ಪಂಚರಾಜ್ಯಗಳ ಚುನಾವಣೆ: ಕಾಂಗ್ರೆಸ್‌ ನೆಲೆ ಮತ್ತಷ್ಟು ಕುಸಿದರೆ ಬಿಜೆಪಿಗೆ ತೃತೀಯ ರಂಗ ಪರ್ಯಾಯವಾಗಲಿದೆಯೇ?

ಪಂಚರಾಜ್ಯ ಚುನಾವಣೆಗಳಲ್ಲಿ ಕೇರಳ ಹಾಗೂ ಅಸ್ಸಾಂ ಪಡಿಸಿ ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ವಿಶೇಷವಾಗಿ ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಪಾಂಡಿಚೇರಿಯಲ್ಲಿ ಈ ಪಕ್ಷದ ಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತ ಸಾಗಿದೆ. ಅಸ್ಸಾಂನಲ್ಲಿ ಬಿಜೆಪಿ ಸೋಲಿಸಲೇಬೇಕೆಂದು ಅನೇಕ ಪ್ರಾದೇಶಿಕ ಪಕ್ಷಗಳ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಸಾಧಿಸಿದೆ. ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಚುನಾವಣಾ ಪೂರ್ವ ಮೈತ್ರಿಯಲ್ಲಿದ್ದರೂ ಅದರ ಮತಗಳ ಸ್ಟ್ರೈಕ್‌ರೇಟ್‌ ಕಾರಣದಿಂದ ಅದು ಪ್ರತಿ ಸೀಟು ಪಡೆಯಲೂ ತೀರ ಅಂಗಲಾಚುವ ಸ್ಥಿತಿಯಲ್ಲಿದೆ.
bimba pratibimbaಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವು ತನ್ನ ಪ್ರಮುಖ ಎದುರಾಳಿ ಎಡಪಕ್ಷಗಳು-ಕಾಂಗ್ರೆಸ್‌-ಐಎಫ್‌ಎಸ್‌ ಎಂದು ಹೇಳುವುದೇ ಇಲ್ಲ. ಅದು ತನ್ನ ಎದುರಾಳಿ ಬಿಜೆಪಿ ಎಂದೇ ಹೇಳಿಕೊಂಡು ಬರುತ್ತಿದೆ. ಮತ್ತು ಕಾಂಗ್ರೆಸ್‌ ಹಾಗೂ ಎಡರಂಗಳ ಮೈತ್ರಿಕೂಟವು ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದು ಆರೋಪಿಸುತ್ತದೆ. ಅದೇರೀತಿ ಎಡಪಕ್ಷಗಳು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ರಾಜ್ಯದಿಂದ ಮೊದಲು ತೊಲಗಬೇಕು ಯಾಕೆಂದರೆ ಅದು ಮತ್ತು ಬಿಜೆಪಿ ಒಂದೇ ನಾಣ್ಯದೆರಡು ಮುಖಗಳು, ಚುನಾವಣೆ ಫಲಿತಾಂಶದಲ್ಲಿ ಅಂತಂತ್ರ ಬಂದರೆ ಇವೆರಡೂ ಪಕ್ಷಗಳು ಸೇರಿ ಸರ್ಕಾರ ರಚಿಸುತ್ತವೆ. ಯಾಕೆಂದರೆ ೧೯೯೮ರಲ್ಲಿ ಟಿಎಂಸಿ ಎನ್‌ಡಿಎ ಭಾಗವಾಗಿತ್ತು ಎಂದು ಹೇಳಿದೆ. ಇದಕ್ಕಿಂತ ವಿಶೇಷವೆಂದರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್‌ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡಿರುವ ಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಮೈತ್ರಿಕೂಟವನ್ನು ಬೆಂಬಲಿಸದೇ ಟಿಎಂಸಿ ಬೆಂಬಲಕ್ಕೆ ನಿಂತಿರುವುದು. ಆರ್‌ಜೆಡಿ, ಎನ್‌ಸಿಪಿ, ಶಿವಸೇನೆ ಹೀಗೆ ಅನೇಕ ಪಕ್ಷಗಳು ಟಿಎಂಸಿ ಬೆಂಬಲಕ್ಕೆ ನಿಂತಿವೆ. ಶಿವಸೇನೆ ಹಾಗೂ ಎನ್‌ಸಿಪಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಜೊತೆ ಸೇರಿ ಸರ್ಕಾರ ರಚನೆ ಮಾಡಿವೆ. ಈ ಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬೆಂಬಲಿಸಿವೆಯೇ ಹೊರತು ಕಾಂಗ್ರೆಸ್‌ ಮೈತ್ರಕೂಟವನ್ನಲ್ಲ, ಅದೇರೀತಿ ಬಿಹಾರದಲ್ಲಿ ಕೆಲವೇ ತಿಂಗಳ ಹಿಂದೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಆರ್‌ಜೆಡಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಬೆಂಬಲಿಸದೇ ಟಿಎಂಸಿ ಬೆಂಬಲಿಸುತ್ತಿದೆ. ಅಷ್ಟೇ ಏಕೆ ಜಾರ್ಖಂಡ್‌ನ ಜೆಎಂಎಂ (ಜನತಾ ಮುಕ್ತಿ ಮೋರ್ಚಾ) ಪಕ್ಷದ ಪ್ರಮುಖ ಹಾಗೂ ಜಾರ್ಖಂಡ್‌ ಮುಖ್ಯಮಂತ್ರಿ ಸಹ ಟಿಎಂಸಿ ಪರವಾಗಿ ಬಂಗಾಳದಲ್ಲಿ ಪ್ರಚಾರಕ್ಕೆ ಹೋಗಲು ಮಮತಾ ಆಹ್ವಾನ ಸ್ವೀಕರಿಸಿದ್ದಾರೆ. ಜಾರ್ಖಂಡನಲ್ಲಿ ಕಾಂಗ್ರೆಸ್‌ ಇದೇ ಜೆಎಂಎಂ ಜೊತೆ ಸೇರಿ ಸರ್ಕಾರ ರಚಿಸಿದೆ. ಆದರೆ ಅದೇ ಕಾಂಗ್ರೆಸ್‌ಗೆ ಬಂಗಾಳದಲ್ಲಿ ಜೆಎಂಎಂ ಬೆಂಬಲ ಸಿಗುತ್ತಿಲ್ಲ. ಉತ್ತರ ಪ್ರದೇಶದ ಅಖಿಲೇಶ ಸಿಂಗ್‌ ಯಾದವ ಸಹ ಟಿಎಂಸಿಗೆ ಬೆಂಬಲ ನೀಡಿದ್ದಾರೆ. ಇವರೆಲ್ಲ ಚುನಾವಣೆಗೆ ಬಂಗಾಳದಲ್ಲಿ ಸ್ಪರ್ಧಿಸುತ್ತಿಲ್ಲವಾದರೂ ಕಾಂಗ್ರೆಸ್‌ಗೆ ಇದು ಹಿನ್ನಡೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಯಾಕೆಂದರೆ ಇವುಗಳು ತಮ್ಮತಮ್ಮ ರಾಜ್ಯಗಳಲ್ಲಿ ಕಾಂಗ್ರೆಸ್‌ ಜೊತೆ ಸರ್ಕಾರ ರಚನೆ ಮಾಡಿದ್ದರೂ ಅಥವಾ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರೂ ಬಂಗಾಳದಲ್ಲಿ ಕಾಂಗ್ರೆಸ್‌ ಬೆಂಬಲಕ್ಕೆ ಬರದೆ ಟಿಎಂಸಿಗೆ ಬೆಂಬಲ ಘೋಷಿಸಿರುವುದು ಮತದಾರರಲ್ಲಿ ತಪ್ಪು ಸಂದೇಶಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇಷ್ಟೇ ಆದರೆ ತೊಂದರೆಯಿರಲಿಲ್ಲ. ಇವರಲ್ಲಿ ಕೆಲವು ನಾಯಕರು ಕಾಂಗ್ರೆಸ್‌ ವಿರುದ್ಧವೇ ಮಾತನಾಡಿದ್ದಾರೆ.
ಈ ಪ್ರಾದೇಶಿಕ ಪಕ್ಷಗಳಿಗೆ ಅವರವರ ರಾಜ್ಯದಲ್ಲಿ ಬಿಜೆಪಿಯೇ ಪ್ರಮುಖ ಎದುರಾಳಿ. ಆದರೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಪ್ರಮುಖ ಎದುರಾಳಿ. ಹೀಗಾಗಿ ಇದನ್ನು ರಾಜ್ಯಮಟ್ಟದ ಸಮಸ್ಯೆಯೆಂದು ತಳ್ಳಿಹಾಕಬಹುದಾದರೂ ಈ ಪಕ್ಷಗಳ ನಿಲುವನ್ನು ಬಂಗಾಳದ ಜನ ನಂಬುತ್ತಾರೆಯೇ ಎಂಬ ಪ್ರಶ್ನೆಯೂ ಉದ್ಭವಿಸಬಹುದು ಅಥವಾ ಅವರವರ ರಾಜ್ಯದಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಹೊಂದಿರುವ ಈ ಪ್ರಾದೇಶಿಕ ಪಕ್ಷಗಳು ಇಲ್ಲೇಕೆ ಕಾಂಗ್ರೆಸ್‌ ಬೆಂಬಲಕ್ಕೆ ಬರುತ್ತಿಲ್ಲ ಎಂಬ ಪ್ರಶ್ನೆಯೂ ಉದ್ಭವಿಸಬಹುದು. ಎರಡನೆಯದ್ದು ಕಾಂಗ್ರೆಸ್‌ಗೆ ಹಾನಿಕಾರಕ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಈ ಪಕ್ಷಗಳ ಒಕ್ಕೂಟವು ಬಿಜೆಪಿ ವಿರೋಧಿಯಾಗಿ ನೆಲೆಕಂಡುಕೊಳ್ಳಲು ಪ್ರಯತ್ನಿಸಬಹುದು. ಆಗ ಮೊದಲೇ ತನ್ನ ನೆಲೆಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ ಮತ್ತಷ್ಟು ಕುಸಿಯಬಹುದು.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾಂಗ್ರೆಸ್‌ ದೂರವಿಡಲು ಏನು ಕಾರಣ..?: ಮಮತಾ ಬ್ಯಾನರ್ಜಿ 1998ರಲ್ಲಿ ಕಾಂಗ್ರೆಸ್‌ನಿಂದ ಹೊರನಡೆದು ಟಿಎಂಸಿ ಪಕ್ಷ ಸ್ಥಾಪನೆ ಮಾಡಿದ ೧೧ ವರ್ಷಗಳ ನಂತರ, 2009 ರಲ್ಲಿ, ಲೋಕಸಭಾ ಚುನಾವಣೆಯ ಸಮಯದಲ್ಲಿ, ಟಿಎಂಸಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತು. ಸಿಂಗೂರ್ ಮತ್ತು ನಂದಿಗ್ರಾಮದಲ್ಲಿ ಭೂಸ್ವಾಧೀನ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದ ನಂತರ ಎಡ ಪಕ್ಷಗಳ ಸರ್ಕಾರ ಜನರ ಆಕ್ರೋಶ ಎದುರಿಸುತ್ತಿತ್ತು. ಆಗ ಆಡಳಿತಾರೂಢ ಸಿಪಿಐ (ಎಂ) ವಿರುದ್ಧ ಹೆಚ್ಚುತ್ತಿರುವ ಅಸಮಾಧಾನದ ಲಾಭ ತೆಗೆದುಕೊಳ್ಳಲು ಟಿಎಂಸಿಯು ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿತು. ಹಾಗೂ ಈ ಮೈತ್ರಿ ಪರಿಣಾಮಕಾರಿ ಎಂದು ಸಾಬೀತಾಯಿತು. ಯಾಕೆಂದರೆ 1977ರ ನಂತರ ಮೊದಲ ಬಾರಿಗೆ ಎಡಪಂಥೀಯರಿಗೆ ರಾಜ್ಯದಲ್ಲಿ ಬಹುಪಾಲು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಟಿಎಂಸಿ-ಕಾಂಗ್ರೆಸ್ ಮೈತ್ರಿ ೨೦೧೧ ವಿಧಾನಸಭಾ ಚುನಾವಣೆಯಲ್ಲೂ ಎಡಪಂಥೀಯರನ್ನು ಸೋಲಿಸಿತು. ಆದರೆ ನಂತರದಲ್ಲಿ ಟಿಎಂಸಿ ಬಂಗಾಳದಲ್ಲಿ ತನ್ನ ನೆಲೆ ವಿಸ್ತರಿಸುತ್ತಿದ್ದಂತೆಯೇ ಅದು ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ದೂರವಿಟ್ಟಿತು ಹಾಗೂ ಸ್ವಂತ್ರವಾಗಿ ಸ್ಪರ್ಧೆ ಮಾಡಿತು. ರಾಜ್ಯದ ೪೨ ಲೋಕಸಭಾ ಸ್ಥಾನಗಳಲ್ಲಿ ೩೪ ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಪಾರಮ್ಯ ಮೆರೆಯಿತು. 2009ರಲ್ಲಿ ಟಿಎಂಸಿ ಜೊತೆ ಮೈತ್ರಿಯಲ್ಲಿ ಆರು ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ೨೦೧೪ರಲ್ಲಿ ೪ಕ್ಕೆ ಇಳಿಯಿತು. ೨೦೧೬ ರ ವಿಧಾನಸಭಾ ಚುನಾವಣೆಯಲ್ಲಿ ಎಡಪಂಥೀಯರೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿತು ಮತ್ತು ತನ್ನ ಸ್ತಾನವನ್ನು ೪೨ ರಿಂದ ೪೪ ಕ್ಕೆ ಹೆಚ್ಚಿಸಿಕೊಂಡಿತು. , ಆದರೂ ಅದರ ಅದರ ಸ್ಟೃಕ್‌ರೇಟ್‌ ೬೩.೬%ದಿಂದ ೪೭.೮%ಕ್ಕೆ ಇಳಿಯಿತು. ಸ್ಥಾನ ಹೆಚ್ಚಾಗಲು ಕಾರಣ ೨೦೧೧ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ನೀಡಿದ್ದ ಸೀಟುಗಳಿಗೆ ಹೋಲಿಸಿದರೆ ೨೦೧೬ರಲ್ಲಿ ಎಡಪಂಥೀಯರು ಕಾಂಗ್ರೆಸ್ಸಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದರು. ೨೦೨೧ರ ಚುನಾವಣೆಯಲ್ಲೂ ೯೦ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲು ನಿರ್ಧರಿಸಿದೆ.
ಪಕ್ಷವು ಟಿಎಂಸಿ ಜೊತೆ ಮೈತ್ರಿ ಮಾಡಿಕೊಳ್ಳದಿರುವ ದೊಡ್ಡ ಕಾರಣ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಲ್ಲ, ಎಡಪಂಥೀಯರು ನೀಡುವಷ್ಟು ವಿಧಾನಸಭಾ ಕ್ಷೇತ್ರಗಳನ್ನು ಟಿಎಂಸಿ ಕಾಂಗ್ರೆಸ್‌ಗೆ ನೀಡುವುದಿಲ್ಲ ಎಂಬ ಕಾರಣಕ್ಕೆ. ಆದರೆ ಅದರ ಸ್ಟೈಕ್‌ ರೇಟ್‌ ಕುಸಿಯುತ್ತ ಸಾಗಿದೆ. ತಮಿಳು ನಾಡಿನಲ್ಲಿ ಡಿಎಂಕೆ ಇದೇ ಕಾರಣಕ್ಕೆ ಕಾಂಗ್ರೆಸ್‌ ಕೇಳಿದಷ್ಟು ಸೀಟುಗಳನ್ನು ಕೊಡಲು ಒಪ್ಪಿಲ್ಲ. ಪಾಂಡಿಚೇರಿಯಲ್ಲಿ ಕಾಂಗ್ರೆಸ್‌ ಪಕ್ಷದ ಹೊಂದಾಣಿಕೆ ಡಿಎಂಕೆ ಜೊತೆ ಅಷ್ಟೊಂದು ಸರಿಯಾಗಿಲ್ಲ. ಹೀಗಾಗಿ ಈಗ ಕಾಂಗ್ರೆಸ್‌ ಕೇವಲ ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ಮಿತ್ರಪಪಕ್ಷಗಳನ್ನು ಪಡೆಯುತ್ತಿದೆಯೇ ಹೊರತು ಬಿಜೆಪಿಗೆ ಕಾಂಗ್ರೆಸ್‌ ಪರ್ಯಾಯ ಎಂಬ ಕಾರಣಕ್ಕೆ ಅಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಎಷ್ಟು ಮತಗಳನ್ನು ಪಡೆಯುತ್ತದೆ ಎಂಬುದರ ಮೇಲೆ ಅದರ ಮಿತ್ರಪಕ್ಷಗಳು ಕಾಂಗ್ರೆಸ್‌ ಜೊತೆ ಇರಬೇಕೋ ಬೇಡವೋ ಎಂದು ನಿರ್ಧರಿಸುವ ಸ್ಥಿತಿಯಿದೆ.
ಕೇರಳದಲ್ಲಿ ಕಾಂಗ್ರೆಸ್‌ ಪ್ರಮುಖ ವಿರೋಧ ಪಕ್ಷವಾಗಿದೆ ಹಾಗೂ ಈ ಸಲ ಮತ್ತೆ ಎಡ ಒಕ್ಕೂಟಗಲೇ ಬರುವ ಸಾಧ್ಯತೆ ಹೆಚ್ಚದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಕೇರಳದಲ್ಲಿ ಕಾಂಗ್ರೆಸ್‌ ಅಧಿಕಾರ್ಕೆ ಬರದೇ ಹೋದರೆ ಮುಂದಿನ ದಿನಗಳಲ್ಲಿ ಬಿಜೆಪಿಯು ಎಡರಂಗಕ್ಕೆ ಪರ್ಯಾಯವಾಗಲೂ ಬಹುದು.
ಹೀಗಾಗಿ ಬಿಜೆಪಿ ಜೊತೆ ನೇರ ಸ್ಪರ್ಧೆ ಇರುವ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಸ್ತಿತ್ವ ಗಟ್ಟಿಗೊಳಿಸಿಕೊಳ್ಳದಿದ್ದರೆ ಹಾಗೂ ಕಾಂಗ್ರೆಸ್‌ ಈ ಐದು ರಾಜ್ಯಗಳ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡದಿದ್ದರೆ ಬಿಜೆಪಿಗೆ ಬಲವಿಲ್ಲದ ತೃತೀಯ ರಂಗವೇ ಬಲಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಪರ್ಯಾಯವಾಗಬಹುದು..!

 

4.7 / 5. 3

ಶೇರ್ ಮಾಡಿ :

  1. geek

    ಹಿಂದೆ ಕಾಂಗ್ರೆಸ್ ಗೆ ಪರ್ಯಾಯವಾಗಿ ತೃತೀಯ ರಂಗ ಅಸ್ತಿತ್ವದಲ್ಲಿತ್ತು. ಬಿಜೆಪಿ ತೃತೀಯ ರಂಗದ ಸಖ್ಯ ಮಾಡುತ್ತಿತ್ತು. ಇದೀಗ ಪರಿಸ್ಥಿತಿ ಉಲ್ಟಾ ಆಗಿದೆ. ಆದರೂ ಬಿಜೆಪಿಯ ಬಲ ಮೊದಲಿನಂತೆ ಇಲ್ಲ. ಮೋದಿಯ ಬಂಡವಾಳಶಾಹಿ ನೀತಿಯನ್ನು ಕೋಮುವಾದದ ಮೂಲಕ ಮರೆಮಾಚಲಾಗಿದೆ. ಒಮ್ಮೆ ಇದು ಜನರ ಅರಿವಿಗೆ ಬಂದರೆ ಕಾಂಗ್ರೆಸ್ ಗೆ ಪುನಃ ಜನರು ಬೆಂಬಲಿಸಲಿದ್ದಾರೆ. ನಿಜವಾಗಿ ಅತ್ಯಂತ ಕಷ್ಟಕರ ಪರಿಸ್ಥಿತಿ ಇರುವುದು ಕಮ್ಯೂನಿಸ್ಟ್ ಪಕ್ಷಗಳಿಗೆ. ಅವುಗಳನ್ನು ಕೇಳುವವರೇ ಇಲ್ಲವಾಗಿದೆ. ಬಂಡವಾಳಶಾಹಿಗಳಿಗೂ ಬೇಕಾಗಿದ್ದು ಅದೇ ಆಗಿತ್ತು. ಮೋದಿ ಸರಕಾರ ಮುಗಿಯುವ ವೇಳೆಗೆ ಎಲ್ಲವನ್ನೂ ಖಾಸಗೀಕರಣ ಮಾಡಿ ಯಾವುದೇ ಸರಕಾರ ಬಂದರೂ ಬದಲಾಯಿಸಲು ಆಗದ ರೀತಿ ಮಾಡಿಹೋಗಿರುತ್ತಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement