ಸಚಿವ ಉಮೇಶ ಕತ್ತಿ ಇನ್ನಿಲ್ಲ : ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನ

ಬೆಂಗಳೂರು: ಸಚಿವ ಉಮೇಶ  ಕತ್ತಿ (62) ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು. ಮಂಗಳವಾರ ರಾತ್ರಿ ನಗರದ ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಉಮೇಶ್‌ ಕತ್ತಿ ಅವರಿಗೆ ಹೃದಯಾಘಾತವಾಗಿದ್ದರಿಂದ ತಕ್ಷಣ ಅವರನ್ನ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಉಮೇಶ್‌ ಕತ್ತಿ ಮೃತಪಟ್ಟಿದ್ದಾರೆ.
ಉಮೇಶ್‌ ಕತ್ತಿ ಅವರ ಅಗಲಿಕೆಯ ಸುದ್ದಿ ಕೇಳಿ ಅವರ ಕುಟುಂಬಸ್ಥರು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ರಾತ್ರಿ 10:30ಕ್ಕೆ ಎದೆನೋವು ಕಾಣಿಸಿಕೊಂಡಿದ್ದು ಬಾತ್‌ರೂಮ್‌ನಲ್ಲಿ ಕುಸಿದುಬಿದ್ದಿದ್ದರು ಎಂದು ಹೇಳಲಾಗಿದೆ. ತಕ್ಷಣವೇ ಕುಟುಂಬಸ್ಥರು ಅವರನ್ನು ಬೆಂಗಳೂರಿನ ತಕ್ಷಣವೇ ಅವರನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಂಪುಟದಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು, ಅರಣ್ಯ ಇಲಾಖೆ ಸಚಿವರಾಗಿದ್ದರು ಹಾಗೂ ವಿಜಯಪುರ ಉಸ್ತುವಾರಿ ಸಚಿವರಾಗಿದ್ದರು.
ಈಗಿನ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಕತ್ತಿ, 1985ರಲ್ಲಿ ತಂದೆ ವಿಶ್ವನಾಥ ಕತ್ತಿ ಅವರ ನಿಧನ ಬಳಿಕ ರಾಜಕೀಯ ಪ್ರವೇಶ ಮಾಡಿದ್ದರು. ಉಮೇಶ ಕತ್ತಿ ತಂದೆ ವಿಶ್ವನಾಥ ಕತ್ತಿಗೆ ವಿಧಾನಸಭೆಯಲ್ಲಿಯೇ ಹೃದಯಾಘಾತ ಆಗಿತ್ತು. ವಿಶ್ವನಾಥ ಕತ್ತಿ ವಿಧಾನಸಭೆಯಲ್ಲಿ ನಿಧನರಾಗಿದ್ದರು.

ಉಮೇಶ ಕತ್ತಿ ಅವರು ಬೆಳಗಾವಿಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ 8 ಬಾರಿ ಶಾಸಕರಾಗಿದ್ದ ಉಮೇಶ್ ಕತ್ತಿ, ವಿಭಿನ್ನವಾದ ರಾಜಕೀಯ ಪಥದಲ್ಲಿ ಸಾಗಿ ಸುದ್ದಿ ಮಾಡಿದ್ದರು. ಅವರು ಆರು ಬಾರಿ ಪಕ್ಷ ಬದಲಿಸಿದ್ದರು.ಎಚ್​ಡಿ ದೇವೇಗೌಡರ ಸಚಿವ ಸಂಪುಟದಲ್ಲಿ ಸಕ್ಕರೆ ಸಚಿವರಾಗಿ ಕೆಲಸ ಮಾಡಿದರು.ನಂತರ ಜೆಎಚ್​ ಪಟೇಲ್ ಸರ್ಕಾರದಲ್ಲೂ ಪ್ರಭಾವಿ ಲೋಕೋಪಯೋಗಿ ಖಾತೆಯನ್ನು ನಿಭಾಯಿಸಿದರು.ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ, ಈಗ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕುರಿತ ಹೇಳಿಕೆ ಮೂಲಕ ಹೆಚ್ಚು ಗಮನ ಸೆಳೆದಿದ್ದರು.

ಪ್ರಮುಖ ಸುದ್ದಿ :-   ಪತಿ ಸಾವಿನ ಸುದ್ದಿ ತಿಳಿದ ನಂತರವೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಪತ್ನಿ

ಬೆಳಗಾವಿಯ ಕೆಎಲ್‌ಇ ಸೊಸೈಟಿಯ ಲಿಂಗರಾಜ್ ಕಾಲೇಜಿನಲ್ಲಿ ಪಿಯುಸಿ ತನಕ ವ್ಯಾಸಂಗ ಮಾಡಿರುವ ಉಮೇಶ ಕತ್ತಿ ಅವರು,
9 ಸಲ ಚುನಾವಣೆ ಎದುರಿಸಿ 8 ಬಾರಿ ಗೆದ್ದಿದ್ದಾರೆ. ಹುಕ್ಕೇರಿ ಕ್ಷೇತ್ರದಿಂದ 1985ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಚುನಾವಣಾ ಕಣಕ್ಕಿಳಿದರು. ಮೊದಲ ಪ್ರಯತ್ನದಲ್ಲೇ ಗೆಲುವು ಕಂಡಿದ್ದರು.

1989ರಲ್ಲಿ ಜನತಾದಳಕ್ಕೆ ಬಂದು ಅಭ್ಯರ್ಥಿಯಾಗಿ ಗೆದ್ದರು. 1994ರಲ್ಲಿಯೂ ಗೆದ್ದು ಹ್ಯಾಟ್ರಿಕ್ ಗೆಲುವು ಕಂಡ ಅವರು, 1999ರಲ್ಲಿ ಸಂಯುಕ್ತ ಜನತಾದಳ (ಜೆಡಿಯು)ನಿಂದ ಸ್ಪರ್ಧಿಸಿ 4ನೇ ಬಾರಿ ಗೆದ್ದಿದ್ದರು. 2004ರಲ್ಲಿ ಕಾಂಗ್ರೆಸ್‌ಗೆನಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಸೋಲು ಕಂಡರು. 2008ರಲ್ಲಿ ಜೆಡಿಎಸ್ ಸೇರಿದ ಸ್ಪರ್ಧಿಸಿದ ನಂತರ ಗೆಲುವು ಕಂಡರು. ಬಳಿಕ ಬಿಜೆಪಿ ಸೇರಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 6ನೇ ಗೆಲುವು ಸಾಧಿಸಿದರು. 2013, 2018ರ ಚುನಾವಣೆಯಲ್ಲಿಯೂ ಹುಕ್ಕೇರಿ ಕ್ಷೇತ್ರದಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು.
ಉಮೇಶ್ ಕತ್ತಿ 1996ರಲ್ಲಿ ಮೊದಲ ಬಾರಿಗೆ ಸಚಿವರಾದರು. ಸಕ್ಕರೆ ಖಾತೆ ಸಚಿವರಾಗಿದ್ದರು. 2008ರಲ್ಲಿ ತೋಟಗಾರಿಕೆ ಮತ್ತು ಬಂಧಿಖಾನೆ ಸಚಿವರಾದರು. 2010ರಲ್ಲಿ ಕೃಷಿ ಸಚಿವರಾದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಉಮೇಶ್ ಕತ್ತಿ ಅವರದ್ದು. 2019ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸೇರಿದರು, ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಿಕ್ಕಿತು.2021ರಲ್ಲಿಯೂ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದರು. ಅರಣ್ಯ ಇಲಾಖೆ ಖಾತೆ ಸಚಿವರಾಗಿದ್ದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಭಾರೀ ಟ್ವಿಸ್ಟ್​; ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜೊತೆ ಕಾರ್ತಿಕ ಫೋಟೋಗಳು ವೈರಲ್‌..!

ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬುಧವಾರ  ಬೆಳಗಾವಿ ತೆಗೆದುಕೊಂಡು ಹೋಗಲಾಗುತ್ತದೆ. ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ನಂತರ ವಿಶೇಷ ವಿಮಾನದ ಮೂಲಕ ಅವರ ಕ್ಷೇತ್ರ ಹುಕ್ಕೇರಿಗೆ ಒಯ್ಯಲಾಗುತ್ತದೆ ಎಂದು ಹೇಳಲಾಗಿದೆ.

ಸಿಎಂ ಬೊಮ್ಮಾಯಿ ಸಂತಾಪ…

ಅರಣ್ಯ ಸಚಿವ ಉಮೇಶ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದು, ಇವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ” ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಶ್ರೀ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ, ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement