
ಮಸ್ಕತ್/ನವದೆಹಲಿ: ಓಮನ್ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ ನೌಕೆಯಲ್ಲಿದ್ದ 14 ಭಾರತೀಯರನ್ನು ಅಮೆರಿಕ ಹಾಗೂ ವಾಣಿಜ್ಯ ಹಡಗಿನ ಜಂಟಿ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ.
ಭಾನುವಾರ ಮುಂಜಾನೆ ಒಮಾನ್ನ ಪೂರ್ವ ಕರಾವಳಿಯ ರಾಸ್ ಅಲ್ ಹದ್ದ್ನಿಂದ ಪೂರ್ವಕ್ಕೆ ಸುಮಾರು 80 ನಾಟಿಕಲ್ ಮೈಲಿ ದೂರದಲ್ಲಿ ಈ ಘಟನೆ ಸಂಭವಿಸಿದೆ.
ಅಪಾಯದಲ್ಲಿದ್ದ ಭಾರತೀಯ ಸಿಬ್ಬಂದಿಯಿಂದ್ದ ನೌಕೆಯ ಸಂಕೇತ ಲಭಿಸುತ್ತಿದ್ದಂತೆ ಅಮೆರಿಕ ನೌಕಾಪಡೆಯ ‘ಪಿ-8 ಪೋಸಿಡಾನ್’ (P-8 Poseidon) ಕಡಲ ಗಸ್ತು ವಿಮಾನವು ತಕ್ಷಣವೇ ಸ್ಥಳಕ್ಕೆ ಧಾವಿಸಿತು. ಮುಳುಗುತ್ತಿದ್ದ ಬೋಟ್ನಲ್ಲಿದ್ದ ಸಿಬ್ಬಂದಿಗೆ ರಕ್ಷಣಾತ್ಮಕ ಲೈಫ್ ರಾಫ್ಟ್ (ಜೀವ ರಕ್ಷಕ ದೋಣಿ) ಅನ್ನು ವಿಮಾನದಿಂದ ಕೆಳಕ್ಕೆ ಹಾಕಲಾಯಿತು. ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿ ಆ ಲೈಫ್ ರಾಫ್ಟ್ಗೆ ವರ್ಗಾವಣೆಗೊಳ್ಳುವುದನ್ನು ವಿಮಾನದ ಸಿಬ್ಬಂದಿ ಮೇಲ್ವಿಚಾರಣೆ ನಡೆಸಿದರು.
ನೆರವಿಗೆ ಧಾವಿಸಿದ ‘ಎಂವಿ ಜಬಲ್ ಅಲಿ 9’:
ಇದರ ಬೆನ್ನಲ್ಲೇ, ಅಮೆರಿಕದ ವಿಮಾನವು ಸಮೀಪದಲ್ಲೇ ಚಲಿಸುತ್ತಿದ್ದ ‘ಎಂವಿ ಜಬಲ್ ಅಲಿ 9’ (MV Jabal Ali 9) ಎಂಬ ಮರ್ಚೆಂಟ್ ಹಡಗಿಗೆ ನೆರವು ನೀಡುವಂತೆ ಸೂಚಿಸಿತು. ಒಮಾನ್ನ ಸೋಹಾರ್ನಿಂದ ಮುಂಬೈಗೆ ಹೊರಟಿದ್ದ, ಸೇಂಟ್ ಕಿಟ್ಸ್ ಮತ್ತು ನೆವಿಸ್ ಧ್ವಜ ಹೊಂದಿರುವ ಈ ವಾಣಿಜ್ಯ ಹಡಗು ತಕ್ಷಣವೇ ಸ್ಥಳಕ್ಕೆ ತಲುಪಿ ಸಂತ್ರಸ್ತರಿಗೆ ಅಗತ್ಯ ನೆರವು ನೀಡುತ್ತಿದೆ. ಘಟನೆಯಲ್ಲಿ ಸದ್ಯಕ್ಕೆ ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಮತ್ತು ಎಲ್ಲಾ 14 ಸಿಬ್ಬಂದಿ ಭಾರತೀಯರೇ ಎಂದು ನಂಬಲಾಗಿದೆ.
ಈ ರಕ್ಷಣಾ ಕಾರ್ಯಾಚರಣೆಯ ಕುರಿತು ಒಮಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “14 ಮಂದಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡಿರುವ ಭಾರತೀಯ ಧ್ವಜ ಇದ್ದ ಯಾಂತ್ರಿಕ ನೌಕೆ ‘ವಿರಾಟ್ 1’ (Virat 1) ಒಮಾನ್ ಕರಾವಳಿಯಲ್ಲಿ ಅಪಘಾತಕ್ಕೆ ಈಡಾಗಿರುವ ಮಾಹಿತಿ ಲಭಿಸಿದೆ. ಒಮಾನ್ ಅಧಿಕಾರಿಗಳು ಮತ್ತು ಸ್ಥಳದಲ್ಲಿದ್ದ ಇತರ ಹಡಗುಗಳ ಸಹಯೋಗದೊಂದಿಗೆ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸಂಯೋಜಿಸಲಾಗುತ್ತಿದೆ” ಎಂದು ತಿಳಿಸಿದೆ.
ಇದರೊಂದಿಗೆ ಭಾರತೀಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದ್ದು, ಗಂಭೀರ ಕಡಲ ತುರ್ತು ಸಂದರ್ಭಗಳ ಶಿಷ್ಟಾಚಾರದ ಪ್ರಕಾರ ಭಾರತೀಯ ನೌಕಾಪಡೆಯನ್ನೂ ಸಹ ಅಲರ್ಟ್ ಮಾಡಲಾಗಿದೆ.
ಅಪಘಾತಕ್ಕೆ ಕಾರಣವೇನು?
ಕೊಲ್ಲಿ ರಾಷ್ಟ್ರಗಳು ಮತ್ತು ಭಾರತದ ನಡುವಿನ ಕಡಲ ಮಾರ್ಗದಲ್ಲಿ ಮೀನುಗಾರಿಕೆ ಮತ್ತು ಕರಾವಳಿ ವ್ಯಾಪಾರಕ್ಕಾಗಿ ‘ಧೋ’ ಎಂದು ಕರೆಯಲಾಗುವ ಇಂತಹ ಸಾಂಪ್ರದಾಯಿಕ ಮರದ ನೌಕೆಗಳನ್ನು ಇಂದಿಗೂ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ತಾಂತ್ರಿಕ ದೋಷಗಳು, ಸಮುದ್ರದ ಭೀಕರ ಅಲೆಗಳು ಅಥವಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಸರಕು ಸಾಗಣೆಯು ಇಂತಹ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಸದ್ಯ ಅಮೆರಿಕ ನೌಕಾಪಡೆ ಮತ್ತು ವಾಣಿಜ್ಯ ಹಡಗಿನ ಈ ಸಕಾಲಿಕ ಸಮನ್ವಯತೆಯು ದೊಡ್ಡ ದುರಂತವೊಂದನ್ನು ತಪ್ಪಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ