ಕೋಲ್ಕತ್ತಾ : ಇಂಡಿಯಾ ಮೈತ್ರಿಕೂಟಕ್ಕೆ ಮಮತಾ ಬ್ಯಾನರ್ಜಿ ಅವರು ಸೇರುವ ಬಗ್ಗೆ ಅಧೀರ್ ರಂಜನ್ ಚೌಧರಿ ಅವರು ನಿರ್ಧಾರ ತೆಗೆದುಕೊಳ್ಳುವವರಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ವಿರೋಧಿಸಿ ಖರ್ಗೆಯವರ ಚಿತ್ರಕ್ಕೆ ಕೋಲ್ಕತ್ತಾದಲ್ಲಿ ಮಸಿ ಬಳಿಯಲಾಗಿದೆ.
ಕೋಲ್ಕತ್ತಾದಲ್ಲಿನ ಕಾಂಗ್ರೆಸ್ ರಾಜ್ಯ ಕಚೇರಿಯ ಮುಂಭಾಗದಲ್ಲಿದ್ದ ಹಲವು ಪೋಸ್ಟರ್ ಗಳಲ್ಲಿನ ಖರ್ಗೆ ಭಾವಚಿತ್ರಕ್ಕೆ ಮಸಿ ಬಳಿಯಲಾಗಿದೆ. ಜೊತೆಗೆ ಈ ಪೋಸ್ಟರ್ ಮೇಲೆ ತೃಣಮೂಲ ಕಾಂಗ್ರೆಸ್ಸಿನ ಏಜೆಂಟ್ ಎಂದು ಬರೆಯಲಾಗಿದೆ.
ತಮ್ಮ ತವರೂರಾದ ಬಹರಂಪುರದಲ್ಲಿರುವ ಅಧೀರ ರಂಜನ ಚೌಧರಿ ಅವರು ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಪೊಲೀಸ್ ದೂರು ದಾಖಲಿಸಲು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಮತ್ತು ವಿರೂಪಗೊಳಿಸಿದ ಪೋಸ್ಟರ್‌ಗಳನ್ನು ಸಹ ತೆಗೆದುಹಾಕಲಾಗಿದೆ.
ಶನಿವಾರ ರಾತ್ರಿ ಈ ಘಟನೆ ನಡೆದಿರಬಹುದು ಎಂದು ಹಿರಿಯ ಕಾಂಗ್ರೆಸ್ ನಾಯಕರು ಹೇಳಿದ್ದು, ಅಧೀರ್ ರಂಜನ್ ಚೌಧರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕರ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಬಯಸುತ್ತಿರುವ ಟಿಎಂಸಿಯ ಕೈವಾಡ ಇದಾಗಿದೆ ಎಂದು ಪಕ್ಷದ ನಾಯಕರೊಬ್ಬರು ಆರೋಪಿಸಿದ್ದಾರೆ.
ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಿದರೆ ಹೊರಗಿನಿಂದ ಬೆಂಬಲ ನೀಡುತ್ತೇನೆ ಎಂಬ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ ಅವರು ಶನಿವಾರ ಚೌಧರಿ ನೀಡಿದ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ ಹಾಗೂ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಮಮತಾ ಬ್ಯಾನರ್ಜಿ ಅವರು ಸೇರುವ ಬಗ್ಗೆ ಅಧೀರ್ ರಂಜನ್ ಚೌಧರಿ ಅವರು ನಿರ್ಧಾರ ತೆಗೆದುಕೊಳ್ಳುವವರಲ್ಲ ಎಂದು ಹೇಳಿದ್ದರು. ಮಮತಾ ಬ್ಯಾನರ್ಜಿ ಹೇಳಿಕೆಗೆ ಅವರನ್ನು ನಂಬಲು ಸಾಧ್ಯವಿಲ್ಲ ಮತ್ತು ಅವರು ಬಿಜೆಪಿಯೊಂದಿಗೆ ಹೋಗಬಹುದು ಎಂಬ ಅಧೀರ ರಂಜನ ಚೌಧರಿ ಹೇಳಿಕೆ ನೀಡಿದ್ದರು.
“ಮಮತಾ ಬ್ಯಾನರ್ಜಿ ಮೈತ್ರಿಕೂಟದ ಜೊತೆಗಿದ್ದಾರೆ. ಅವರು ಇತ್ತೀಚೆಗೆ ಸರ್ಕಾರಕ್ಕೆ ಸೇರುವುದಾಗಿ ಹೇಳಿದ್ದಾರೆ. ಅಧೀರ್ ರಂಜನ್ ಚೌಧರಿ ಅವರು ನಿರ್ಧಾರ ತೆಗೆದುಕೊಳ್ಳುವುದಿಲ್ಲ, ನಾನು ಮತ್ತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ಒಪ್ಪದವರು ಹೊರ ಹೋಗುತ್ತಾರೆ ಎಂದು ಖರ್ಗೆ ಹೇಳಿದ್ದರು.
ಲೋಕಸಭೆ ಚುನಾವಣೆಯ ನಂತರ ಬಿಜೆಪಿ ವಿರೋಧಿ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಮಮತಾ ಬ್ಯಾನರ್ಜಿ ಅವರು ಇಂಡಿಯಾ ಮೈತ್ರಿಕೂಟದ ಭಾಗವಾಗುತ್ತಾರೆಯೇ ಎಂದು ನಿರ್ಧರಿಸಲುಅಧೀರ ರಂಜನ ಚೌಧರಿ ಯಾರೂ ಅಲ್ಲ ಎಂದು ಅವರು ಹೇಳಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ