ಬೆಂಗಳೂರು: ₹8 ಲಕ್ಷ ಲಂಚ ಪಡೆಯುತ್ತಿದ್ದ ಜಿಎಸ್‌ಟಿ ಅಧಿಕಾರಿ ಲೋಕಾಯುಕ್ತ ಬಲೆಗೆ

ಬೆಂಗಳೂರು: ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಅಧೀಕ್ಷಕರೊಬ್ಬರು ₹8 ಲಕ್ಷ ಲಂಚ ಸ್ವೀಕರಿಸುತ್ತಿರುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕಾರ್ಯಾಚರಣೆಯ ದೃಶ್ಯಗಳು ಕ್ಯಾಮೆರಾದಲ್ಲೂ ಸೆರೆಯಾಗಿವೆ.
ಬಂಧಿತ ಅಧಿಕಾರಿಯನ್ನು ದಕ್ಷಿಣ ಕಮಿಷನರೇಟ್‌ನ ದಕ್ಷಿಣ ವಿಭಾಗ–4ರ ಕೇಂದ್ರ ಜಿಎಸ್‌ಟಿ (GST) ಅಧೀಕ್ಷಕ ಮೋಹಿತ್ ಪ್ರತಾಪ ಸಿಂಗ್ ಎಂದು ಗುರುತಿಸಲಾಗಿದೆ.
ಲೋಕಾಯುಕ್ತದ ಪ್ರಕಾರ, ಬಾಕಿ ಉಳಿದಿದ್ದ ಕೇಂದ್ರ ಜಿಎಸ್‌ಟಿ ಬಾಕಿ ಪ್ರಕರಣ ಹಾಗೂ ಉದ್ಯಮಿಯೊಬ್ಬರ ವಿರುದ್ಧ ದಾಖಲಾದ ಸುಳ್ಳು ದೂರು ಎಂದು ಹೇಳಲಾದ ಪ್ರಕರಣವನ್ನು ಮುಕ್ತಾಯಗೊಳಿಸಲು ಸಿಂಗ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ದೂರುದಾರರಾದ ಸೈಯದ್ ಜಮೀರ್ ಎಂಬವರು, ತಮ್ಮ ವಿರುದ್ಧ ಕೇಂದ್ರ ಜಿಎಸ್‌ಟಿ ಬಾಕಿ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ಸುಳ್ಳು ದೂರನ್ನು ಮುಕ್ತಾಯಗೊಳಿಸಲು ಮೋಹಿತ್ ಪ್ರತಾತ ಸಿಂಗ್ ₹8 ಲಕ್ಷ ಲಂಚ ಕೇಳಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಬೆಂಗಳೂರು ನಗರ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಮಧ್ಯವರ್ತಿಯ ಮೂಲಕ ಹಣ ಸ್ವೀಕರಿಸುತ್ತಿದ್ದಾಗ ಅಧಿಕಾರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಲಾಗಿದೆ. ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ ವ್ಯಕ್ತಿಯೊಬ್ಬನನ್ನು ಪ್ರಕರಣದ ಆರೋಪಿ ಪಟ್ಟಿಯಲ್ಲಿ ಸೇರಿಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳ ಮಾಹಿತಿ ಪ್ರಕಾರ, ಕೊರಮಂಗಲದ ಕೇಂದ್ರಿಯ ಸದನದಲ್ಲಿರುವ ಮೋಹಿತ್ ಪ್ರತಾಪ ಸಿಂಗ್ ಕಚೇರಿ ಕೊಠಡಿಯಲ್ಲೇ ಲಂಚದ ಹಣವನ್ನು ಸ್ವೀಕರಿಸಲಾಗಿದ್ದು, ಅಲ್ಲಿಯೇ ಬಲೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಭ್ರಷ್ಟಾಚಾರ ತಡೆ ಕಾಯ್ದೆ–1988ರ (2018ರ ತಿದ್ದುಪಡಿ) ಸೆಕ್ಷನ್ 7ಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಲೋಕಾಯುಕ್ತ ಅಧಿಕಾರಿಗಳು ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಮತ್ತೆ 23 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದ ಸರ್ಕಾರ ; ಒಟ್ಟು ತಾಲೂಕುಗಳ ಸಂಖ್ಯೆ 124ಕ್ಕೆ ಏರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement