ಆರು ರಾಜ್ಯಗಳ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಎಎಪಿ ನಿರ್ಧಾರ, ಕಾಂಗ್ರೆಸ್‌ಗೆ ಮುಳುವೇ..?

ಮುಂದಿನ ಎರಡು ವರ್ಷಗಳಲ್ಲಿ ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷವು ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ  ಎಂದು ಆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕಳೆದ ತಿಂಗಳು ಹೇಳಿದ್ದರು. ಈ ಎಲ್ಲಾ ರಾಜ್ಯಗಳು 2022ರಲ್ಲಿ ವಿಧಾನಸಭಾ ಚುನಾವಣೆ ಎದುರಿಸುತ್ತಿವೆ. ಪಂಜಾಬ್ ಹೊರತು ಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ಆಡಳಿತವಿದ್ದು ಇಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಇದಕ್ಕೆ ಈಗ ಎಎಪಿ ರೂಪದಲ್ಲಿ ಹೊಸ ಸವಾಲು ಎದುರಾಗಿದೆ. ಯಾಕೆಂದರೆ ಆಮ್‌ ಆದ್ಮಿ ಪಕ್ಷವು ಹೆಚ್ಚಾಗಿ ಸಾಂಪ್ರದಾಯಿಕ ಕಾಂಗ್ರೆಸ್‌ ಮತಗಳನ್ನೇ ಕಸಿಯುತ್ತದೆ..!
೨೦೧೪ರ ಲೋಕಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಅವರು ನರೇಂದ್ರ ಮೋದಿಯವರ ವಿರುದ್ಧವೂ ಸ್ಪರ್ಧಿಸಿದ್ದು ಸೇರಿದಂತೆ 432 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಎಎಪಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಲು ಆಗಿಂದಲೂ ಪ್ರಯತ್ನಿಸುತ್ತಿದೆ.
ಎಎಪಿಯು ದೆಹಲಿ ಮತ್ತು ಪಂಜಾಬ್‌ನಲ್ಲಿ ರಾಜ್ಯ ಪಕ್ಷವಾಗಿದೆ. ಪ್ರತಿ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಶೇ.೩ರಷ್ಟು ಮತ ಪಡೆಯವುದು ಅಥವಾ ಇತರ ಯಾವುದೇ ಎರಡು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶೇ.8 ರಷ್ಟು ಮತ ಪಡೆದರೆ ಅದು ರಾಷ್ಟ್ರೀಯ ಸ್ಥಾನಮಾನಕ್ಕೆ ಅರ್ಹತೆ ಪಡೆಯುತ್ತವೆ. ಆದಾಗ್ಯೂ, ಎಎಪಿಯ ಮಹತ್ವಾಕಾಂಕ್ಷೆಯು ಅಧಿಕಾರ ವಿರೋಧಿ ಮತಗಳ ಕ್ರೋಡೀಕರಣಕ್ಕೆ ಕಾರಣವಾಗಬಹುದಾಗಿದೆ.
ಆರು ರಾಜ್ಯಗಳ ಪೈಕಿ ಎಎಪಿ ಬಿಡ್ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರಬಲವಾಗಿದೆ ಎಂದು ಪಕ್ಷ ಹೇಳುತ್ತದೆ. ಪಕ್ಷವು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರ ರಾಜ್ಯ ಉತ್ತರಪ್ರದೇಶದಲ್ಲಿ 2017ರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಐದನೇ ಸ್ಥಾನದಲ್ಲಿತ್ತು. ಹೀಗಾಗಿ ಅದು ಅಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ತನ್ನ ಬೇಸ್‌ ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಸುತ್ತಿದೆ.
2011ರಲ್ಲಿ ಭ್ರಷ್ಟಾಚಾರ-ವಿರೋಧಿ ಆಂದೋಲನಕ್ಕೆ ಸೇರುವ ಮೊದಲು ಎರಡು ದಶಕಗಳ ಕಾಲ ಸಮಾಜವಾದಿ ರಘು ಠಾಕೂರ್ ಅವರ ಆಶ್ರಯದಲ್ಲಿ ಪೂರ್ವ ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ವ್ಯಾಪಾರಿಗಳ ಹಕ್ಕುಗಳ ಕಾರ್ಯಕರ್ತರಾಗಿ ಸಿಂಗ್ ಹೋರಾಡಿದವರು. ಹೀಗಾಗಿ ಅಲ್ಲಿ ತನ್ನಮತಗಳ ವಿಸ್ತಾರ ಹೆಚ್ಚಿಸಿಕೊಳ್ಳಲು ಎಎಪಿ ಬಯಸಿದೆ. ಈ ಕಾರಣದಿಂದ 403 ವಿಧಾನಸಭಾ ಕ್ಷೇತ್ರಗಳಲ್ಲಿ ವಿಭಾಗಗಳಲ್ಲಿ ಹರಡಿರುವ 3,000 ಜಿಲ್ಲಾ ಪರಿಷತ್ ಸ್ಥಾನಗಳಿಗೆ ಸ್ಪರ್ಧಿಸಲು ಯೋಜಿಸಿದೆ. ಕಾನೂನು ಮತ್ತು ಸುವ್ಯವಸ್ಥೆ, ಶಾಲೆಗಳು ಮತ್ತು ಆಸ್ಪತ್ರೆಗಳು ಮತ್ತು ಅಧಿಕ ದರದ ವಿದ್ಯುತ್ ವಿರುದ್ಧದ ಆಂದೋಲನಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಇದೆ ಎಂದು ಎಎಪಿ ಕಂಡುಕೊಂಡಿದ್ದು, ಹೀಗಾಗಿ ಜಿಲ್ಲಾ ಪರಿಷತ್‌ಗೆ ಸ್ಪರ್ಧಿಸಲು ಚಿಂತನೆ ನಡೆಸಿದೆ.
ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರು, ದಲಿತರಲ್ಲಿ ಬಿಜೆಪಿ ಉಳಿದ ವರ್ಗಗಳಲ್ಲಿರುವಷ್ಟು ಜನಪ್ರಿಯವಾಗಿಲ್ಲ. ಹೀಗಾಗಿ ಈ ವರ್ಗದ ಮತದಾರರ ಬಗ್ಗೆ ಪ್ರಾಥಮಿಕ ಹಂತದಲ್ಲಿ ಹೆಚ್ಚು ಗಮನ ಕೊಡಲು ಎಎಪಿ ನಿರ್ಧಾರ ಮಾಡಿದಂತೆ ಕಾಣುತ್ತದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ಪ್ರತಿಸ್ಪರ್ಧಿಗಳು. ಬಹುಜನ ಸಮಾಜ ಪಕ್ಷವು ಮೂರನೇ ಸ್ಥಾನದಲ್ಲಿದೆ. ಎಎಪಿ ದಲಿತರು, ಒಬಿಸಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಕೇಂದ್ರೀಕರಿಸಿದರೆ ಬಿಎಸ್ಪಿ, ಎಸ್ಪಿ ಮತ್ತು ಕಾಂಗ್ರೆಸ್ ಬಗ್ಗೆ ಅಸಮಾಧಾನಗೊಂಡ ಈ ವರ್ಗದವರನ್ನೇ ಅದು ಸೆಳೆಯಲಿದೆ.
ಈಗಾಗಲೇ ಎಎಪಿ ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಸಕ್ರಿಯವಾಗಿದ್ದು, ಈ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಅಲ್ಲಿನ ಸಚಿವರ ಮೇಲೆ ಸವಾಲುಗಳನ್ನು ಎಸೆದಿದೆ. ನವ ದೆಹಲಿಯಲ್ಲಿ ಎಎಪಿ ಸರ್ಕಾರವು ಸರ್ಕಾರಿ ಶಾಲೆಗಳನ್ನು ಹೆಚ್ಚು ಸುಧಾರಿಸಲು ಕ್ರಮ ಕೈಗೊಂಡಿದ್ದು, ಹೀಗಾಗಿ ಅದು ಮೊದಲು ಈ ಸವಾಲನ್ನೇ ಎಸೆದಿದೆ.
ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಎಎಪಿ ಉತ್ತಮ ಚೊಚ್ಚಲ ಪ್ರದರ್ಶನ ಮಾಡಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಿಜೆಪಿಯ ಸೀಟುಗಳ ಸಂಖ್ಯೆ ಸುಮಾರು ಶೇ.16ರಷ್ಟು ಹೆಚ್ಚಾದರೆ ಕಾಂಗ್ರೆಸ್ಸಿನದು ಶೇ.20ಕ್ಕಿಂತ ಕಡಿಮೆಯಾಯಾಯಿತು. ಇದರಲ್ಲಿ ಮುಖ್ಯವಾಗಿ ಎಎಪಿ ಪ್ರಮುಖ ಪಾತ್ರ ವಹಿಸಿತು. ಆಮ್‌ ಆದ್ಮಿ ಪಕ್ಷವು ಸೂರತ್ ಮುನ್ಸಿಪಲ್ ಕಾರ್ಪೊರೇಶನ್‌ ಚುನಾವಣೆಯಲ್ಲಿ ೨೬ ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್‌ನ ಸ್ಥಾನವನ್ನು ತಾನು ಆಕ್ರಮಿಸಿತು. ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.
ಬಿಎಸ್ಪಿ ಮತ್ತು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹಾದ್-ಉಲ್-ಮುಸ್ಲೀಮೀನ್ ಕೂಡ ಉತ್ತಮ ಪ್ರದರ್ಶನ ನೀಡಿದೆ. ಇವೆಲ್ಲವೂ ಪ್ರಮುಖವಾಗಿ ಕಾಂಗ್ರೆಸ್‌ ಮತಗಳನ್ನೇ ನುಂಗಿದವು. ಪರಿಣಾಮ ಬಿಜೆಪಿ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವಾದರೆ ಕಾಂಗ್ರೆಸ್‌ ಸೀಟುಗಳ ಸಂಖ್ಯೆ ಇಳಿಮುಖವಾಯಿತು.
ಆದರೆ ಪಂಜಾಬ್‌ನಲ್ಲಿ ಸ್ಥಿತಿ ಬೇರೆಯಾಯಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದ ಎಎಪಿ ಅಲ್ಲಿ ವಿಭಜನೆ ಕಂಡಿದೆ. ಹೀಗಾಗಿ ಅದು ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಗುಜರಾತ್‌ ಈ ರಾಜ್ಯಗಳಲ್ಲಿ ಎಚ್ಚರಿಕೆ ಹೆಜ್ಜೆ ಇಡಲು ಯೋಜಿಸುತ್ತಿದೆ. ಎಎಪಿಯು ಉತ್ತರ ಪ್ರದೇಶದಲ್ಲಿ ಸಕ್ರಿಯವಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಈ ಬಗ್ಗೆ ಚಿಂತೆ ಆರಂಭವಾದಂತಿದೆ. ಯಾಕೆಂದರೆ ಇದು ಈ ಮೊದಲು ಸ್ಪರ್ಧಿಸಿದ್ದ ಎಲ್ಲ ಚುನಾವಣೆಗಳಲ್ಲಿಯೂ ಕಾಂಗ್ರೆಸ್‌ ಮತಗಳನ್ನೇ ಹೆಚ್ಚಾಗಿ ಕಸಿದಿದೆ. ಜೊತೆಗೆ ಸಮಾಜವಾದಿ ಪಕ್ಷದ ಅಖಿಲೇಶ್‌ ಸಿಂಗ್‌ ಯಾದವ್‌ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮಾಯಾವತಿಗೂ ಇದು ಕಾಡಬಹುದಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement