ಹುಬ್ಬಳ್ಳಿಯಲ್ಲಿ  ಕೇಶವಕುಂಜಕ್ಕೆ ಸಿಎಂ ಭೇಟಿ, ಆರೆಸ್ಸೆಸ್‌ ಪ್ರಮುಖ ಮಂಗೇಶ ಭೇಂಡೆ ಆಶೀರ್ವಾದ ಪಡೆದ ಬೊಮ್ಮಾಯಿ

ಹುಬ್ಬಳ್ಳಿ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದರು.
ನಂತರ ಹುಬ್ಬಳ್ಳಿಯ ಕೇಶವ ಕುಂಜಕ್ಕೆ ಭೇಟಿ ನೀಡಿದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ( ಆರೆಸ್ಸೆಸ್)‌ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಹುಬ್ಬಳ್ಳಿಯ ಆರ್ ಎಸ್ ಎಸ್ ನ ಉತ್ತರ ಪ್ರಾಂತ ಕಾರ್ಯಾಲಯ ಕೇಶವ ಕುಂಜದಲ್ಲಿ ಮಂಗೇಶ ಭೇಂಡೆ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಘದ ಹಿರಿಯರನ್ನ ಭೇಟಿ ಮಾಡಲು ಮಾಜಿ ಸಚಿವ ಶಿವರಾಂ ಹೆಬ್ಬಾರ ಸಹ ಕೇಶವ ಕುಂಜಕ್ಕೆ ಆಗಮಿಸಿದರು. ಸಂಘದ ಹಿರಿಯರು ಇದ್ದರು.
ನಾಳೆ ಬೆಳಗ್ಗೆ ದೆಹಲಿಗೆ ತೆರಳಿ ಪ್ರಧಾನಿ ಭೇಟಿ:
ನಾಳೆ ಬೆಳಗ್ಗೆ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದೇನೆ. ಮತ್ತೊಮ್ಮೆ ಎರಡ್ಮೂರು ದಿನಗಳ ನಂತರ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಾರವಾರಕ್ಕೆ ತೆರಳುವ ಮುಂಚೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಗದೀಶ ಶೆಟ್ಟರ್ ಅವರೊಂದಿಗೆ ಮೊಬೈಲ್ ಫೋನ್ ನಲ್ಲಿ ಒಂದು ಬಾರಿ ಮಾತನಾಡಿದ್ದೇನೆ. ಅವರು ಸಹ ತಮ್ಮ ವಿಚಾರಗಳನ್ನು ಬಹಿರಂಗ ವಾಗಿ ಹೇಳಿದ್ದಾರೆ. ಶೀಘ್ರದಲ್ಲೇ ಅವರೊಂದಿಗೆ ಮುಖಾಮುಖಿ ಭೇಟಿಯಾಗಿ ಚರ್ಚಿಸುತ್ತೇನೆ. ಪಕ್ಷದ ಹಿರಿಯರೊಂದಿಗೂ ಚರ್ಚಿಸುತ್ತೇನೆ. ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement