ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಮಗ : ಕೆಎಸ್​ಡಿಎಲ್ ಅಧ್ಯಕ್ಷರ ಹುದ್ದೆಗೆ ರಾಜೀನಾಮೆ ನೀಡಿದ ಶಾಸಕ ಮಾಡಾಳ ವಿರೂಪಾಕ್ಷಪ್ಪ

ಬೆಂಗಳೂರು: 40 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ ವೇಳೆ ತಮ್ಮ ಪುತ್ರ ಪ್ರಶಾಂತ ಮಾಡಾಳ (Prashant Madal) ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಬೆನ್ನಲ್ಲೇ ಶಾಸಕ ವಿರೂಪಾಕ್ಷಪ್ಪ ಮಾಡಾಳ್ (Virupakshappa Madal) ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್​ಡಿಎಲ್) ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಶಾಸಕರು ಕೆಎಸ್​ಡಿಎಲ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿರೂಪಾಕ್ಷಪ್ಪ ತಮ್ಮ ಆಪ್ತರ ಮೂಲಕ ಮುಖ್ಯಮಂತ್ರಿ ಕಚೇರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ ಎಂದು ಹೇಳಲಾಗಿದೆ. ಲೋಕಾಯುಕ್ತ ದಾಳಿಗೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಮತ್ತು ನನ್ನ ಕುಟುಂಬದ ಮೇಲೆ ಷಡ್ಯಂತ್ರ ನಡೆಸಲಾಗಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದ;ಲ್ಲಿ ಉಲ್ಲೇಖಿಸಿದ್ದಾರೆ.

ಮಾಡಾಳ ವಿರೂಪಾಕ್ಷಪ್ಪ ಮಗನ ಮೇಲೆ ಲೋಕಾಯುಕ್ತ ದಾಳಿಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು, ಶುಕ್ರವಾರ ಬೆಳಿಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿರುವುದೇ ಭ್ರಷ್ಟಾಚಾರ ತಡೆಯುವ ಸಲುವಾಗಿ. ಈ ಹಿಂದೆ ಲೋಕಾಯುಕ್ತ ಇಲ್ಲದೇ ಕಾಂಗ್ರೆಸ್ ಸರ್ಕಾರದ ಕಾಲದ ಪ್ರಕರಣಗಳು ಮುಚ್ಚಿಹೋಯ್ತು. ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡಲಿ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ತನಿಖೆಯಾಗಲಿ ಎಂದು ಹೇಳಿದರು.
ಪ್ರಶಾಂತ ಮಾಡಾಳ ಕಚೇರಿ ಮತ್ತು ಮನೆ ಸೇರಿ ಏಳು ಕೋಟಿ ರೂ.ಗಳಿಗೂ ಅಧಿಕ ನಗದು ಪತ್ತೆಯಾಗಿದೆ. ಈ ಹಿನ್ನೆಲೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಎರಡು ಇಲಾಖೆಗಳು ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಇಂದಿನಿಂದ (ಮೇ19) 5 ದಿನ ಧಾರಾಕಾರ ಮಳೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement