ಸುಪ್ರೀಂ ಕೋರ್ಟ್‌ ತರಾಟೆ ಬೆನ್ನಲ್ಲೇ ಕೋವಿಡ್‌ ಮರಣ ಪ್ರಮಾಣಪತ್ರದ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ಮೂರನೇ ಕೊರೊನಾ ಅಲೆ ಅಪ್ಪಳಿಸುವ ಆತಂಕವಿದ್ದರೂ ಇದುವರೆಗೂ ಕೊರೊನಾದಿಂದ ಮೃತಪಟ್ಟಿರುವವರಿಗೆ ಸೂಕ್ತ ಮರಣ ಪ್ರಮಾಣಪತ್ರ ನೀಡಲು ಮಾರ್ಗಸೂಚಿಗಳ ರಚನೆಯಾಗಿಲ್ಲ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡ ನಂತರ ಕೇಂದ್ರ ಸರ್ಕಾರ ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೋವಿಡ್ ಸಂಬಂಧಿತ ಸಾವುಗಳಿಗೆ ಪ್ರಮಾಣಪತ್ರಗಳನ್ನ ವಿತರಿಸುವ ಮಾರ್ಗಸೂಚಿಗಳನ್ನ ರೂಪಿಸುವಲ್ಲಿ ವಿಳಂಬವಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 3ರಂದು ಕೇಂದ್ರವನ್ನ ತರಾಟೆಗೆ ತೆಗೆದುಕೊಂಡಿತ್ತು.
ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮೂಲಕ ಕೋವಿಡ್‌ ಡೆತ್‌ ಸರ್ಟಿಫಿಕೇಟ್‌ ನೀಡಲು ಅಗತ್ಯವಾದ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ.
ಮುಖ್ಯವಾಗಿ ಕೊರೊನಾ ಪಾಸಿಟಿವ್‌ ಎಂದು ಪರೀಕ್ಷೆ ಖಾತ್ರಿಯಾದ 30 ದಿನದೊಳಗೆ ವ್ಯಕ್ತಿ ಮೃತಪಟ್ಟರೆ (ಆಸ್ಪತ್ರೆಯಲ್ಲಿ ಅಥವಾ ಹೋಮ್‌ ಕ್ವಾರಂಟೈನ್‌ನಲ್ಲಿ) ಕಡ್ಡಾಯವಾಗಿ ಅದನ್ನು ‘ಕೋವಿಡ್‌ ಸಾವು ಎಂದು ಅಧಿಕಾರಿಗಳು ಪರಿಗಣಿಸಬೇಕಿದೆ.
ಇದರೊಂದಿಗೆ, ಕೊರೊನಾ ಸೋಂಕಿತ 30 ದಿನಗಳಿಗೂ ಹೆಚ್ಚು ಕಾಲ ಆಸ್ಪತ್ರೆಗೆ ದಾಖಲಾಗಿದ್ದರೆ, ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರೆ ಅವರ ಸಾವು ಸಂಭವಿಸಿದಲ್ಲಿ, ಅದನ್ನು ಕೂಡ ‘ಕೋವಿಡ್‌ ಸಾವು’ ಎಂದು ಪರಿಗಣಿಸಬೇಕಿದೆ.
ಕೋವಿಡ್‌ ಪ್ರಕರಣ ಎಂದು ಪರಿಗಣಿಸಲು ವ್ಯಕ್ತಿಯೊಬ್ಬರು ಕೊರೊನಾ ತಪಾಸಣೆ ಪರೀಕ್ಷೆ ಮಾಡಿಸಿಕೊಂಡಿರಬೇಕು. ಇಲ್ಲವೇ, ಆಸ್ಪತ್ರೆಗೆ ದಾಖಲಾಗಿದ್ದರೆ, ಚಿಕಿತ್ಸೆ ನೀಡಿದ ವೈದ್ಯರ ತಪಾಸಣೆಗಳ ಮೂಲಕ ಕೊರೊನಾ ಸೋಂಕಿನ ಲಕ್ಷ ಣಗಳಿವೆ ಎನ್ನುವುದು ಖಾತ್ರಿ ಆಗಿರಬೇಕು ಎಂದು ಕೇಂದ್ರ ಸರ್ಕಾರದ ನಿಯಮಾವಳಿ ಹೇಳುತ್ತದೆ.
ಆಸ್ಪತ್ರೆ ಅಥವಾ ಮನೆಯಲ್ಲೇ ಮೃತಪಟ್ಟು (ಕೊರೊನಾದಿಂದಲೇ ಎಂದು ಖಾತ್ರಿ ಇಲ್ಲದೇ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದರೆ), ಫಾರ್ಮ್‌ 4 ಮತ್ತು ಫಾರ್ಮ್‌ 4ಎ ಸಲ್ಲಿಕೆ ಮಾಡಿರುವವರಿಗೆ ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರವನ್ನ (MCCD) ಜನನ ಮತ್ತು ಮರಣ ನೋಂದಣಿ (RBD) ಕಾಯ್ದೆ, 1969ರ ಸೆಕ್ಷನ್ 10ರ ಅಡಿಯಲ್ಲಿ ಅಗತ್ಯವಿರುವಂತೆ ನೋಂದಣಿ ಪ್ರಾಧಿಕಾರಕ್ಕೆ ನೀಡಲಾದಲ್ಲಿ, ಅವರನ್ನು ಕೋವಿಡ್-19 ಸಾವು ಎಂದು ಪರಿಗಣಿಸಲಾಗುವುದು ‘ ಎಂದು ಮಾರ್ಗಸೂಚಿ ಹೇಳಿದೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement