ಹಿಜಾಬ್‌ ವಿವಾದ: ವಿಚಾರಣೆ ನಾಳೆ ಮತ್ತೆ ವಿಚಾರಣೆ, ಶಾಂತಿ, ನೆಮ್ಮದಿ ಕಾಪಾಡಲು ವಿದ್ಯಾರ್ಥಿಗಳು, ಜನತೆಗೆ ಕರ್ನಾಟಕ ಹೈಕೋರ್ಟ್‌ ಮನವಿ

ಬೆಂಗಳೂರು: ರಾಜ್ಯದಾದ್ಯಂತ ಹಿಜಾಬ್‌ ವಿವಾದ ತಾರಕಕ್ಕೇರಿರುವ ನಡುವೆಯೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಶಾಂತಿ ಮತ್ತು ನೆಮ್ಮದಿ ಕಾಪಾಡುವಂತೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮನವಿ ಮಾಡಿದೆ.
ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕುಂದಾಪುರದ ಭಂಡಾರ್ಕಾರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಸಲ್ಲಿಸಿರುವ ಮೂರು ಪ್ರತ್ಯೇಕ ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠ ಈ ಮನವಿ ಮಾಡಿದೆ. ವಿಚಾರಣೆ ನಾಳೆ ಬುಧವಾರವೂ ನಡೆಯಲಿದ್ದು, ಬುಧವಾರ ಮಧ್ಯಾಹ್ನ 2:30ಕ್ಕೆ ನಿಗದಿ ಮಾಡಲಾಗಿದೆ.

ಕಲಾಪದ ದಿನದಂತ್ಯಕ್ಕೆ ತಲುಪಿದಾಗ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಪ್ರಕರಣದ ವಿಚಾರಣೆ ಮಧ್ಯಂತರದಲ್ಲಿರುವಾಗ ಧರಣಿ ಮತ್ತು ಕಾನೂನು, ಸುವ್ಯವಸ್ಥೆ ಸಮಸ್ಯೆ ಉಂಟಾಗಿದೆ ಎಂಬ ವಿಷಯವನ್ನು ನನ್ನ ಗಮನಕ್ಕೆ ತರಲಾಗಿದೆ. ಹೀಗಾಗಿ, ಯಾವುದೇ ತೆರನಾದ ಧರಣಿ, ಪ್ರತಿಭಟನೆಗೆ ಯಾರೂ ಇಳಿಯದಂತೆ ನಿರ್ಬಂಧ ವಿಧಿಸಿ ಮಧ್ಯಂತರ ನಿರ್ದೇಶನ ನೀಡಬೇಕು” ಎಂದು ಪೀಠಕ್ಕೆ ಕೋರಿದರು.
ಇದಕ್ಕೆ ಪೀಠವು “ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಂತೆ ವಿನಂತಿ ಮಾಡುತ್ತೇವೆ. ಜನರ ಬುದ್ಧಿವಂತಿಕೆ ಮತ್ತು ಸದ್ಗುಣದಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇವೆ. ಜನರು ಅದನ್ನು ಆಚರಣೆಗೆ ತರುತ್ತಾರೆ ಎಂದು ಭಾವಿಸಿದ್ದೇವೆ” ಎಂದು ಹೇಳಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾ. ದೀಕ್ಷಿತ್‌ ಅವರು “ಎಲ್ಲ ರೀತಿಯ ಭಾವನೆಗಳನ್ನು ಬದಿಗೆ ಸರಿಸೋಣ. ಸಂವಿಧಾನ ಏನು ಹೇಳುತ್ತದೆ ಅದರ ಪ್ರಕಾರ ನಡೆಯುತ್ತೇನೆ. ಸಂವಿಧಾನದ ಮೇಲೆ ನಾನು ತೆಗೆದುಕೊಂಡಿರುವ ಪ್ರಮಾಣದಂತೆ ನಡೆದುಕೊಳ್ಳಲಿದ್ದೇನೆ ಎಂದರು.
ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ಧಾರ ಕೈಗೊಳ್ಳಲಿದೆ. ಅದನ್ನು ವಿದ್ಯಾರ್ಥಿಗಳು ಪಾಲಿಸಬೇಕು” ಎಂದರು.
ಭಂಡಾರಕರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿನ ಐವರು ವಿದ್ಯಾರ್ಥಿಗಳನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ರಾಜ್ಯ ಸರ್ಕಾರದ ನಿಲುವಿಗೆ ತೀವ್ರ ವಿರೋಧ ದಾಖಲಿಸಿದರು. ತಮ್ಮ ವಾದ ಮಂಡನೆ ವೇಳೆ ಅವರು ಈ ಕೆಳಗಿನ ಅಂಶಗಳನ್ನು ಪೀಠದ ಗಮನಕ್ಕೆ ತಂದರು.
ಹಿಜಾಬ್‌ ಧರಿಸುವುದು ಇಸ್ಲಾಮ್‌ ಧರ್ಮದ ಸಂಪ್ರದಾಯ. ಶಿರವಸ್ತ್ರ ಅಥವಾ ಹಿಜಾಬ್‌ ಧರಿಸುವುದು ಪವಿತ್ರ ಕುರಾನ್‌ ಪ್ರಕಾರ ಇಸ್ಲಾಂನ ಅಗತ್ಯ ಭಾಗವಾಗಿದೆ.
ಇಷ್ಟವಿರುವ ಬಟ್ಟೆ ಧರಿಸುವುದು ಸಂವಿಧಾನದ 19(ಎ) ವಿಧಿಯಡಿರುವ ಹಕ್ಕಾಗಿದ್ದು, 19(6) ಅಡಿ ಮಾತ್ರವೇ ಅದನ್ನು ನಿರ್ಬಂಧಿಸಬಹುದು. ಅಭಿವ್ಯಕ್ತಿಯ ಸ್ವಾತಂತ್ರ್ಯವು ಏನನ್ನು ಧರಿಸಬಹುದು ಎನ್ನುವುದನ್ನು ಒಳಗೊಳ್ಳುತ್ತದೆ. ಸಾರ್ವಜನಿಕ ಸುವ್ಯವಸ್ಥೆ ಹಿನ್ನೆಲೆಯಲ್ಲಿ ಮಾತ್ರವೇ ಪ್ರಭುತ್ವ ಇದನ್ನು ನಿರ್ಬಂಧಿಸಬಹುದು.
ಪುಟ್ಟಸ್ವಾಮಿ ಅವರ ಪ್ರಕರಣದಲ್ಲಿ 21ನೇ ವಿಧಿಯಡಿ ಇರುವ ಖಾಸಗಿ ಹಕ್ಕನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದು, ವಸ್ತ್ರಧರಿಸುವ ಹಕ್ಕು ಖಾಸಗಿ ಹಕ್ಕಿನ ಭಾಗವಾಗಿದೆ ಎಂದು ವಾದ ಮಂಡಿಸಿದರು.
ಸರ್ಕಾರದ ಆದೇಶವು ಕರ್ನಾಟಕ ಶಿಕ್ಷಣ ನಿಯಮಾವಳಿಗಳಿಂದ ಹೊರಗಿದ್ದು, ಆ ಆದೇಶ ಹೊರಡಿಸಲು ಸರ್ಕಾರಕ್ಕೆ ಯಾವುದೇ ವ್ಯಾಪ್ತಿ ಇಲ್ಲ.ಸರ್ಕಾರವು ಯಾವುದು ಧರ್ಮದ ಅಗತ್ಯ ಅಚಾರ, ಯಾವುದಲ್ಲ ಎನ್ನುವುದನ್ನು ಹೇಳಲಾಗದು. ಅದು ನ್ಯಾಯಾಂಗದ ಪರಿಮಿತಿಗೆ ಬರುವ ವಿಚಾರವಾಗಿದೆ.
ಕೇರಳ ಹೈಕೋರ್ಟ್‌ ತೀರ್ಪನ್ನು ಆಧರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಆ ತೀರ್ಪು ಅನ್ವಯಿಸುವುದಿಲ್ಲ. ಸರ್ಕಾರಿ ಸಂಸ್ಥೆಯಲ್ಲಿ ಹಿಜಾಬ್‌ ಧರಿಸುವುದಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ ತೀರ್ಪು ಪ್ರಕಟಿಸಿರಲಿಲ್ಲ. ಅಲ್ಲಿ, ಖಾಸಗಿಯವರಿಗೆ ಸೇರಿದ ಕ್ರಿಶ್ಚಿಯನ್‌ ಸಮುದಾಯದ ಸಂಸ್ಥೆಯಲ್ಲಿ ಆ ಹಕ್ಕಿನ ಚಲಾವಣೆಯನ್ನು ಪೀಠವು ನಿರ್ಧರಿಸಿತ್ತು ಎಂದು ಹೇಳಿದರು.
ಹಿಜಾಬ್‌ ಧರಿಸಿದ್ದ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಕುಳ್ಳಿರಿಸಲಾಗಿದೆ ಎಂಬ ಕಾಮತ್‌ ಹೇಳಿಕೆಗೆ ಎಜಿ ನಾವದಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಂಥ ಆಧಾರರಹಿತ ಹೇಳಿಕೆ ನೀಡಬಾರದು. ಇದು ನಮ್ಮಂಥ ಸೂಕ್ಷ್ಮವಾದ ಸಮಾಜದಲ್ಲಿ ಗಂಭೀರ ಪರಿಣಾಮ ಉಂಟು ಮಾಡಬಹುದು ಎಂಬ ಎಜಿ ಹೇಳಿಕೆಯನ್ನು ಪೀಠವು ದಾಖಲಿಸಿಕೊಂಡಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement