ಉತ್ತರ ಕನ್ನಡ ; ಭಾರಿ ಗಾಳಿಮಳೆಗೆ ಹಲವೆಡೆ ಹಾನಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಭಾನುವಾರದ ಗಾಳಿ ಮಳೆಗೆ ಬೃಹತ್ ಮರವೊಂದು ಜೆಎಂ ಎಫ್ ಸಿ ನ್ಯಾಯಾಲಯದ ಎಪಿಪಿ ಕಚೇರಿಯ ಮೇಲೆ ಬಿದ್ದಿದ್ದು, ಹಾನಿಯಾಗಿದೆ.
ಭಾನುವಾರವಾದ ಕಾರಣ ಯಾರೂ ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ಹೆಚ್ಚಿನ ಅಪಾಯ ತಪ್ಪಿದೆ. ಸುದ್ದಿ ತಿಳಿಯುತ್ತಿದ್ದಂತೆ ಆಗ್ನಿಶಾಮಕ ದಳ, ನಗರಸಭೆಯ ಸಿಬ್ಬಂದಿ ಆಗಮಿಸಿ ಬಿದ್ದ ಮರ ಕತ್ತರಿಸಿ ತೆರವುಗೊಳಿಸಿದ್ದಾರೆ. ಎಪಿಪಿ ಕಚೇರಿಯ ದಾಖಲೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಕೋಡಿಭಾಗ ಪ್ರದೇಶದ ಅಳ್ವೆವಾಡದ ಬಂದರು ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಆಟೋ ರಿಕ್ಷಾ ಹಾಗೂ ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ರಸ್ತೆಯ ಮಧ್ಯಭಾಗಕ್ಕೆ ಮರ ಬಿದ್ದ ಪರಿಣಾಮ ಅಳ್ವೆವಾಡ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.

ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಗಣೇಶ ಗಲ್ಲಿಗೆ ಹೋಗುವ ಮುಖ್ಯ ರಸ್ತೆ ಮತ್ತೆ ಕುಸಿದಿದ್ದು, ಆತಂಕ ಸೃಷ್ಟಿಯಾಗಿದೆ. ರಸ್ತೆ ಕುಸಿದ ಭಾಗದಲ್ಲಿ ಸಂಚರಿಸುತ್ತಿದ್ದ ಕಾರೊಂದು ಸಿಲುಕಿ ಹಾನಿಗೊಳಗಾಗಿದೆ. ಕಳೆದ ಮೂರು ವರ್ಷಗಳಿಂದ ಇದೇ ಸಮಸ್ಯೆ ಮರುಕಳಿಸುತ್ತಿದ್ದರೂ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೊನ್ನಾವರ ಹಾಗೂ ಸಿದ್ದಾಪುರ ತಾಲೂಕಿನ ಭಾಗದಲ್ಲಿ ಮಳೆಗೆ ಮರ ಉರುಳಿದ ವರದಿಗಳು ಬಂದಿವೆ. ಶಿರಸಿ–ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆಯೇ ಬೃಹತ್‌ ಮರ ಉರುಳಿಬಿದಿದ್ದು, ಕಾರಿನಲ್ಲಿದ್ದವರು ಅಪಾಯವಿಲ್ಲದೆ ಪಾರಾಗಿದ್ದಾರೆ. ಸಿದ್ದಾಪುರ ತಾಲೂಕಿನ ಕಾಳೆನಳ್ಳಿ ಸಮೀಪ ಭಾನುವಾರ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಅಂಕೋಲಾದ ಹಾರವಾಡ ಸಮೀಪದ ಕಡಲತೀರದಲ್ಲಿ ಸಮುದ್ರ ಕೊರೆತ ಹೆಚ್ಚಾಗಿದೆ. ಹೀಗಾಗಿ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಮನೆಯೊಂದರಲ್ಲಿ ಜನರನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ ಎಂದು ತಿಳಿದುಬಂದಿದೆ. ಗೋಕರ್ಣದ ಸುತ್ತಮುತ್ತ ಮರ ಬಿದ್ದ ವರದಿಯಾಗಿದೆ.

ಪ್ರಮುಖ ಸುದ್ದಿ :-   ಗದಗ : 33 ದಿನಗಳ ಬಳಿಕ ಶಿವಯೋಗ ಸಮಾಧಿಯಿಂದ ಹೊರಬಂದು ದರ್ಶನ ನೀಡಿದ ಸ್ವಾಮೀಜಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement