ತಮಿಳುನಾಡಿಗೆ ಮತ್ತೆ ಒಂದು ತಿಂಗಳು ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಮತ್ತೆ ಒಂದು ತಿಂಗಳು ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWRC) ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.
ಇಂದು, ಗುರುವಾರ ಸಭೆ ನಡೆಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWRC), ನವೆಂಬರ್ 23ರಿಂದ ಡಿಸೆಂಬರ್ 23ರವರಗೆ ಪ್ರತಿನಿತ್ಯ 2700 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದೆ.
ಡಿಸೆಂಬರ್​ ಅವಧಿಯಲ್ಲಿ ಹರಿಸಬೇಕಿರುವ 6 ಟಿಎಂಸಿ ನೀರು ಹಾಗೂ ಬಾಕಿ ಉಳಿಸಿಕೊಂಡಿರುವ 11 ಟಿಎಂಸಿ ನೀರು ಸೇರಿದಂತೆ ಒಟ್ಟು 17 ಟಿಎಂಸಿ ನೀರು ಹರಿಸುವಂತೆ ಸಭೆಯಲ್ಲಿ ತಮಿಳುನಾಡು ಬೇಡಿಕೆ ಇಟ್ಟಿತ್ತು.

ತಮಿಳುನಾಡು ಬೇಡಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕರ್ನಾಟಕದ ಅಧಿಕಾರಿಗಳು, ರಾಜ್ಯದಲ್ಲಿ ಈಗ ಬರ ಪರಿಸ್ಥಿತಿ ಇದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕುಡಿಯುವುದಕ್ಕೂ ನೀರು ಸಂಗ್ರಹ ಇಲ್ಲ. ಕರ್ನಾಟಕದಲ್ಲಿ ಮುಂದೆ ಮಳೆಯಾಗುವ ಸಾಧ್ಯತೆ ಸಹ ಕಡಿಮೆ. ತಮಿಳುನಾಡು ರಾಜ್ಯದಲ್ಲಿ ಈಗ ಹೆಚ್ಚು ಮಳೆಯಾಗುತ್ತಿದೆ. ಹಿಂಗಾರು ಮಾರುತಗಳಿಂದ ಮಳೆ ಹೆಚ್ಚು ಸುರಿಯುತ್ತಿದೆ. ತಮಿಳುನಾಡಿಗೆ ನೀರು ಬಿಟ್ಟರೆ ವಾಪಸ್ ತೆಗೆದುಕೊಳ್ಳಲು ಸಾಧ್ಯವೆ? ಹೀಗಾಗಿ ನೀರು ಹರಿಸಲು ಸಾಧ್ಯ ಇಲ್ಲ ಎಂದು ವಾದಿಸಿದ್ದಾರೆ.
ಅಂತಿಮವಾಗಿ ತಮಿಳುನಾಡು ಬೇಡಿಕೆ ತಿರಸ್ಕರಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWRC), ಕರ್ನಾಟಕಕ್ಕೆ ಒಂದು ತಿಂಗಳು ಅಂದರೆ ನವೆಂಬರ್ 23ರಿಂದ ಡಿಸೆಂಬರ್ 23ರ ವರೆಗೆ ಪ್ರತಿನಿತ್ಯ 2700 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement