ನವದೆಹಲಿ: ಜಂತರ್ ಮಂತರ್‌ನಲ್ಲಿ ಈ ವರ್ಷ ನಡೆದ ಪ್ರತಿಭಟನೆಗಳ ವೇಳೆ ತನ್ನ ಅನುಮತಿಯಿಲ್ಲದೆ ಫೋಟೊವನ್ನು ಮಾರ್ಫ್ ಮಾಡಿ ಪ್ರಸಾರ ಮಾಡಲಾಗಿದೆ ಎಂದು ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೊಂಡಿರುವ ದೆಹಲಿ ಹೈಕೋರ್ಟ್, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ ದಾಸ್, ಅಭಿಜಿತ್ ದಿಪ್ಕೆ, ಆಶುತೋಷ್ ರಾಂಕಾ ಹಾಗೂ ರತ್ನಾ ಸಿಂಗ್ ಅವರಿಗೆ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.
ಈ ಪ್ರಕರಣದಲ್ಲಿ ಮಹಿಳೆಯ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಿರೀಶ ಕಥ್ಪಾಲಿಯಾ ಅವರ ಪೀಠವು, ಮಹಿಳೆಗೆ ಸಂಬಂಧಿಸಿದ ಎಲ್ಲ ಆಕ್ಷೇಪಾರ್ಹ ಚಿತ್ರಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಲಿಂಕ್‌ಗಳನ್ನು 24 ಗಂಟೆಗಳೊಳಗೆ ತನ್ನ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕುವಂತೆ ಸಾಮಾಜಿಕ ಜಾಲತಾಣ ಸಂಸ್ಥೆ ಮೆಟಾಗೆ ನಿರ್ದೇಶನ ನೀಡಿದೆ. ಜೊತೆಗೆ ಮಹಿಳೆಗೆ ಪೊಲೀಸ್ ಭದ್ರತೆ ಒದಗಿಸುವಂತೆ ಆದೇಶಿಸಿರುವ ನ್ಯಾಯಾಲಯ, ಪ್ರಕರಣ ಸಂಬಂಧ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ಎರಡು ವಾರಗಳೊಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಗಿರೀಶ ಕಥ್ಪಾಲಿಯಾ, “ಇದು ಕೇವಲ ಒಬ್ಬ ಮಹಿಳೆಗೆ ಸಂಬಂಧಿಸಿದ ವಿಷಯವಲ್ಲ; ದೇಶದ ಪ್ರಧಾನಮಂತ್ರಿಗೆ ಸಂಬಂಧಿಸಿದ ವಿಷಯವೂ ಆಗಿದೆ. ಸಂಬಂಧಪಟ್ಟವರು ಸಂವೇದನಾಶೀಲವಾಗಿ ವರ್ತಿಸದಿದ್ದರೆ, ಅವರನ್ನು ಸಂವೇದನಾಶೀಲರನ್ನಾಗಿಸುವುದನ್ನು ನಾನು ದೃಢಪಡಿಸುತ್ತೇನೆ” ಎಂದು ಪ್ರತಿಕ್ರಿಯಿಸಿದರು.
ಜಂತರ್ ಮಂತರ್‌ನಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ತನ್ನ ಫೋಟೊವನ್ನು ಕೃತಕ ಬುದ್ಧಿಮತ್ತೆ (AI) ಮತ್ತು ಫೇಸ್-ಸ್ವಾಪ್ ತಂತ್ರಜ್ಞಾನದ ನೆರವಿನಿಂದ ತಿರುಚಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ತನ್ನ ಫೋಟೊವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಕ್ಕೆ ಕೃತಕವಾಗಿ ಜೋಡಿಸಿ ಸುಳ್ಳು ಚಿತ್ರವನ್ನು ಸೃಷ್ಟಿಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಈ ಮಾರ್ಫ್ ಮಾಡಿದ ಚಿತ್ರವನ್ನು ಪ್ರತಿಭಟನೆಯಲ್ಲಿ ಬಳಸಲಾದ ಬೃಹತ್ ಬ್ಯಾನರ್‌ಗಳು ಹಾಗೂ ಪೋಸ್ಟರ್‌ಗಳಲ್ಲಿ ಪ್ರದರ್ಶಿಸಲಾಗಿದ್ದು, ಆ ವೇಳೆ ಅಸಭ್ಯ ಘೋಷಣೆಗಳನ್ನು ಕೂಗಲಾಗಿದೆ ಎಂದು ಆರೋಪಿಸಿದ್ದಾರೆ. ಇದೇ ಚಿತ್ರವನ್ನು ಒಳಗೊಂಡ ವಿಡಿಯೊವನ್ನು ವಿಶೇಷವಾಗಿ ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎಂದೂ ಅವರು ದೂರು ನೀಡಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ‘ಅಪರಿಚಿತ ವ್ಯಕ್ತಿಗಳ’ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ದೂರಿನಲ್ಲಿ ಹೆಸರು ಉಲ್ಲೇಖಿಸಲಾಗಿದ್ದ ಸಿಜೆಪಿ ನಾಯಕರಾದ ಅಭಿಜಿತ್ ದಿಪ್ಕೆ, ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ಎಫ್‌ಐಆರ್‌ನಲ್ಲಿ ಆರೋಪಿಗಳಾಗಿ ಸೇರಿಸಲಾಗಿಲ್ಲ. ಈ ಸಂಬಂಧ ಅಭಿಜಿತ್ ದಿಪ್ಕೆ, ಸೌರವ್ ದಾಸ್ ಸೇರಿದಂತೆ ಇತರರ ವಿರುದ್ಧ ಪ್ರತ್ಯೇಕ ದೂರು ಕೂಡ ಸಲ್ಲಿಸಲಾಗಿದೆ.
ಸಿಜೆಪಿ ನೇತೃತ್ವದ ಈ ಪ್ರತಿಭಟನೆ ಜೂನ್ 20ರಂದು ಆರಂಭವಾಗಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಮುಂದುವರಿದಿತ್ತು. ಪ್ರತಿಭಟನೆಯ ಭಾಗವಾಗಿ ಸಂಸತ್ ಭವನದತ್ತ ಮೆರವಣಿಗೆ ನಡೆಸಲಾಗಿದ್ದು, ಈ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಉಂಟಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಲಾಠಿ ಪ್ರಹಾರ ಮತ್ತು ಅಶ್ರುವಾಯು ಶೆಲ್‌ಗಳನ್ನು ಬಳಸಿದ್ದವು.
ಅಂತಿಮವಾಗಿ ಜುಲೈ 25ರಂದು ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು. ಕೇಂದ್ರದ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ರಾಜೀನಾಮೆ ನೀಡಿದ ಬಳಿಕ ಹಾಗೂ ಸಿಜೆಪಿ ಮುಂದಿಟ್ಟಿದ್ದ ಇತರೆ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ