ಜೀಪ್‌ – ಕ್ಯಾಂಟರ್‌ ನಡುವೆ ಭೀಕರ ಅಪಘಾತ : ಮೃತರ ಸಂಖ್ಯೆ 8ಕ್ಕೆ ಏರಿಕೆ, 8 ಮಂದಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ:  ಬರೋಬ್ಬರಿ 17 ಮಂದಿ ಪ್ರಯಾಣಿಸುತ್ತಿದ್ದ ಜೀಪ್ ಗೆ ಯಮ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮೃತರ ಸಂಖ್ಯೆ 8 ಕ್ಕೆ ಏರಿದೆ. 8 ಮಂದಿ ಆಸ್ಪತ್ರೆಯಲ್ಲಿ  ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಓರ್ವ ಬಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಮರಿನಾಯನಕನಹಳ್ಳಿ ಗೇಟ್ ಬಳಿ ಅಪಘಾತ ನಡೆದಿದ್ದು, ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮರಿನಾಯಕನಹಳ್ಳಿ ಗೇಟ್ ಬಳಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ವಿನಿಂದ ಚಿಂತಾಮಣಿ ನಗರಕ್ಕೆ ಜೀಪ್ ನಲ್ಲಿ ಚಾಲಕ ರಮೇಶ್ ಸೇರಿ 17 ಮಂದಿ ಪ್ರಯಾಣಿಸುತ್ತಿದ್ದರು. ಮರಿನಾಯಕನಹಳ್ಳಿ ಗೇಟ್ ಬಳಿ ಮತ್ತೊಂದು ವಾಹನ ಹಿಂದಿಕ್ಕುವ ಭರದಲ್ಲಿ ಬೆಂಗಳೂರು ರಸ್ತೆಯಿಂದ ಮದನಪಲ್ಲಿ ಕಡೆಗೆ ವೇಗವಾಗಿ ಮುನ್ನುಗುತ್ತಿದ್ದ ಸಿಮೆಂಟ್ ಲಾರಿ ಜೀಪ್ ಗೆ ಡಿಕ್ಕಿ ಹೊಡೆದಿದೆ.ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಥಳದಲ್ಲಿರುವ ಮಾಲೂರು ಶಾಸಕ ಕೆ.ವೈ. ನಂಜೇಗೌಡರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯ ನಡೆದಿದೆ. ಶಾಸಕರು ರಸ್ತೆ ಮಾರ್ಗವಾಗಿ ಹೋಗುತ್ತಿದ್ದರು. ಅಪಘಾತ ಕಂಡು ರಕ್ಷಣಾ ಕಾರ್ಯ ನಡೆಸಲು ಮುಂದಾಗಿದ್ದಾರೆ.
ಜೀಪ್​ನಲ್ಲಿ ಇದ್ದ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಎಂಟು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಜೀರೋ ಟ್ರಾಫಿಕ್‌ನಲ್ಲಿ ಕೋಲಾರಕ್ಕೆ ರವಾನೆ ಮಾಡಲಾಗಿದೆ. ಪ್ರಯಾಣಿಕರನ್ನು ಸಾಗಿಸುತ್ತಿದ್ದ ಜೀಪ್​ನಲ್ಲಿ ಇಬ್ಬರು ಮಕ್ಕಳು ಕೂಡ ಇದ್ದರು ಎಂದು ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಬಳ್ಳಾಪುರ ಎಸ್​ಪಿ ಜಿ.ಜೆ. ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ಮದಿನಾಯಕನಹಳ್ಳಿ ಬಳಿ ಭೀಕರ ಅಪಘಾತ ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ತೀವ್ರತೆಗೆ ಜೀಪ್ ನಜ್ಜುಗುಜ್ಜಾಗಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement