ತೀರ್ಥಹಳ್ಳಿ | ಗುಡ್ಡ ಕುಸಿತ ; 3 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವು

ಶಿವಮೊಗ್ಗ: ಭೀಕರ ಗಾಳಿಮಳೆ ಮತ್ತು ಗುಡ್ಡ ಕುಸಿತ (landslide)ದಲ್ಲಿ ಮೂರು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದೆ ಎಂದು ವರದಿಯಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಕ್ಕರೆಗಾರು ಗ್ರಾಮದ ವಾಸಿಗಳಾದ ಮಲ್ಲಿಕಾರ್ಜುನ (35), ಇವರ ಪತ್ನಿ ನಾಗವೇಣಿ (28) ಹಾಗೂ ಅವರ ಮಗ ಸಂತೋಷ (3) ಮೃತಪಟ್ಟ ದುರ್ದೈವಿಗಳು.
ದುರ್ಘಟನೆ ಸಂಭವಿಸಿದ್ದು ಹೇಗೆ?
ಇಂದಿರಾನಗರದಲ್ಲಿರುವ ಶೆಡ್‌ ಒಂದರಲ್ಲಿ ಈ ಕುಟುಂಬ ವಾಸವಿತ್ತು. ಭಾನುವಾರ ಮುಂಜಾನೆ ಸುಮಾರು 2:30 ರ ಸುಮಾರಿಗೆ ಕುಟುಂಬದವರೆಲ್ಲರೂ ಗಾಢ ನಿದ್ರೆಯಲ್ಲಿದ್ದಾಗ, ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹತ್ತಿರದ ಗುಡ್ಡವು ಕುಸಿದು ನೇರವಾಗಿ ಈ ಶೆಡ್‌ ಮೇಲೆ ಬಿದ್ದಿದೆ. ಪರಿಣಾಮ ಇಡೀ ಶೆಡ್ ಮಣ್ಣಿನ ಅಡಿಯಲ್ಲಿ ಸಂಪೂರ್ಣವಾಗಿ ಹೂತುಹೋಗಿದೆ.

ಒಬ್ಬರಿಗೆ ಗಂಭೀರ ಗಾಯ
ಈ ದುರ್ಘಟನೆಯಲ್ಲಿ ಪಕ್ಕದ ಶೆಡ್‌ನಲ್ಲಿ ವಾಸವಿದ್ದ ಮತ್ತೊಬ್ಬ ವ್ಯಕ್ತಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಕ್ಷಣಾ ಕಾರ್ಯಾಚರಣೆ
ಪ್ರದೇಶದಲ್ಲಿ ಮುಂದುವರಿದಿರುವ ಬಿರುಸಿನ ಮಳೆಯ ನಡುವೆಯೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಭಾರಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮಣ್ಣಿನ ಅಡಿಯಿಂದ ಮೂವರ ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.
ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯೇ ಈ ದುರಂತಕ್ಕೆ ಕಾರಣವಾಗಿದ್ದು, ಗುಡ್ಡ ಕುಸಿದು ಇಡೀ ಕುಟುಂಬವೇ ಮಣ್ಣಿನಪಾಲಾಗಿರುವುದು ಶೋಕಮೂಡಿಸಿದೆ.

ಪ್ರಮುಖ ಸುದ್ದಿ :-   ಶಿರಸಿ : ಮಳೆ ಅಬ್ಬರಕ್ಕೆ ಹಲವೆಡೆ ಹೊಳೆಯಂತಾದ ರಸ್ತೆಗಳು, ಬಡಾವಣೆಗಳು ಜಲಾವೃತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement