ಬಹುಮುಖ ಪ್ರತಿಭೆಯ ಬರಹಗಾರ ಡಾ.ಜಿನದತ್ತ ಹಡಗಲಿಗೆ ಇಂದು(ಜುಲೈ 7) ಸಾಹಿತ್ಯಾವಲೋಕನದ ಮೂಲಕ ಅಭಿನಂದನೆ, ಸ್ನೇಹಸಿಂಧು ಗ್ರಂಥ ಬಿಡುಗಡೆ

(೦೭-೦೭-೨೦೨೪ರಂದು ಬೆಳಿಗ್ಗೆ ೯: ೩೦ ರಿಂದ ಡಾ. ಜಿನದತ್ತ ಹಡಗಲಿ ಅವರ ಸಾಹಿತ್ಯಾವಲೋಕನ, ಅಭಿನಂದನೆ ಮತ್ತು ಸ್ನೇಹಸಿಂಧು ಗ್ರಂಥ ಬಿಡುಗಡೆ ಕಾರ್ಯಕ್ರಮ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್. ಸನ್ನಿಧಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದು, ಆ ನಿಮಿತ್ತ ಲೇಖನ)
ಅತ್ಯುತ್ತಮ ಪ್ರಾಧ್ಯಾಪಕ, ಸೃಜನಶೀಲ ಬರಹಗಾರ, ದಿನನಿತ್ಯದ ಬದುಕು ಮತ್ತು ಗ್ರಾಮೀಣ ಚಿತ್ರಣ ಹಾಗೂ ಜ್ವಲಂತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಬರಹಗಾರ, ಕಲೆ, ಸಾಹಿತ್ಯ, ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡ ನಟ, ನಿರ್ದೇಶಕ ಮತ್ತು ನಾಟಕಕಾರರಾದ ಡಾ. ಜಿನದತ್ತ ಹಡಗಲಿ ಅವರ ಸಾಹಿತ್ಯಾವಲೋಕ, ಅವರಿಗೆ ಅಭಿನಂದನೆ ಹಾಗೂ ಸ್ನೇಹಸಿಂಧು ಗ್ರಂಥ ಬಿಡುಗಡೆ ಕಾರ್ಯಕ್ರಮ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್. ಸನ್ನಿಧಿ ಕಲಾಕ್ಷೇತ್ರದಲ್ಲಿ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳಿಂದ ಜುಲೈ ೭ರಂದು ದಿನವಿಡೀ ನಡೆಯುತ್ತಿದೆ.
ಡಾ. ಜಿನದತ್ತ ಹಡಗಲಿ ಅವರದ್ದು ಕ್ರಿಯಾಶೀಲ ವ್ಯಕ್ತಿತ್ವ. ಸದಾ  ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರು. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದವರಾದ ೬೧ ವಯಸ್ಸಿನ (ಜನನ ೧೦-೦೬-೧೯೬೪) ಡಾ.ಜಿನದತ್ತ ಹಡಗಲಿ ತಮ್ಮೂರಾದ ಹರ್ಲಾಪುರದಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದಾರೆ. ಶಿಗ್ಲಿಯಲ್ಲಿ ಪ್ರೌಢ ಶಿಕ್ಷಣ ಪಡೆದ ನಂತರ ಪದವಿ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದ ಅವರುಸ್ನಾತಕೋತ್ತರ ಪದವಿಯನ್ನೂ ಧಾರವಾಡದಲ್ಲಿಯೇ ಪಡೆದಿದ್ದಾರೆ.
೧೯೯೧ರಲ್ಲಿ ಮಹಾಲಿಂಗಪುರದ ಎಸ್.ಸಿ.ಪಿ. ಕಲಾ ಮತ್ತು ಡಿ.ಡಿ.ಶಿರೋಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ೨೦೦೫ರ ವರೆಗೆ ಅಲ್ಲಿಯೇ ಸೇವೆ ಸಲ್ಲಿಸಿದ್ದಾರೆ. ೨೦೦೫ರಿಂದ ಎಸ್.ಡಿ.ಎಂ. ಸಂಸ್ಥೆಯ ಧಾರವಾಡದ ಜೆ.ಎಸ್.ಎಸ್. ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಈಗ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ೨೦೦೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಡಾ. ವೀರಣ್ಣ ರಾಜೂರ ಅವರ ಮಾರ್ಗದರ್ಶನದಲ್ಲಿ “ಕನ್ನಡ ಹವ್ಯಾಸಿ ರಂಗಭೂಮಿ ಒಂದು ಅಧ್ಯಯನ” ಎಂಬ ವಿಷಯ ಕುರಿತು ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಅಲ್ಲದೆ, ಬಸವ ಸ್ಟಡೀಜ್ ಮತ್ತು ಜೈನಾಲಜಿಯಲ್ಲಿ ಡಿಪ್ಲೋಮಾ ಪದವಿ ಸಹ ಪಡೆದಿದ್ದಾರೆ.
ಡಾ. ಹಡಗಲಿ ಅವರ “ಸಿಂಚನ” ವೈಚಾರಿಕ ಲೇಖನಗಳ ಸಂಗ್ರಹ, ಕನ್ನಡ ಹವ್ಯಾಸ ರಂಗಭೂಮಿ ಒಂದು ಅಧ್ಯಯನ, ವಿಲಾಸಿ ರಂಗಸಿರಿ, “ಮೂರು ನಾಟಕಗಳು” ಈ ಕೃತಿಗಳು ಪ್ರಕಟವಾಗಿವೆ. “ಮಂದಾರ” ಸಾಹಿತ್ಯ ಪರಿಚಾರಕ, ಸತ್ವ, ಸಮಾಜರತ್ನ, ಭಾರತೀಯ ಭಾಷೆಗಳಲ್ಲಿ ಮಹಿಳಾ ಕಾವ್ಯ, ಕಾವ್ಯ ಸಂಪದ ಹಾಗೂ ವೈಚಾರಿಕ ಸಾಹಿತ್ಯ, ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಚೆನ್ನುಡಿ ಭಾಗ-೨, ಮಾತೋಶ್ರೀ ಶ್ರೀಮತಿ ವಿ.ಹೆಗ್ಗಡೆಯವರ “ಮಗಳಿಗೊಂದು ಪತ್ರ”, ಹಿರಿಹೊಳೆ, ಶಾಸನ, ಸಂಶೋಧನೆ, ಮಹಿಳಾ ಸಾಹಿತ್ಯ, ವಾಗ್ದೇವಿ, ವಿಶ್ವಮಾನ್ಯ ಸಮೃದ್ಧಿ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಚಂದ್ರನಾಥ ಪ್ರಕಾಶನದ ಮೂಲಕ ೪೦ಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿದ್ದಾರೆ.
ನಟ, ನಿರ್ದೇಶಕ ಮತ್ತು ನಾಟಕಕಾರರಾದ ಡಾ.ಜಿನದತ್ತ ಹಡಗಲಿ ಅವರು ಹಲವಾರು ನಾಟಕಗಳನ್ನು ಪ್ರದರ್ಶಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಧಾರವಾಡ ಆಕಾಶ ವಾಣಿಯ ಕೇಂದ್ರದ ಸಂಪರ್ಕದಲ್ಲಿರುವ ಅವರು ನೂರಕ್ಕೂ ಹೆಚ್ಚಿನ ಭಾಷಣ, ಚಿಂತನ ಮತ್ತು ಹರಟೆ ಕಾರ‍್ಯಕ್ರಮಗಳನ್ನು ಪ್ರಸ್ತುಪಡಿಸಿದ್ದಾರೆ. ಅವರು ಸಂಗೀತ ನಾಟಕಗಳಿಗೂ ವಿಶೇಷ ಕೊಡುಗೆ ನೀಡಿದ್ದಾರೆ. ಸುವರ್ಣ ಕರ್ನಾಟಕ ವರ್ಷಾಚರಣೆ ಮತ್ತು ಅಖಿಲ ಕರ್ನಾಟಕ ೧೦ನೇ ಹಸ್ತಪ್ರತಿ ಸಮ್ಮೇಳನದ ಸಂಯೋಜಕರಾಗಿ, ೨೫ಕ್ಕೂ ಹೆಚ್ಚಿನ ಗ್ರಾಮೀಣ ಮತ್ತು ನಗರ ಪ್ರವೇಶಗಳಲ್ಲಿ ದಶಧರ್ಮ ಮತ್ತು ಧಾರ್ಮಿಕ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಪದವಿ ವಿಭಾಗದ ಕನ್ನಡ ಭಾಷೆಯ ಮತ್ತು ಕೆಎಲ್‌ಇ ಸಂಸ್ಥೆಯ ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯದ ಪಠ್ಯಕ್ರಮದ ಬೋರ್ಡ ಆಫ್ ಮೆಂಬರ್ ಆಗಿ ಕಾರ‍್ಯನಿರ್ವಹಿಸಿದ ಅವರು, ಕನ್ನಡ ಭಾಷೆಯ ಬೋಧನೆ, ಕನ್ನಡ ಭಾಷೆ ಮತ್ತು ತಂತ್ರಜ್ಞಾನ, ಆಡಳಿತ ಭಾಷೆಯಾಗಿ ಕನ್ನಡ ಮೊದಲಾದ ವಿಷಯಗಳ ಮೇಲೆ ಪ್ರಬಂಧಗಳನ್ನು ಮಂಡಿಸಿದ್ದಾರೆ. ೨೦೧೮ರಲ್ಲಿ ಕುಂದಗೋಳ ನಡೆದ ಆರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಾಯಿ ಯಮನಮ್ಮ ಹಡಗಲಿ ಅವರ ಹೆಸರಿನಲ್ಲಿ ಮತ್ತು ಮಾವಂದಿರಾದ ಡಾ. ಶಿವಾನಂದ ಗಾಳಿ ಅವರ ಹೆಸರಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದಾರೆ.
ಶಿಸ್ತು, ಸರಳತೆ ಕ್ರಿಯಾಶೀಲತೆಯ ಡಾ. ಜಿನದತ್ತ ಅವರು ಶಿಕ್ಷಕರಾದ ಚಂದ್ರಶೇಖರ ಉಮಚಗಿ ಎಚ್.ಎಚ್.ರಟಗೇರಿ, ಪ್ರೊ. ಬಿ.ವಿ. ಗುಂಜೆಟ್ಟಿ, ಡಾ. ವಿ.ಎಸ್. ಆರಾಧ್ಯಮಠ, ಪ್ರೊ.ವಿ.ಆರ್. ಸಂದೋಗಿಮಠ, ಡಾ. ಎಚ್.ಎಂ.ಬೀಳಗಿ ಮುಂತಾದ ಶಿಕ್ಷಕರ ಪ್ರಭಾವ ತಮ್ಮ ಮೇಲೆ ಆಗಿದೆ ಎಂದು ಸ್ಮರಿಸುತ್ತಾರೆ.
ಮಹಾಲಿಂಗಪುರದ ಶರಣ ಚೇತನ ಬಳಗದ ಸಂಸ್ಥಾಪಕ ಕಾರ‍್ಯದರ್ಶಿಯಾಗಿ ಪ್ರತಿ ತಿಂಗಳು ಒಬ್ಬ ಶರಣರ ಜೀವನ ಸಾಧನೆಗಳ ಕುರಿತು ಮೂರು ವರ್ಷಗಳವರೆಗೆ ಕಾರ್ಯಕ್ರಮ ಆಯೋಜಿಸಿದ ಶ್ರೇಯಸ್ಸು ಹಡಗಲಿ ಅವರದ್ದು. ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನದ ಕಾರ‍್ಯದರ್ಶಿಯಾಗಿ, ಧಾರವಾಡದ ಜೆ.ಎಸ್.ಎಸ್.ಸಂಸ್ಥೆಯ ಡಾ. ಡಿ.ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿಯಾಗಿ, ಕನ್ನಡದ ಕಣ್ವ ಪ್ರೊ. ಬಿ.ಎಂ. ಶ್ರೀಕಂಠಯ್ಯ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ದ.ರಾ. ಬೇಂದ್ರೆ ಅವರ ಜೀವನ ಹಾಗೂ ಸಾಹಿತ್ಯ ಕುರಿತಾದ ವಿಚಾರ ಸಂಕಿರಣ ಸಂಯೋಜಯಕರಾಗಿಯೂ ಕೆಲಸ ಮಾಡಿದ್ದಾರೆ.
ಕರ್ನಾಟಕ ವಿಶ್ವ ವಿದ್ಯಾಲಯದ ಜೈನ ಅಧ್ಯಯನ ಪೀಠದ ಸಂಯೋಜಕರಾಗಿ ೨೦೧೭ ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ‍್ಯದರ್ಶಿಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಶಿಕ್ಷಕರ ಸಂಘ, ಕ.ವಿ.ವಿ. ವ್ಯಾಪ್ತಿಯ ಕನ್ನಡ ಅಧ್ಯಾಪಕರ ಪರಿಷತ್ತಿನ ಸದಸ್ಯರಾಗಿ, ಕಾರ್ಯಾಧ್ಯಕ್ಷರಾಗಿ ಹಡಗಲಿ ಅವರು ರಚನಾತ್ಮಕ ಕೆಲಸ ಮಾಡುತ್ತಿದ್ದಾರೆ.
ವ್ಯಾಪಕವಾದ ಅಧ್ಯಯನ, ಸಂಶೋಧನೆ ಮತ್ತು ಅನುಭವಗಳ ಹಿನ್ನಲೆಯ ಡಾ. ಹಡಗಲಿ ಅವರಿಗೆ ಶಿಕ್ಷಕ ರತ್ನ, ಶಿಕ್ಷಕ ಸಿರಿ, ಸಾಧಕ, ಸಂಶೋಧಕ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಧಾರವಾಡದ ರಜತಗಿರಿಯ ಅವರ ಮನೆ “ರತ್ನತ್ರಯ” ದಲ್ಲಿ ೧೦೦೦ಕ್ಕೂ ಹೆಚ್ಚಿನ ಪುಸ್ತಕಗಳುಳ್ಳ ವೈಯಕ್ತಿಕ ಗ್ರಂಥಗಳ ಗ್ರಂಥಾಲಯವನ್ನು ಹೊಂದಿದ್ದಾರೆ.
ತಮ್ಮೆಲ್ಲ ಕಾರ್ಯ ಚಟುವಟಿಕೆಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪ್ರೊ. ಡಿ. ವೀರೇಂದ್ರ ಹೆಗ್ಗಡೆ, ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿದ್ದ ಪ್ರೊ. ಎನ್. ವಜ್ರಕುಮಾರ, ಹಾಲಿ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ತಂದೆ ಅನಂತಪ್ಪ, ತಾಯಿ ಯಮನಮ್ಮ, ಮಾವ ಡಾ. ಶಿವಾನಂದ ಗಾಳಿ, ಅತ್ತೆ ಶ್ರೀಮತಿ ಸಂಪೂರ್ಣ ಅವರ ಪ್ರೋತ್ಸಾಹ ಮತ್ತು ನಿವೃತ್ತ ಪ್ರಾಚಾರ್ಯ ಡಾ. ಬಿ.ಜಿ. ಬಿರಾದಾರ, ಡಾ. ಬಾಳಾ ಸಾಹೇಬ ಲೋಕಾಪುರ, ಸಂಗಮೇಶ ಕೋಟಿ, ನಿವೃತ್ತ ಗ್ರಂಥಪಾಲಕರಾದ ವೈ.ಬಿ. ಕೊರಡೂರ, ಸಂಸ್ಥೆಯ ಪ್ರಾಚಾರ್ಯರು, ಸಿಬ್ಬಂದಿ, ಪತ್ನಿ ಸುಜಾತಾ, ಮಗ ಸಿದ್ಧಾಂತ ಸಹಕಾರವೇ ಕಾರಣ ಎಂದು ಹೇಳುತ್ತಾರೆ.
ಡಾ. ಜಿನದತ್ತ ಹಡಗಲಿ ಅವರು ಒಬ್ಬ ಬಹುಮುಖ ಪ್ರತಿಭೆಯ ಕ್ರಿಯಾಶೀಲ ಹಾಗೂ ಜನಾನುರಾಗಿ ವ್ಯಕ್ತಿಯಾಗಿ ನಿರಂತರವಾಗಿ ಕಾರ್ಯ ಮಾಡುತ್ತಿದ್ದಾರೆ.
ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು, ಕರ್ನಾಟಕ ಸಂಸ್ಕೃತಿ ನಮ್ಮಲ್ಲಿ ರಕ್ತಗತವಾಗಬೇಕು. ಬೇರೆ ಬೇರೆ ಭಾಷೆಗಳನ್ನು ಸುಲಭವಾಗಿ ಕಲಿಯಲು ಮನಸ್ಸು ಮಾಡುವ ಕನ್ನಡಿಗರು ಕನ್ನಡ ಭಾಷೆಯನ್ನೂ ಬೇರೆಯವರು ಕಲಿಯುವಂತೆ ಮಾಡಲು ಶ್ರಮಿಸಬೇಕೆನ್ನುತ್ತಾರೆ.
-ಡಾ. ಬಿ. ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

ಪ್ರಮುಖ ಸುದ್ದಿ :-   ಒಎಸ್‌ಎಂ ಮೌಲ್ಯಮಾಪನ ವಿವಾದದ ಬೆನ್ನಲ್ಲೇ ಬಿಗ್ ಸರ್ಜರಿ: ಸಿಬಿಎಸ್‌ಇ ನೂತನ ಮುಖ್ಯಸ್ಥರಾಗಿ ಲೋಖಂಡೆ ಪ್ರಶಾಂತ ಸೀತಾರಾಮ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement