ನವದೆಹಲಿ: ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವರದಿಗಳ ನಡುವೆಯೇ, ಆಯೋಗವು ಶನಿವಾರ ಪೂರ್ಣ ಸದಸ್ಯರ ಸಭೆ ನಡೆಸಿ, ತನ್ನ ಕಾರ್ಯವೈಖರಿ ಕುರಿತು ಕೇಳಿಬಂದಿರುವ ಆರೋಪಗಳಿಗೆ ಅಂಶವಾರು ಸ್ಪಷ್ಟನೆ ನೀಡಿದೆ. ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR) ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ಪೂರ್ಣ ಆಯೋಗವು ಸರ್ವಾನುಮತದಿಂದಲೇ ಕೈಗೊಂಡಿದೆ ಎಂದು ಚುನಾವಣಾ ಆಯೋಗ ಪುನರುಚ್ಚರಿಸಿದೆ.
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ಹಾಗೂ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ ಜೋಶಿ ಅವರು ಶನಿವಾರ ಮಧ್ಯಾಹ್ನ ನವದೆಹಲಿಯ ನಿರ್ವಾಚನ ಸದನದಲ್ಲಿ ಸಭೆ ನಡೆಸಿದರು ಎಂದು ಆಯೋಗದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಸೆಪ್ಟೆಂಬರ್ 26ರಂದು ಮಧ್ಯಾಹ್ನ 3 ಗಂಟೆಗೆ ಮೂವರು ಸಭೆ ನಡೆಸಿದ ಚಿತ್ರವನ್ನೂ ಪ್ರಕಟಣೆಯೊಂದಿಗೆ ಬಿಡುಗಡೆ ಮಾಡಲಾಗಿದೆ.
ಎಸ್ಐಆರ್ಗೆ ಸಂಬಂಧಿಸಿದ ಹಲವು ನಿರ್ಧಾರಗಳು ಮತ್ತು ಆದೇಶಗಳಿಗೆ ಸುಖಬೀರ್ ಸಿಂಗ್ ಸಂಧು ಹಾಗೂ ವಿವೇಕ ಜೋಶಿ ಅವರು ಹಲವು ಸಂದರ್ಭಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಈ ಸಭೆ ನಡೆದಿರುವುದು ಗಮನಾರ್ಹವಾಗಿದೆ.
ಆಯೋಗದಿಂದ ಪಾಯಿಂಟ್ ಬೈ ಪಾಯಿಂಟ್ ಸ್ಪಷ್ಟನೆ
ಫಾರಂ-6 ವಿಚಾರದಲ್ಲಿ ಎಸ್ಐಆರ್ (Special Intensive Revision) ಪ್ರಕ್ರಿಯೆ ವೇಳೆ ಅರ್ಜಿಗೆ ಲಗತ್ತಿಸಲಾಗಿದ್ದ ಘೋಷಣೆಗೆ ಸಂಬಂಧಿಸಿದಂತೆ ಪ್ರಶ್ನೆಗಳು ಎದ್ದಿದ್ದವು. ಹಿಂದಿನ ಎಸ್ಐಆರ್ನಲ್ಲಿ ಮತದಾರರ ಹೆಸರುಗಳನ್ನು ಅವರ ಪೋಷಕರ ಹೆಸರಿನ ಮೂಲಕ ಹೊಂದಾಣಿಕೆ ಮಾಡುವಂತೆ ಈ ಘೋಷಣೆಯಲ್ಲಿ ತಿಳಿಸಲಾಗಿತ್ತು. ಈ ಘೋಷಣೆಯನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಎಸ್ಐಆರ್ ಅವಧಿಯ ಹೊರತಾಗಿ, 1960ರ ಮತದಾರರ ನೋಂದಣಿ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿರುವ ಅರ್ಜಿ ನಮೂನೆಗಳನ್ನೇ ಬಳಸಲಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಇಸಿಐನೆಟ್ (ECINET)ಗೆ ಸಂಬಂಧಿಸಿದಂತೆ, ಮತದಾರರ ಪಟ್ಟಿಯ ಡೇಟಾಕ್ಕೆ ಯಾರಿಗೆ ಪ್ರವೇಶವಿದೆ ಮತ್ತು ಪೋರ್ಟಲ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಆಯೋಗ, ಕ್ಷೇತ್ರಮಟ್ಟದ ಅಧಿಕಾರಿಗಳಿಗೆ ಅವರ ಕಾನೂನುಬದ್ಧ ಅಧಿಕಾರಗಳಿಗೆ ಅನುಗುಣವಾಗಿ ಪಾತ್ರಾಧಾರಿತ (Role-based) ಪ್ರವೇಶ ನೀಡಲಾಗಿದೆ ಎಂದು ತಿಳಿಸಿದೆ.
ಇಸಿಐನೆಟ್ (ECINET) ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಹಿರಿಯ ಉಪ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲು ಆಯೋಗ ನಿರ್ಧರಿಸಿದೆ. ಈ ಸಮಿತಿಯಲ್ಲಿ ಐಐಟಿ ಅಥವಾ ಐಐಐಟಿ ಸಂಸ್ಥೆಯ ಸ್ವತಂತ್ರ ತಜ್ಞರೊಬ್ಬರೂ ಇರಲಿದ್ದಾರೆ. ಕ್ಷೇತ್ರಮಟ್ಟದ ಅಧಿಕಾರಿಗಳಿಗೆ ಇನ್ನಷ್ಟು ಸೌಲಭ್ಯ ಅಥವಾ ಕಾರ್ಯನಿರ್ವಹಣೆಯ ಸ್ವಾತಂತ್ರ್ಯ ಅಗತ್ಯವಿದ್ದರೆ ಅದನ್ನೂ ಜಾರಿಗೆ ತರಲಾಗುವುದು ಎಂದು ಆಯೋಗ ತಿಳಿಸಿದೆ.
ಮುಂದೆ ಐಟಿ ಮಾಡ್ಯೂಲ್ಗಳು ಮತ್ತು ಪೋರ್ಟಲ್ಗಳಿಗೆ ಸಂಬಂಧಿಸಿದ ಯಾವುದೇ ಹೊಸ ಯೋಜನೆಗಳನ್ನು ಆಯೋಗದ ಮುಂದೆ ಅನುಮೋದನೆಗಾಗಿ ಮಂಡಿಸುವ ಮೊದಲು ಅಧಿಕಾರಿಗಳ ಸಮಿತಿಯಲ್ಲಿ ಚರ್ಚಿಸಬೇಕು ಎಂದು ಚುನಾವಣಾ ಆಯೋಗ ನಿರ್ಧರಿಸಿದೆ.
ಕ್ಯಾಬಿನೆಟ್ ಕಾರ್ಯದರ್ಶಿಗೆ ಕಳುಹಿಸಲಾದ ಪತ್ರದ ಬಗ್ಗೆ ಸ್ಪಷ್ಟನೆ
ಚುನಾವಣಾ ಆಯೋಗಕ್ಕೆ ಡೆಪ್ಯುಟೇಶನ್ ಮೇಲೆ ನಿಯೋಜಿಸಲಾಗಿದ್ದ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದ ಕೆಲಸದ ಮರುಹಂಚಿಕೆ ವಿಚಾರವಾಗಿ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿಗೆ ಕಳುಹಿಸಲಾದ ಪತ್ರದ ಬಗ್ಗೆಯೂ ಆಯೋಗ ಸ್ಪಷ್ಟನೆ ನೀಡಿದೆ. ಆ ಪತ್ರವು ಚುನಾವಣಾ ಆಯೋಗದ ಯಾವುದೇ ನೀತಿ ನಿರ್ಧಾರಕ್ಕೆ ಅಥವಾ ಅದರ ಐಟಿ ವಿಭಾಗಕ್ಕೆ ಸಂಬಂಧಿಸಿದ್ದಲ್ಲ; ಬದಲಾಗಿ ಡೆಪ್ಯುಟೇಶನ್ ಮೇಲೆ ಬಂದಿದ್ದ ಅಧಿಕಾರಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿದ್ದಾಗಿತ್ತು ಎಂದು ತಿಳಿಸಿದೆ.ಇಬ್ಬರು ಚುನಾವಣಾ ಆಯುಕ್ತರ ನಿರ್ದೇಶನದ ಬಳಿಕ ಆಕ್ಷೇಪಕ್ಕೆ ಕಾರಣವಾಗಿದ್ದ ಕೆಲಸದ ಮರುಹಂಚಿಕೆ ಆದೇಶಗಳನ್ನು ಜಾರಿಗೆ ತರಲಾಗಿಲ್ಲ. ಅಲ್ಲದೆ, ಐಟಿ ವಿಭಾಗದ ಮೇಲಿನ ಉಪ ಚುನಾವಣಾ ಆಯುಕ್ತರ ಮೇಲ್ವಿಚಾರಣೆಯನ್ನು ಎಂದಿಗೂ ಹಿಂಪಡೆಯಲಾಗಿಲ್ಲ ಎಂದು ಆಯೋಗ ಹೇಳಿದೆ.
ಎಸ್ಐಆರ್ ಕುರಿತು, 2025ರ ಜೂನ್ 24ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ಆರಂಭಿಸಲು ಹೊರಡಿಸಲಾಗಿದ್ದ ಆದೇಶವನ್ನು ಚುನಾವಣಾ ಆಯೋಗವು ಸರ್ವಾನುಮತದಿಂದ ಅನುಮೋದಿಸಿತ್ತು ಎಂದು ತಿಳಿಸಿದೆ. ಶುಕ್ರವಾರವೂ ಚುನಾವಣಾ ಆಯೋಗದ ಮೂಲಗಳು ಇದೇ ವಿಚಾರವನ್ನು ತಿಳಿಸಿದ್ದವು. ನಂತರ ಹೊರಡಿಸಲಾದ ಎಸ್ಐಆರ್ ವೇಳಾಪಟ್ಟಿಗಳಿಗೂ ಪೂರ್ಣ ಆಯೋಗದ ಸರ್ವಾನುಮತದ ಅನುಮೋದನೆ ಇತ್ತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ. ಎಸ್ಐಆರ್ ಆರಂಭಿಸುವ ಮೂಲ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂಬುದನ್ನೂ ಆಯೋಗ ಉಲ್ಲೇಖಿಸಿದೆ.
ಗೋವಾದಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದ 97 ಮಂದಿಯ ಪ್ರಕರಣಕ್ಕೂ ಚುನಾವಣಾ ಆಯೋಗ ವಿಶೇಷವಾಗಿ ಸ್ಪಷ್ಟನೆ ನೀಡಿದೆ. ಈ 97 ಮತದಾರರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು (BLOs) ತೆರಳಿ, ಅವರ ಅರ್ಜಿಗಳನ್ನು ಸಂಗ್ರಹಿಸುವಂತೆ ಗೋವಾ ಮುಖ್ಯ ಚುನಾವಣಾಧಿಕಾರಿ ಸೂಚಿಸಿದ್ದಾರೆ. ಈ 97 ಮಂದಿಯಲ್ಲಿ ಈಗಾಗಲೇ 81 ಮಂದಿ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಫಾರಂ-6 ಸಲ್ಲಿಸಿದ್ದಾರೆ ಎಂದು ಆಯೋಗ ತಿಳಿಸಿದೆ.
ಆಯೋಗದ ಆಂತರಿಕ ಕಾರ್ಯವೈಖರಿಯನ್ನು ಮತ್ತಷ್ಟು ಬಲಪಡಿಸುವ ಕ್ರಮಗಳನ್ನೂ ಪ್ರಕಟಿಸಲಾಗಿದೆ. ಇನ್ನು ಮುಂದೆ ಚುನಾವಣಾ ಆಯೋಗದ ಎಲ್ಲ ಸಭೆಗಳ ಕಾರ್ಯಸೂಚಿಯನ್ನು ಸಭೆಗೂ ಮುನ್ನವೇ ಸದಸ್ಯರಿಗೆ ಹಂಚಿಕೆ ಮಾಡಲಾಗುತ್ತದೆ. ಸಭೆಯ ಬಳಿಕ ನಿರ್ಣಯಗಳ ದಾಖಲೆಯನ್ನೂ (Minutes) ಹೊರಡಿಸಲಾಗುತ್ತದೆ. ಅಲ್ಲದೆ, ಚುನಾವಣಾ ಆಯುಕ್ತರು ಅಧಿಕಾರಿಗಳಿಗೆ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯೋಗ ತಿಳಿಸಿದೆ.
ಎಸ್ಐಆರ್ ವೇಳೆ ತಮ್ಮ ಹೆಸರು ಹೊಂದಾಣಿಕೆಯಾಗಿಲ್ಲ (Unmapped) ಅಥವಾ ತಾರ್ಕಿಕ ವ್ಯತ್ಯಾಸಗಳು (Logical Discrepancies) ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಪಡೆದಿರುವ ಮತದಾರರು ಇನ್ನು ಮುಂದೆ ಕಡ್ಡಾಯವಾಗಿ ಚುನಾವಣಾ ನೋಂದಣಿ ಅಧಿಕಾರಿ (ERO) ಮುಂದೆ ಖುದ್ದಾಗಿ ಹಾಜರಾಗಬೇಕಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಬದಲಾಗಿ, ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿ (BLO) ಮತದಾರರ ಮನೆಗೆ ತೆರಳಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಅವುಗಳನ್ನು ಇಸಿಐನೆಟ್ (ECINet)ನಲ್ಲಿ ಅಪ್ಲೋಡ್ ಮಾಡಲಿದ್ದಾರೆ.
ಆದರೆ, ಅಗತ್ಯವಿದೆ ಎಂದು ಚುನಾವಣಾ ನೋಂದಣಿ ಅಧಿಕಾರಿ (ERO) ನಿರ್ಧರಿಸುವ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮತದಾರರ ವಿಚಾರಣೆ (ಹಿಯರಿಂಗ್) ನಡೆಸಲಾಗುತ್ತದೆ. ಸಾಧ್ಯವಾದಷ್ಟು ಈ ವಿಚಾರಣೆಯನ್ನು ಆನ್ಲೈನ್ ಮೂಲಕ ನಡೆಸಲು ಆದ್ಯತೆ ನೀಡಲಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಅಗತ್ಯವಿದ್ದಲ್ಲಿ ಮತದಾರರ ಪರವಾಗಿ ಅವರ ಕುಟುಂಬದ ಯಾವುದೇ ವಯಸ್ಕ ಸದಸ್ಯರು ವಿಚಾರಣೆಗೆ ಹಾಜರಾಗಲು ಮತದಾರರು ಅಧಿಕಾರ ನೀಡಬಹುದು. ಆನ್ಲೈನ್ ವಿಚಾರಣೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಅಲ್ಲದೆ, ರಾತ್ರಿ ಆಶ್ರಯ ತಾಣಗಳಲ್ಲಿ (night shelters) ವಾಸಿಸುವವರು, ಕಾರ್ಮಿಕರು, ಬಡವರು, ನಿರಾಶ್ರಿತರು ಸೇರಿದಂತೆ ಅಗತ್ಯವಿರುವ ಜನರಿಗೆ ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳು (DEOs) ಸಾಕಷ್ಟು ಸಂಖ್ಯೆಯಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸುವುದು ಅಥವಾ ವಿಶೇಷ ಶಿಬಿರಗಳನ್ನು ಆಯೋಜಿಸುವಂತೆ ಸೂಚಿಸಲಾಗಿದೆ.
ಸೆಪ್ಟೆಂಬರ್ 26ರಂದು ನಡೆದ ಚುನಾವಣಾ ಆಯೋಗದ ಸಭೆಯ ಬಳಿಕವೇ ಈ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಇದಕ್ಕೆ ಪೂರ್ಣ ಚುನಾವಣಾ ಆಯೋಗದ ಅನುಮೋದನೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೆಹಲಿಯಲ್ಲಿ ಎಸ್ಐಆರ್ ಗಡುವು ವಿಸ್ತರಣೆ
ಎಸ್ಐಆರ್ ಪ್ರಕ್ರಿಯೆಯಡಿ ದೆಹಲಿಯಲ್ಲಿ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಗಡುವನ್ನು ಅಕ್ಟೋಬರ್ 30ರವರೆಗೆ ವಿಸ್ತರಿಸಲಾಗಿದೆ. ಈ ಅರ್ಜಿಗಳು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡುವ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಮಹಾರಾಷ್ಟ್ರದಲ್ಲೂ ಗಡುವು ವಿಸ್ತರಣೆಯಾಗಿದ್ದು, ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅಕ್ಟೋಬರ್ 12ರವರೆಗೆ ಹಾಗೂ ಅವುಗಳ ವಿಲೇವಾರಿಗೆ ನವೆಂಬರ್ 10ರವರೆಗೆ ಕಾಲಾವಕಾಶ ನೀಡಲಾಗಿದೆ.
ಆದರೆ, ಈ ವಿವಾದ ಈಗ ಚುನಾವಣಾ ಆಯೋಗದ ಆಂತರಿಕ ಕಾರ್ಯವಿಧಾನದ ಪ್ರಶ್ನೆಯನ್ನು ಮೀರಿದೆ. ಚುನಾವಣಾ ಆಯುಕ್ತರಾದ ವಿವೇಕ ಜೋಶಿ ಮತ್ತು ಸುಖಬೀರ್ ಸಿಂಗ್ ಸಂಧು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾದ ವರದಿಯನ್ನು ಉಲ್ಲೇಖಿಸಿರುವ ಪ್ರತಿಪಕ್ಷಗಳು, ಆಯೋಗದ ಕಾರ್ಯವೈಖರಿಯ ಕುರಿತು ಪ್ರಶ್ನೆಗಳನ್ನು ಎತ್ತಿವೆ. ಅಲ್ಲದೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರನ್ನು ಹುದ್ದೆಯಿಂದ ತೆರವುಗೊಳಿಸಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿವೆ.
ಎಸ್ಐಆರ್ ಕುರಿತು ನಡೆಯುತ್ತಿರುವ ರಾಜಕೀಯ ಚರ್ಚೆಯೊಂದಿಗೂ ಈ ವಿವಾದ ಬೆಸೆದುಕೊಂಡಿದ್ದು, ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿ ಹೆಚ್ಚಿನ ಪಾರದರ್ಶಕತೆ ಇರಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.
ಇದೀಗ ಚುನಾವಣಾ ಆಯೋಗದ ಹೇಳಿಕೆಯು ಆಂತರಿಕ ಚರ್ಚೆಗಳು ಮತ್ತು ಅಧಿಕೃತ ನಿರ್ಧಾರಗಳ ನಡುವೆ ವ್ಯತ್ಯಾಸವಿದೆ ಎಂಬುದನ್ನು ಒತ್ತಿ ಹೇಳಿದೆ. ಆಯೋಗದ ಪ್ರಮುಖ ನಿರ್ಧಾರಗಳು, ಅದರಲ್ಲೂ ವಿಶೇಷವಾಗಿ ಎಸ್ಐಆರ್ಗೆ ಸಂಬಂಧಿಸಿದ ನಿರ್ಧಾರಗಳನ್ನು ಪೂರ್ಣ ಆಯೋಗವು ಸಾಮೂಹಿಕವಾಗಿ ಮತ್ತು ಸರ್ವಾನುಮತದಿಂದಲೇ ಕೈಗೊಂಡಿದೆ ಎಂದು ಅದು ಪುನರುಚ್ಚರಿಸಿದೆ.
20 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ಪೂರ್ಣ
ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಎಸ್ಐಆರ್ ವೇಳೆ ಅಥವಾ ನಂತರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗದೆ ಉಳಿದಿರುವವರು, ಹಾಗೆಯೇ ಯುವ ಹಾಗೂ ಮೊದಲ ಬಾರಿಗೆ ಮತದಾರರಾಗುತ್ತಿರುವವರು ಸೇರಿದಂತೆ ಯಾವುದೇ ಅರ್ಹ ವ್ಯಕ್ತಿ ನಿರಂತರ ಪರಿಷ್ಕರಣೆ (Continuous Updation) ಪ್ರಕ್ರಿಯೆಯಡಿ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಸಂಬಂಧಪಟ್ಟ ಚುನಾವಣಾ ನೋಂದಣಿ ಅಧಿಕಾರಿ (ERO) ಬಳಿ ಅರ್ಜಿ ಸಲ್ಲಿಸಬಹುದು ಎಂದು ಆಯೋಗ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ