ಬೆಂಗಳೂರು : ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ನಿಷೇಧಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶವನ್ನು ಶುಕ್ರವಾರ ರದ್ದುಪಡಿಸಿದೆ. ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಬೈಕ್‌ಗಳನ್ನು ಸಾರಿಗೆ ವಾಹನಗಳಾಗಿ (ಟ್ಯಾಕ್ಸಿ) ಬಳಸಲು ಅಗತ್ಯ ಷರತ್ತುಗಳನ್ನು ವಿಧಿಸಿ ಸರ್ಕಾರ ಅನುಮತಿ ನೀಡಬಹುದು ಎಂದು ಆದೇಶಿಸಿದೆ.
ಮೋಟಾರು ವಾಹನಗಳ ಕಾಯಿದೆ 1988ರ ಅನ್ವಯ ಮಾರ್ಗಸೂಚಿ ಮತ್ತು ನಿಯಮಗಳನ್ನು ರೂಪಿಸುವವರೆಗೆ ಬೈಕ್ ಟ್ಯಾಕ್ಸಿಗಳು ಕಾರ್ಯಾಚರಣೆ ನಡೆಸುವಂತಿಲ್ಲ ಎಂಬ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ, ಉಬರ್, ರ‍್ಯಾಪಿಡೊ ಮತ್ತಿತರರು ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
“ದ್ವಿಚಕ್ರ ವಾಹನ ಮಾಲೀಕರು ತಮ್ಮ ವಾಹನಗಳನ್ನು ಸಾರಿಗೆ ವಾಹನ ಎಂದು ನೋಂದಾಯಿಸಲು ಅರ್ಜಿ ಸಲ್ಲಿಸಲು ಮುಕ್ತರಾಗಿದ್ದಾರೆ. ಇಂತಹ ಅರ್ಜಿಗಳನ್ನು ಪರಿಗಣಿಸಿ, ವಾಹನ ಮಾಲೀಕರಿಗೆ ಸಾರಿಗೆ ವಾಹನವಾಗಿ ನೋಂದಣಿ ನೀಡಲು ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ಆಗಿ ಕಾರ್ಯನಿರ್ವಹಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪ್ರಸ್ತುತ ನಿಯಮಾವಳಿಗಳನ್ನು ಪರಿಶೀಲಿಸಬಹುದಾದರೂ, ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನ ಅಥವಾ ಕಾಂಟ್ರಾಕ್ಟ್ ಕ್ಯಾರೇಜ್ ಆಗಿ ಬಳಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಅನುಮತಿ ನಿರಾಕರಿಸುವಂತಿಲ್ಲ” ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
“ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಮೋಟಾರು ವಾಹನ ಕಾಯಿದೆಯ ಸೆಕ್ಷನ್ 74(2)ರ ಪ್ರಕಾರ ಅಗತ್ಯ ಷರತ್ತುಗಳನ್ನು ವಿಧಿಸಬಹುದು. ಅಗ್ರಿಗೇಟರ್‌ಗಳು ಸಹ ಹೊಸದಾಗಿ ಅರ್ಜಿ ಸಲ್ಲಿಸಲು ಸ್ವತಂತ್ರರಾಗಿದ್ದು, ಅಂತಹ ಅರ್ಜಿಗಳನ್ನು ಈ ಆದೇಶದಲ್ಲಿನ ನ್ಯಾಯಾಲಯದ ಅವಲೋಕನಗಳು ಹಾಗೂ ಕಾನೂನಿನ ಚೌಕಟ್ಟಿನಡಿಯಲ್ಲಿ ಪರಿಗಣಿಸಬೇಕು” ಎಂದು ಹೈಕೋರ್ಟ್ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ