ಬೆಳಗಾವಿ: ನಾವಗೆ ಗ್ರಾಮದ ಸನಿಹದ ಟಿಕ್ಸ್ ಟೇಪ್ (ಅಂಟು) ತಯಾರಿಸುವ ಸ್ನೇಹಂ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದು, ಈ ದುರ್ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ಬೆಳಗಾವಿ ತಾಲೂಕಿನ ಕವಳವಾಡಿಯ ಮಾರುತಿ ನಾರಾಯಣ ಕರವೇಕರ (32), ಹಳೇ ಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಲಗುಡೆ (35) ಮತ್ತು ರಾಝವಾಡಿಯ ರಂಜಿತ ದಶರಥ ಪಾಟೀಲ (39) ಎಂಬ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೂವರ ಸ್ಥಿತಿ ಗಂಭೀರವಾಗಿದ್ದು, ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕೆಎಲ್‌ಇ ಆಸ್ಪತ್ರೆಗೆ ಸಾಗಿಸಲಾಗಿದೆ. ಮಾರ್ಕಂಡೇಯ ನಗರದ ಯಲ್ಲಪ್ಪ (20) ಎಂಬ ಕಾರ್ಮಿಕ ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.
ಆರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.ಬೆಂಕಿ ಅವಘಡದ ಮಾಹಿತಿ ಕಾಳಿಚ್ಚಿನಂತೆ ಹರಡಿದ್ದು ಸುತ್ತಮುತ್ತಲಿನ ಜನ ಕಾರ್ಖಾನೆ ಇರುವ ಸ್ಥಳಕ್ಕೆ ಧಾವಿಸಿದ್ದಾರೆ.
ಸ್ನೇಹಂ ಹೆಸರಿನ ಈ ಕಾರ್ಖಾನೆಯಲ್ಲಿ ಮೂರು ಶಿಫ್ಟ್‌ಗಳಲ್ಲಿ ತಲಾ 74 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಂಕಿ ಅವಘಡ ಮಂಗಳವಾರ ರಾತ್ರಿ ಸುಮಾರು 8:30 ರ ಸುಮಾರಿಗೆ ಸಂಭವಿಸಿದೆ. ಹೀಗಾಗಿ ಒಳಗೆ ಯಾರಾದರೂ ಇದ್ದಾರೆಯೋ ಅಥವಾ ಪಾರಾಗಿದ್ದಾರೆಯೋ ಎಂಬುದು ಗೊತ್ತಾಗುತ್ತಿಲ್ಲ. ಎಲ್ಲವೂ ಅಯೋಮಯವಾಗಿದೆ.
ಎರಡನೇ ಶಿಫ್ಟ್ ಬಿಡುವ ವೇಳೆ ಏಕಾಏಕಿ ಲಿಫ್ಟ್ನಲ್ಲಿ ಸಣ್ಣ ಪ್ರಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿ ಧಗ ಧಗಿಸಿ ಇಡೀ ಫ್ಯಾಕ್ಟರಿಗೆ ಆವರಿಸಿಕೊಂಡಿದೆ. ಮಂಗಳವಾರ ಮಳೆ ಬಿಡುವು ಪಡೆದುಕೊಂಡಿತ್ತು. ಇದರಿಂದ ಬೆಂಕಿ ಮತ್ತಷ್ಟು ಪ್ರಖರ ರೂಪ ಪಡೆದುಕೊಂಡು ಅದರ ಜ್ವಾಲೆ ಎಲ್ಲಾ ಕಡೆ ಅತಿ ವೇಗದಿಂದ ಹರಡಿತು.


ನಿಮ್ಮ ಕಾಮೆಂಟ್ ಬರೆಯಿರಿ