ಮೇಜರ್ ಜನರಲ್ ಕ್ರಿಸ್ ಡೊನಾಹು – ಅಫ್ಘಾನಿಸ್ತಾನ ತೊರೆದ ಕಟ್ಟಕಡೆ ಅಮೆರಿಕನ್‌ ಸೈನಿಕ..!

ಕಾಬೂಲ್‌: ಅಫ್ಘಾನಿಸ್ತಾನದಿಂದ ಅಮೆರಿಕ​ ಸೇನೆ (US Army)ಸಂಪೂರ್ಣವಾಗಿ ಹೊರನಡೆದಿದೆ.
ಕಳೆದ 20ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕ ಯೋಧರು ಈಗ ಒಬ್ಬರೂ ಇಲ್ಲ. ತಾಲಿಬಾನ್ (Taliban)​ ನೀಡಿದ್ದ ಗಡುವಿಗೂ 24ಗಂಟೆಗೂ ಮೊದಲೇ, ಅಂದರೆ ಸೋಮವಾರ ರಾತ್ರಿ ಮೂರು ವಿಮಾನಗಳ ಮೂಲಕ ಅಮೆರಿಕ ಯೋಧರು ವಾಪಸ್​ ತೆರಳಿದ್ದಾರೆ. ತನ್ಮೂಲಕ ಕಾಬೂಲ್​ ವಿಮಾನ ನಿಲ್ದಾಣ ಕೂಡ ಸಂಪೂರ್ಣವಾಗಿ ತಾಲಿಬಾನ್‌ ಕೈವಶವಾಗಿದೆ.
ಈ ಮಧ್ಯೆ ಅಫ್ಘಾನಿಸ್ತಾನದಿಂದ ಕೊನೆಯವರಾಗಿ ಹೊರಬಿದ್ದ ಯೋಧನ ಫೋಟೋವನ್ನು ಅಮೆರಿಕ ರಕ್ಷಣಾ ಇಲಾಖೆ ಶೇರ್​ ಮಾಡಿದೆ. ಅಫ್ಘಾನಿಸ್ತಾನದಿಂದ ಕೊನೆಯವರಾಗಿ ಹೊರನಡೆದ ಅಮೆರಿಕ ಯೋಧ ಮೇಜರ್​ ಜನರಲ್​ ಕ್ರಿಸ್​ ಡೊನಾಹು. ಅವರು ಅಲ್ಲಿಂದ ವಿಮಾನ ಹತ್ತುವ ಮೂಲಕ ಕಾಬೂಲ್​​ನಲ್ಲಿ 20ವರ್ಷಗಳ ಅಮೆರಿಕ ಮಿಷನ್​ ಮುಕ್ತಾಯವಾಯಿತು. ನಮ್ಮ ಸಂಪೂರ್ಣ ಸೇನೆ ವಾಪಸ್​ ಬಂತು ಎಂದು ಟ್ವೀಟ್ ಮಾಡಿದೆ.
ಆಗಸ್ಟ್​ 15ರಂದು ಕಾಬೂಲ್‌ ಅನ್ನು ತಾಲಿಬಾನ್​ ಸ್ವಾಧೀನಕ್ಕೆ ಪಡೆದುಕೊಂಡ ನಂತರ ಅಲ್ಲಿದ್ದ ಅಮೆರಿಕ ನಾಗರಿಕರು, ಅಮೆರಿಕಕ್ಕೆ ಹೋಗಲು ಇಚ್ಛಿಸುವ ನಾಗರಿಕರನ್ನು ಸ್ಥಳಾಂತರ ಮಾಡುವ ಕಾರ್ಯದಲ್ಲಿ ಅಮೆರಿಕ ಸೇನೆ ತೊಡಗಿಕೊಂಡಿತ್ತು. ಅಮೆರಿಕ ಆಗಸ್ಟ್​ 31ರೊಳಗೆ ಎಲ್ಲ ನಾಗರಿಕರನ್ನೂ ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿತ್ತು. ಆದರೆ ಅದಕ್ಕೂ ಒಂದು ದಿನ ಮೊದಲೇ ಅಂದರೆ, ಆಗಸ್ಟ್​ 30ರ ರಾತ್ರಿಯೇ ಸ್ಥಳಾಂತರ ಕಾರ್ಯ ಮುಕ್ತಾಯಗೊಂಡಿದೆ. ಅಮೆರಿಕ ಸೇನೆ ವಾಪಸ್​ ಹೋಗುತ್ತಿದ್ದಂತೆ ಇತ್ತ ಕಾಬೂಲ್​​ನ್ನು ವಶಪಡಿಸಿಕೊಂಡ ತಾಲಿಬಾನಿಗಳು ಗುಂಡು ಹಾರಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಜನರನ್ನು ಬಹುತೇಕ ಸ್ಥಳಾಂತರ ಮಾಡಿದ್ದೇವೆ. ಆದರೆ ಇನ್ನು 200ಕ್ಕಿಂತಲೂ ಕಡಿಮೆ ಅಮೆರಿಕನ್ನರು ಅಲ್ಲಿಯೇ ಉಳಿದಿದ್ದಾರೆ. ಅವರು ಸ್ವ ಇಚ್ಛೆಯಿಂದ ಅಲ್ಲಿಯೇ ಇದ್ದಾರೆ. ಅವರನ್ನೂ ವಾಪಸ್​ ಕರೆತರಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಲಾಯಿತು. ಆದರೆ ಅಲ್ಲಿಯೇ ಇರುತ್ತೇವೆ ಎಂದಿದ್ದಾರೆ ಎಂದು ಅಮೆರಿಕ ಕಾರ್ಯದರ್ಶಿ ಅಂಟೋನಿ ಬ್ಲಿಂಕನ್​ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಸಾವು

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement