ನವದೆಹಲಿ : ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ–ಕಮಾಲ್ ಮೌಲಾ ಮಸೀದಿ ಸಂಕೀರ್ಣವನ್ನು ಹಿಂದೂ ದೇವಾಲಯವೆಂದು ಘೋಷಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಮೇ 15ರ ತೀರ್ಪನ್ನು ಪ್ರಶ್ನಿಸಿ ಮುಸ್ಲಿಮ್ ಪಕ್ಷದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಸೀಮಿತ ಮಧ್ಯಂತರ ಪರಿಹಾರ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನು ಒಳಗೊಂಡ ಪೀಠವು, ವಿವಾದಿತ ಸ್ಥಳದ ಸಮೀಪದ ಪ್ರತ್ಯೇಕ ತೆರೆದ ಜಾಗದಲ್ಲಿ ಮುಸ್ಲಿಮರಿಗೆ ಪ್ರತಿ ಶುಕ್ರವಾರ ಮಧ್ಯಾಹ್ನ 1ರಿಂದ 3 ಗಂಟೆ ವರೆಗೆ ನಮಾಜ್ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಆದೇಶಿಸಿದೆ.
“ಎರಡೂ ಪಕ್ಷಗಳ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ ಹಾಗೂ ಮಧ್ಯಂತರ ಕ್ರಮವಾಗಿ, ಅರ್ಜಿದಾರರಾದ ಮುಸ್ಲಿಮರಿಗೆ ವಿವಾದಿತ ಸ್ಥಳದ ಪಕ್ಕದ ಅಥವಾ ಸಮೀಪದ ಪ್ರತ್ಯೇಕ ತೆರೆದ ಜಾಗದಲ್ಲಿ ಪ್ರತಿ ಶುಕ್ರವಾರ ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ನಮಾಜ್ ಮಾಡಲು ಅವಕಾಶ ನೀಡಬೇಕು. ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳು ನೇಮಿಸುವ ಸೂಕ್ತ ಪೀಠದ ಮುಂದೆ ಪಟ್ಟಿ ಮಾಡಬೇಕು. ಈ ವ್ಯವಸ್ಥೆ ತಾತ್ಕಾಲಿಕವಾಗಿದ್ದು, ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ,” ಎಂದು ನ್ಯಾಯಪೀಠ ಆದೇಶಿಸಿದೆ.
ಇದೇ ವೇಳೆ, ಮಧ್ಯಪ್ರದೇಶ ಹೈಕೋರ್ಟ್‌ನ ಮೇ 15ರ ತೀರ್ಪಿನ ಆಧಾರದ ಮೇಲೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಂಕೀರ್ಣದಲ್ಲಿ ಕೈಗೊಂಡಿರುವ ಯಾವುದೇ ಬದಲಾವಣೆಗಳನ್ನು ಸುಪ್ರೀಂ ಕೋರ್ಟ್‌ನ ಪೂರ್ವಾನುಮತಿಯಿಲ್ಲದೆ ಜಾರಿಗೆ ತರಬಾರದು ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ
ಭೋಜಶಾಲಾ–ಕಮಾಲ್ ಮೌಲಾ ಮಸೀದಿ ಸಂಕೀರ್ಣದ ಧಾರ್ಮಿಕ ಸ್ವರೂಪಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಮೇ 15ರಂದು ಮಹತ್ವದ ತೀರ್ಪು ನೀಡಿತ್ತು. ಹೈಕೋರ್ಟ್ ತನ್ನ ತೀರ್ಪಿನಲ್ಲಿ, ವಿವಾದಿತ ಪ್ರದೇಶದ ಧಾರ್ಮಿಕ ಸ್ವರೂಪವು ಸರಸ್ವತಿ ದೇವಿಯ ದೇವಾಲಯ ಹೊಂದಿದ್ದ ಭೋಜಶಾಲಾ ಎಂಬುದಾಗಿ ಹೇಳಿತ್ತು. ಇದರೊಂದಿಗೆ, 2003ರಲ್ಲಿ ಎಎಸ್‌ಐ ಹೊರಡಿಸಿದ್ದ, ಮುಸ್ಲಿಮರಿಗೆ ಅಲ್ಲಿ ನಮಾಜ್ ಸಲ್ಲಿಸಲು ಅನುಮತಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿತ್ತು. ಅಲ್ಲದೆ, ಹೊಸ ಮಸೀದಿ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದ ಬಳಿ ಪರ್ಯಾಯ ಸ್ಥಳ ಕೋರಿ ಮುಸ್ಲಿಮರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತ್ತು.
ಐತಿಹಾಸಿಕ ದಾಖಲೆಗಳು ಹಾಗೂ ಪುರಾತತ್ವ ಸಾಕ್ಷ್ಯಗಳು ಈ ಸ್ಥಳದಲ್ಲಿ ಸರಸ್ವತಿ ದೇವಿಯ ದೇವಸ್ಥಾನ ಅಸ್ತಿತ್ವದಲ್ಲಿತ್ತು ಎಂಬುದನ್ನು ದೃಢಪಡಿಸುತ್ತವೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತ್ತು. ಈ ತೀರ್ಪನ್ನು ಪ್ರಶ್ನಿಸಿ ಖಾಜಿ ಮೊಯಿನುದ್ದೀನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ