ಮಹತ್ವದ ನಿರ್ಧಾರ.. ಹಿಂದೂ ಧಾರ್ಮಿಕ ದತ್ತಿ ಇಲಾಖೆ- ದೇಗುಲದ ಹಣ ಅನ್ಯ ಧರ್ಮೀಯ ಪ್ರಾರ್ಥನಾ ಕೇಂದ್ರಕ್ಕೆ ನೀಡುವಂತಿಲ್ಲ : ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನದ ಹಣವನ್ನು ಅನ್ಯಧರ್ಮದ ಪ್ರಾರ್ಥನಾ ಕೇಂದ್ರಗಳ ಬಳಕೆಗೆ ತಡೆ ನೀಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ತಸ್ತೀಕ್ ಮತ್ತು ವರ್ಷಾಸನ ಅನುದಾನವನ್ನು ಹಿಂದೂಯೇತರ ಸಂಸ್ಥೆಗಳಿಗೆ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯವ್ಯಯದಲ್ಲಿಯೇ ಪ್ರತಿವರ್ಷ ಬಿಡುಗಡೆ ಮಾಡುತ್ತಿರುವುದಕ್ಕೆ ರಾಜ್ಯ ಮತ್ತು ಧಾರ್ಮಿಕ ಪರಿಷತ್​ನ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಿಂದೂಯೇತರ ಸಂಸ್ಥೆಗಳಿಗೆ ಅನುದಾನವನ್ನು ಸಂಬಂಧಿಸಿದ ಹಿಂದುಳಿದ ವರ್ಗಗಳ ಅಥವಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮುಖಾಂತರವೇ ಮಂಜೂರು ಮಾಡಲು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಹೀಗಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಮೂಲಕ ರಾಜ್ಯದ ಹಿಂದೂಯೇತರ ಸಂಸ್ಥೆಗಳಿಗೆ ಮಂಜೂರು ಮಾಡುತ್ತಿರುವ ತಸ್ತೀಕ್, ವರ್ಷಾಸನ ಹಾಗೂ ಇತರೇ ಅನುದಾನವನ್ನು ತಕ್ಷಣದಿಂದಲೇ ತಡೆ ಹಿಡಿಯುವಂತೆ ಆದೇಶಿಸಲಾಗಿದೆ.
ದೇವಾಲಯಗಳು ಮತ್ತು ಧಾರ್ಮಿಕ ಇಲಾಖೆಯ ಮೂಲಕ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಸ್ತಿಕ್ ಮತ್ತು ವರ್ಷಾಸನ ಬಿಡುಗಡೆ ಕುರಿತು ಚರ್ಚೆ ಬೆನ್ನಲ್ಲೇ ಸರ್ಕಾರ ತೀರ್ಮಾನ ಕೈಗೊಂಡಿದೆ. ರಾಜ್ಯದ 757 ಪ್ರಾರ್ಥನಾ ಕೇಂದ್ರ ಹಾಗೂ 111 ವರ್ಷಾಸನ ನಡೆಯುತ್ತಿರುವ ಪ್ರಾರ್ಥನಾ ಕೇಂದ್ರಗಳಿಗೆ ಸರ್ಕಾರ ದೇವಸ್ಥಾನಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ನೀಡುತ್ತಿದ್ದ ಅನುದಾನ (Grants) ತಡೆ ಹಿಡಿದು ಸರ್ಕಾರ ಆದೇಶ ಹೊರಡಿಸಿದೆ.
ಇನಾಂ ರದ್ದತಿ ಕಾಯ್ದೆ 1977 ರ ಪರಿಹಾರಾರ್ಥವಾಗಿ ನೀಡುತ್ತಿರುವ ತಸ್ತಿಕ್ ಮತ್ತು ವರ್ಷಾಸನವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ದೇವಸ್ಥಾನಗಳಿಂದ ನೀಡುವ ಬದಲು, ಇನ್ನು ಮುಂದೆ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಮೂಲಕ ತಸ್ತಿಕ್ ಮತ್ತು ವರ್ಷಾಸನ ನೀಡಲು ಅನುದಾನ ಬಿಡುಗಡೆ ಮಾಡಬೇಕು ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವರದಿಯನ್ನಾಧರಿಸಿ ಸರ್ಕಾರ ಆದೇಶ ನೀಡಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement