ವಾಷಿಂಗ್ಟನ್ : ಕೆರಿಬಿಯನ್ ಸಮುದ್ರದಲ್ಲಿ ನಡೆದ ಮಿಲಿಟರಿ ದಾಳಿಯಲ್ಲಿ ‘ಮಾದಕವಸ್ತು ಸಾಗಣೆಯ ಜಲಾಂತರ್ಗಾಮಿ ನೌಕೆ’ಯನ್ನು ನಾಶಪಡಿಸಿದ ನಂತರ, ಬದುಕಿ ಉಳಿದ ಇಬ್ಬರು ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರನ್ನು ಅವರ ತಾಯ್ನಾಡಾದ ಈಕ್ವೆಡಾರ್ ಮತ್ತು ಕೊಲಂಬಿಯಾಗಳಿಗೆ ಕಳುಹಿಸಲಾಗುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ತಿಳಿಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
“ಮಾದಕವಸ್ತು ಸಾಗಣೆಯ ಚಿರಪರಿಚಿತ ಮಾರ್ಗದಲ್ಲಿ, ಅಮೆರಿಕದ ಕಡೆಗೆ ಬರುತ್ತಿದ್ದ ಅತ್ಯಂತ ದೊಡ್ಡ ‘ಮಾದಕವಸ್ತು ಹೊತ್ತ ಜಲಾಂತರ್ಗಾಮಿ ನೌಕೆ’ಯನ್ನು ನಾಶಪಡಿಸಿದ್ದು ನನಗೆ ಹೆಮ್ಮೆಯ ವಿಷಯವಾಗಿದೆ,” ಎಂದು ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ವೇದಿಕೆಯಲ್ಲಿ ಹೇಳಿದ್ದಾರೆ. ಆ ನೌಕೆಯು ಫೆಂಟಾನಿಲ್ ಮತ್ತು ಇತರ ಮಾದಕವಸ್ತುಗಳಿಂದ ತುಂಬಿತ್ತು ಎಂದೂ ಅವರು ಹೇಳಿದ್ದಾರೆ.
“ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಜೀವಂತ ಉಳಿದಿರುವ ಇಬ್ಬರು ಭಯೋತ್ಪಾದಕರನ್ನು ಬಂಧನ ಮತ್ತು ಕಾನೂನು ಪ್ರಕ್ರಿಯೆಗಳಿಗಾಗಿ ಅವರ ಮೂಲ ದೇಶಗಳಾದ ಈಕ್ವೆಡಾರ್ ಮತ್ತು ಕೊಲಂಬಿಯಾಗಳಿಗೆ ವಾಪಸ್ ಕಳುಹಿಸಲಾಗುತ್ತಿದೆ” ಎಂದು ಟ್ರಂಪ್ ತಿಳಿಸಿದ್ದಾರೆ.
ಈ ಬಗ್ಗೆ ಕೊಲಂಬಿಯಾದ ಅಧ್ಯಕ್ಷ ಗುಸ್ತಾವೋ ಪೆಟ್ರೋ ಕೂಡ ದೃಢಪಡಿಸಿದ್ದು, ಕೊಲಂಬಿಯಾದ ಶಂಕಿತ ವ್ಯಕ್ತಿಯನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. “ಅವರು ಜೀವಂತವಾಗಿ ಉಳಿದಿರುವುದು ಸಂತೋಷದ ವಿಷಯ ಮತ್ತು ಕಾನೂನಿನ ಪ್ರಕಾರ ಅವರ ಮೇಲೆ ಮೊಕದ್ದಮೆ ಹೂಡಲಾಗುವುದು,” ಎಂದು ಪೆಟ್ರೋ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ತಿಳಿಸಿದ್ದಾರೆ.
ಟ್ರಂಪ್ ಶುಕ್ರವಾರ ಘೋಷಿಸಿದ್ದ ಈ ದಾಳಿಯು, ಲ್ಯಾಟಿನ್ ಅಮೆರಿಕಾದಿಂದ ಅಮೆರಿಕಕ್ಕೆ ಮಾದಕವಸ್ತು ಬರುವುದನ್ನು ತಡೆಯುವ ಉದ್ದೇಶ ಹೊಂದಿದೆ ಎಂದು ಹೇಳಲಾಗುವ ಇದು, ಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ಇತ್ತೀಚಿನ ಭಾಗವಾಗಿದೆ.
ಸೆಪ್ಟೆಂಬರ್‌ನಿಂದ ಕೆರಿಬಿಯನ್ ಸಮುದ್ರದಲ್ಲಿ ಕನಿಷ್ಠ ಆರು ಹಡಗುಗಳನ್ನು, ಅದರಲ್ಲಿ ಹೆಚ್ಚಿನವು ಸ್ಪೀಡ್‌ಬೋಟ್‌ಗಳು ಅಮೆರಿಕ ದಾಳಿಗೆ ಒಳಗಾಗಿದೆ.
ತಮ್ಮ ಈ ಕಾರ್ಯಾಚರಣೆಯು ಮಾದಕವಸ್ತು ಕಳ್ಳಸಾಗಣೆಗೆ ನಿರ್ಣಾಯಕ ಹೊಡೆತ ನೀಡುತ್ತಿದೆ ಎಂದು ವಾಷಿಂಗ್ಟನ್ ಹೇಳಿಕೊಂಡಿದೆ. ಆದರೆ ಈವರೆಗೆ ಕನಿಷ್ಠ 27 ಜನರು ಸಾವಿಗೀಡಾಗಿದ್ದು ಅವರು ಮಾದಕವಸ್ತು ಕಳ್ಳಸಾಗಣೆದಾರರೇ ಆಗಿದ್ದರು ಎಂಬುದಕ್ಕೆ ಯಾವುದೇ ಪುರಾವೆಯನ್ನು ಅಮೆರಿಕ ನೀಡಿಲ್ಲ.
ಆರೋಪಿತ ಮಾದಕವಸ್ತು ಸಾಗಣೆ ಜಲಾಂತರ್ಗಾಮಿ ನೌಕೆ ಎಲ್ಲಿಂದ ಹೊರಟಿತ್ತು ಎಂಬುದನ್ನು ಅಮೆರಿಕ ಇನ್ನೂ ಬಹಿರಂಗಪಡಿಸಿಲ್ಲ. ವರ್ಷಗಳಿಂದ ಗುಪ್ತ ಅರಣ್ಯ ಹಡಗುಕಟ್ಟೆಗಳಲ್ಲಿ ನಿರ್ಮಿಸಲಾದ ಅರೆ-ಜಲಾಂತರ್ಗಾಮಿ ನೌಕೆಗಳನ್ನು (semi-submersibles) ಸಾಮಾನ್ಯವಾಗಿ ಪೆಸಿಫಿಕ್ ಸಾಗರದ ಮೂಲಕ, ದಕ್ಷಿಣ ಅಮೆರಿಕ, ವಿಶೇಷವಾಗಿ ಕೊಲಂಬಿಯಾದಿಂದ ಮಧ್ಯ ಅಮೆರಿಕಾ ಅಥವಾ ಮೆಕ್ಸಿಕೋಗೆ ಕೊಕೇನ್ ಸಾಗಿಸಲು ಬಳಸಲಾಗುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ