ಅಯೋಧ್ಯಾ ರಾಮಮಂದಿರ ಉದ್ಘಾಟನೆಗೂ ಮುನ್ನ ಉಡುಪಿ ಪೇಜಾವರ ಶ್ರೀಗಳಿಂದ ದೇಶದ ಉದ್ದಗಲಕ್ಕೂ ರಥಯಾತ್ರೆ ಪ್ರಸ್ತಾಪ

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ರಾಮೇಶ್ವರಂನಿಂದ ಕಾಶ್ಮೀರದವರೆಗೆ ‘ರಥಯಾತ್ರೆ’ ನಡೆಸಲು ಉಡುಪಿ ಪೇಜಾವರ ಮಠದ ಪೀಠಾಧಿಪತಿ ಹಾಗೂ ರಾಮಜನ್ಮಭೂಮಿ ಟ್ರಸ್ಟ್‌ನ ಸದಸ್ಯ ಸ್ವಾಮಿ ವಿಶ್ವಪ್ರಸನ್ನ ತೀರ್ಥರು ಪ್ರಸ್ತಾವನೆ ಮುಂದಿಟ್ಟಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುವಂತೆ ದೇಶದ ನಾಗರಿಕರನ್ನು ಸೆಳೆಯುವುದು ಯಾತ್ರೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಅಯೋಧ್ಯೆಯ ವಿಮೋಚನೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅನೇಕ ಜನರಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಅವರನ್ನೂ ನೆನಪಿಸಿಕೊಳ್ಳಬೇಕು ಎಂದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಶದ ಮೂಲೆ ಮೂಲೆಗಳಿಂದ ದೇಣಿಗೆ ಹರಿದು ಬರುತ್ತಿದೆ. ಪ್ರತಿ ವರ್ಷ ಸುಮಾರು 100 ಕೋಟಿ ರೂಪಾಯಿ ದೇಣಿಗೆ ಪಡೆದು ವ್ಯವಸ್ಥಿತವಾಗಿ ಹಣ ಬಳಕೆ ಮಾಡಲಾಗುತ್ತಿದೆ. ರಾಮ ಮಂದಿರ ಯೋಜನೆಗೆ ಆರಂಭದಲ್ಲಿ 400 ಕೋಟಿ ರೂ. ಎಂದು ನಿಗದಿ ಮಾಡಲಾಗಿತ್ತು. ಆದರೆ ಹಣದುಬ್ಬರದಿಂದಾಗಿ ವೆಚ್ಚ ಹೆಚ್ಚಿದ್ದು, ಪ್ರಸ್ತುತ ಅಂದಾಜಿನ ಪ್ರಕಾರ ನಿರ್ಮಾಣಕ್ಕೆ ಸುಮಾರು 1,300 ಕೋಟಿ ರೂ.ಗಳು ವೆಚ್ಚವಾಗುತ್ತದೆ ಎಂದರು.

ರಾಮಾಯಣದಲ್ಲಿ ಹನುಮಂತನ ಪಾತ್ರ ಬಹುಮುಖ್ಯವಾಗಿದ್ದು, ಹನುಮಂತನ ನಾಡಾಗಿರುವ ಕರ್ನಾಟಕಕ್ಕೆ ರಾಮಮಂದಿರಕ್ಕೂ ವಿಶೇಷ ಸಂಬಂಧವಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದ್ದು, ಸಂಪರ್ಕವನ್ನು ಅಖಂಡವಾಗಿಡಲು ರಾಜ್ಯದಿಂದ ರಾಮಮಂದಿರಕ್ಕೆ ‘ಸ್ವರ್ಣ ಶಿಖರ’ (ಚಿನ್ನದ ಶಿಖರ) ನೀಡಲಾಗುವುದು ಎಂದು ಹೇಳಿದರು.
ರಾಮ ಜನ್ಮಭೂಮಿ ಟ್ರಸ್ಟ್ 2024 ರಲ್ಲಿ ಮಕರ ಸಂಕ್ರಾಂತಿಯಂದು ಶ್ರೀರಾಮನ ವಿಗ್ರಹವನ್ನು ಸ್ಥಾಪಿಸಲು ನಿರ್ಧರಿಸಿದೆ. ಹಿರಿಯ ರಾಮನ ವಿಗ್ರಹವನ್ನು ಸ್ಥಾಪಿಸಬೇಕೆ ಅಥವಾ ಯುವ ರಾಮನ (ಬಾಲರಾಮ) ಮೂರ್ತಿಯನ್ನು ಪ್ರತಿಷ್ಠಾಪಿಸುವ ಕುರಿತು ಚರ್ಚೆ ನಡೆಸಲಾಯಿತು. ಅಯೋಧ್ಯೆಯು ಯುಗಗಳಿಂದಲೂ ಯುವ ರಾಮನ ಪವಿತ್ರ ಸ್ಥಳವಾಗಿದ್ದರಿಂದ, ಯುವ ರಾಮನ ವಿಗ್ರಹವನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದರು.
ಎತ್ತರದ ವಿಗ್ರಹವನ್ನು ಸಂಪೂರ್ಣವಾಗಿ ನೋಡಲಾಗದ ಕಾರಣ ಭಕ್ತರ ಕಣ್ಣುಗಳ ಅಳತೆಗೆ ಅನುಗುಣವಾಗಿ ವಿಗ್ರಹದ ಗಾತ್ರ ಇರುತ್ತದೆ ಎಂದರು.

ಪ್ರಮುಖ ಸುದ್ದಿ :-   ಬೆಳಗಾವಿ | ಮಸೀದಿಯಲ್ಲಿದ್ದ ಕುರಾನ್ ಕದ್ದೊಯ್ದು ಸುಟ್ಟು ಹಾಕಿದ ಕಿಡಿಗೇಡಿಗಳು ; ಪ್ರತಿಭಟನೆ

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement