ಇಂಡಿ : ಯಶಸ್ವಿ ಕಾರ್ಯಾಚರಣೆ ; ಜೀವಂತವಾಗಿ ಹೊರಬಂದ ಬೋರ್‌ ವೆಲ್‌ ನಲ್ಲಿ ಬಿದ್ದಿದ್ದ 2 ವರ್ಷದ ಬಾಲಕ

ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನ‌ ಲಚ್ಯಾಣ ಗ್ರಾಮದ ಜಮೀನಿನಲ್ಲಿ ಬುಧವಾರ ಸಂಜೆ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನನ್ನು ಯಶಸ್ವಿಯಾಗಿ ರಕ್ಷಣಾ ಕಾರ್ಯ ನಡೆಸಿ ಜೀವಂತವಾಗಿ ಹೊರ ತೆಗೆಯಲಾಗಿದೆ.
ಸುಮಾರು 16 ಗಂಟೆಗಳ ಕಾರ್ಯಾಚರಣೆ ಬಳಿಕ ಎರಡು ವರ್ಷದ ಸಾತ್ವಿಕ ಮುಜಗೊಂಡ ಎಂಬ ಮಗುವನ್ನು ಜೀವಂತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ತಂದೆ-ತಾಯಿ ಸೇರಿ ಲಕ್ಷಾಂತರ ಜನರು ಸಲ್ಲಿಸಿದ ಪ್ರಾರ್ಥನೆ ಫಲಿಸಿದೆ. ಸುಮಾರು 16 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳು ನಡೆಸಿದ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಕೊಳವೆಬಾವಿಯಲ್ಲಿ ಸುಮಾರು ಸುಮಾರು 20 ಅಡಿ ಕೆಳಗಿ ಸಿಲುಕಿದ್ದ ಬಾಲಕನನ್ನು ಯಶಸ್ವಿಯಾಗಿ ಹೊರೆತೆಗೆಯಲಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಗು ಬಿದ್ದ ಅರ್ಧ ಗಂಟೆಯಲ್ಲಿಯೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಕಾರಣ ಮಗುವನ್ನು ರಕ್ಷಿಸಲು ಸಾಧ್ಯವಾಯಿತು. ಬುಧವಾರ ರಾತ್ರಿಯೇ ಹಿಟಾಚಿ ಮೂಲಕ ಕೊಳವೆಬಾವಿ ಪಕ್ಕದಲ್ಲಿ ಅಡ್ಡವಾಗಿ 3 ಅಡಿ ರಂಧ್ರ ಕೊರೆಯಲಾಯಿತು. ಆ ರಂಧ್ರದ ಮೂಲಕವೇ ಬಾಲಕ ಬಿದ್ದಿರುವ ಜಾಗಕ್ಕೆ ಹಗ್ಗದ ಮೂಲಕ ಒಂದು ಕ್ಯಾಮೆರಾ ಇಳಿಸಲಾಯಿತು. ಬಾಲಕನ ಚಲನವಲನದ ಮೇಲೆ ಕ್ಯಾಮೆರಾ ಮೂಲಕ ನಿಗಾ ಇರಿಸಿ, ನಿರಂತರವಾಗಿ ಆತನಿಗೆ ಆಮ್ಲಜನಕ ಪೂರೈಕೆ ಮಾಡಲಾಯಿತು. ಬಾಲಕನ ಕಾಲು ಅಲುಗಾಡುತ್ತಿರುವುದನ್ನು ಕ್ಯಾಮೆರಾ ಮೂಲಕ ಸೆರೆಹಿಡಿದ ಸಿಬ್ಬಂದಿ , ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಬೆಳಗಾವಿ; ಟಿಕೆಟ್​ ತೋರಿಸು ಎಂದಿದ್ದಕ್ಕೆ ರೈಲಿನಲ್ಲಿ ಟಿಸಿ ಸೇರಿ ಐವರ ಮೇಲೆ ಮುಸುಕುಧಾರಿಯಿಂದ ಹಲ್ಲೆ, ಓರ್ವ ಸಾವು

ಲಚ್ಯಾಣ ಗ್ರಾಮದ ಜಮೀನಿನಲ್ಲಿ ಬುಧವಾರ ಸಂಜೆ ಆಟವಾಡುತ್ತಿದ್ದಾಗ ಸತೀಶ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ ಮುಜಗೊಂಡ (2) ಆಕಸ್ಮಾತ್‌ ಆಗಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. ಬಾಲಕನ ಅಜ್ಜ ಶಂಕರಪ್ಪ ಮುಜಗೊಂಡ ಎಂಬುವರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. 500 ಅಡಿಯಷ್ಟು ಕೊರೆದರೂ ನೀರು ಬಂದಿರಲಿಲ್ಲ. ಹಾಗಾಗಿ ಅದನ್ನು ಮುಚ್ಚದೆಯೇ ಹಾಗೆಯೇ ಬಿಟ್ಟಿದ್ದರು ಎನ್ನಲಾಗಿದೆ. ಅವರ ಮೊಮ್ಮಗ ಆಟವಾಡುತ್ತಿದ್ದಾಗ ಈ ಕೊಳವೆ ಬಾವಿಗೆ ಬಿದ್ದಿದ್ದ.
ಸಾತ್ವಿಕ ಬದುಕಿ ಬರಲಿ ಎಂದು ಗ್ರಾಮದಲ್ಲಿ ಹಾಗೂ ಸುತ್ತಮುತ್ತ ಜನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ಗ್ರಾಮದ ಯುವಕರಿಂದ ವಿಶೇಷ ಪೂಜೆ ನಡೆದಿತ್ತು. ಈಗ ಪ್ರಾರ್ಥನೆ ಫಲಿಸಿದ್ದು, ಬಾಲಕ ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ.
ವೈದ್ಯರು ಬಾಲಕನ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಮಗುವಿನ ಆರೋಗ್ಯ ತಪಾಸಣೆ ನಡೆದು, ಆರೋಗ್ಯ ದೃಢಪಡಿಸಿಕೊಂಡ ಬಳಿಕವೇ ಮಗುವನ್ನು ಕುಟುಂಬಸ್ಥರಿಗೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

 

 

 

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement