ ಲೇಡಿ ಆಫ್‌ ಪರ್ಪೆಚುವಲ್‌ ಹೆಲ್ಪ್‌ ಚರ್ಚ್‌ನ ಧರ್ಮಗುರು ಫಾದರ್‌ ಪ್ಯಾಟ್ರಿಸಿಯೊ ಆಲ್ಫ್ರೆಡೊ ಸಾಂಚೆಜ್‌ ಮೊಲಿನಾರಿ (Patricio Alfredo Sanchez Molinari) ಅವರು ಶನಿವಾರ (ಅಕ್ಟೋಬರ್‌ 17) ಮೃತಪಟ್ಟಿದ್ದಾರೆ ಎಂದು ಗ್ವಾಯಾಕ್ವಿಲ್‌ ಆರ್ಚ್‌ಡಯಾಸಿಸ್‌ ಪ್ರಕಟಣೆಯಲ್ಲಿ ತಿಳಿಸಿದೆ.
ಪಾದ್ರಿಯ ತಲೆಯ ಹಿಂಭಾಗಕ್ಕೆ ಶಿಲುಬೆ ಬಿದ್ದ ಬಳಿಕ ಅವರು ಮತ್ತೆ ಮೇಲೇಳಲಿಲ್ಲ. ಇ ಹಲವರು ತಕ್ಷಣವೇ ಪಾದ್ರಿಯ ನೆರವಿಗೆ ಧಾವಿಸಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ತುರ್ತು ಸೇವಾ ಸಿಬ್ಬಂದಿ ಪರಿಶೀಲನೆ ನಡೆಸಿದ ನಂತರ, ಪಾದ್ರಿ ಮೃತಪಟ್ಟಿರುವುದಾಗಿ ಪ್ರಕಟಿಸಲಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸಾವಿನ ಕುರಿತು ಪ್ರವಚನ ನೀಡಿದ ಕೆಲವೇ ಕ್ಷಣಗಳಲ್ಲಿ ದುರಂತ
ಅಪಘಾತ ಸಂಭವಿಸುವುದಕ್ಕೂ ಕೆಲವೇ ಕ್ಷಣಗಳ ಮೊದಲು ಮೊಲಿನಾರಿ ಅವರು ಜೀವನದ ಕ್ಷಣಿಕತೆ ಮತ್ತು ಸಾವಿನ ಅನಿವಾರ್ಯತೆಯ ಕುರಿತು ಪ್ರವಚನ ನೀಡುತ್ತಿದ್ದರು ಎನ್ನಲಾಗಿದೆ.
ಮೊಬೈಲ್‌ ಫೋನ್‌ಗಳಲ್ಲಿ ಅನಗತ್ಯವಾಗಿ ಸಮಯ ಕಳೆಯುವ ಬದಲು, ದೇವರ ಆರಾಧನೆಗೆ ಮತ್ತು ತಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲು ಜೀವನದಲ್ಲಿ ಆದ್ಯತೆ ನೀಡಬೇಕು ಎಂದು ಅವರು ಭಕ್ತರಿಗೆ ಕರೆ ನೀಡಿದ್ದರು.
“ಒಂದು ದಿನ ಇಲ್ಲಿ ಇರುವ ನಾವೆಲ್ಲರೂ ಸಾಯುತ್ತೇವೆ. ಕೆಲವೊಮ್ಮೆ ನಾವು ಕೆಲವು ಕೆಲಸಗಳಿಗೆ ವ್ಯಯಿಸಿದ ಸಮಯಕ್ಕಿಂತ ದೇವರೊಂದಿಗೆ ಕಳೆಯುವ ಸಮಯವೇ ಹೆಚ್ಚು ಅರ್ಥಪೂರ್ಣವಾಗಿರುತ್ತದೆ” ಎಂದು ಅವರು ಹೇಳಿದ್ದರು.
ಇದಾದ ಬಳಿಕ ಮೊಲಿನಾರಿ ಮತ್ತೊಂದು ಪ್ರಾರ್ಥನೆಯನ್ನು ಆರಂಭಿಸಿ, ಅಲ್ಲಿ ನೆರೆದಿದ್ದ ಎಲ್ಲರಿಗೂ ದೇವರು ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸುತ್ತಿದ್ದರು. ಈ ವೇಳೆ ಅವರ ಹಿಂದೆ ಗೋಡೆಗೆ ನೇತುಹಾಕಲಾಗಿದ್ದ ಬೃಹತ್‌ ಶಿಲುಬೆ ಏಕಾಏಕಿ ಕಳಚಿಕೊಂಡು ಅವರ ತಲೆಯ ಹಿಂಭಾಗಕ್ಕೆ ಬಡಿದಿದೆ.
ಪಾದ್ರಿ ಮೊಲಿನಾರಿ ಅವರ ನಿಧನವನ್ನು ಗ್ವಾಯಾಕ್ವಿಲ್‌ ಆರ್ಚ್‌ಡಯಾಸಿಸ್‌ ಅಧಿಕೃತವಾಗಿ ದೃಢಪಡಿಸಿದ್ದು, ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮೃತ ಪಾದ್ರಿಯ ಸ್ಮರಣಾರ್ಥ ಭಾನುವಾರ ಸಂಜೆ ವಿಶೇಷ ಯೂಕರಿಸ್ಟ್‌ (Eucharist) ಪ್ರಾರ್ಥನೆಯನ್ನೂ ಆಯೋಜಿಸಲಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement