ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ನಲ್ಲಿ ಇಂದು (ಬುಧವಾರ) ನಡೆದ ಮಹಿಳೆಯರ ಬಾಕ್ಸಿಂಗ್ ವೆಲ್ಟರ್ವೇಯ್ಟ್ ಕ್ಯಾಟಗರಿ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತದ ಲವ್ಲೀನಾ ಬೊರ್ಗೊಹೈನ್ ಪರಾಜಯ ಅನುಭವಿಸಿದರೂ, ಭಾರತಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಬಾಕ್ಸಿಂಗ್ ಕ್ಷೇತ್ರದಲ್ಲಿ ಭಾರತಕ್ಕೆ ಲಭಿಸಿರುವ ಈವರೆಗಿನ ಮೂರನೇ ಪದಕವಾಗಿದ್ದು, ಈ ಬಾರಿಯ ಒಲಿಂಪಿಕ್ಸ್ನಲ್ಲಿ ಒಟ್ಟಾರೆಯಾಗಿ ಲಭಿಸಿರುವ ಮೂರನೇ ಪದಕ ಕೂಡ ಆಗಿದೆ.
ಬಾಕ್ಸಿಂಗ್ ವೆಲ್ಟರ್ (64-69 ಕೆಜಿ) ವಿಭಾಗದಲ್ಲಿ ಮೊದಲ ಬಾರಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಅಸ್ಸಾಂನ ಲವ್ಲೀನಾ, ಜುಲೈ 30 ರಂದು ನಡೆದ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಚೀನಾದ ಚೆನ್ ನೈನ್-ಚಿನ್ ಅವರನ್ನು 4:1 ಸ್ಕೋರ್ನಿಂದ ಮಣಿಸಿ, ಸೆಮಿಫೈನಲ್ಸ್ ತಲುಪಿದ್ದರು.
ಇಂದು ಟೋಕಿಯೋದ ಕೋಕುಗಿಕಾನ್ ಅರೆನಾದಲ್ಲಿ ನಡೆದ ಸೆಮಿಫೈನಲ್ಸ್ನಲ್ಲಿ ವರ್ಲ್ಡ್ ಚ್ಯಾಂಪಿಯನ್ ಆದ ಟರ್ಕಿಯ ಬುಸೆನಾಜ್ ಸೂರ್ಮೆನೆಲಿ ಅವರನ್ನು ಎದುರಿಸಿದ ಲವ್ಲೀನಾ, 0:5 ಸ್ಕೋರ್ನೊಂದಿಗೆ ಸೋಲನುಭವಿಸಿದರು. ಮೂರು ಸುತ್ತುಗಳ ಪಂದ್ಯದಲ್ಲಿ ತೀರ್ಪುಗಾರರ ಸರ್ವಾನುಮತದ ನಿರ್ಣಯದೊಂದಿಗೆ ಬೂಸೆನಾಜ್ ಗೆಲುವು ಸಾಧಿಸಿದ್ದು, ಒಲಿಂಪಿಕ್ಸ್ ಫೈನಲ್ಸ್ ತಲುಪಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ