ಕನ್ನಡ ಕೊಳಕು ಭಾಷೆ ಎಂದು ಅಪಮಾನಿಸಿದ ಗೂಗಲ್ ಸರ್ಚ್​ ಎಂಜಿನ್…!

ಬೆಂಗಳೂರು: 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಭಾರತದ ಅತ್ಯಂತ ಅಸಹ್ಯಕರ, ಕೊಳಕು ಭಾಷೆ ಎಂದು ಗೂಗಲ್ ಹೇಳಿದೆ..!

ತಂತ್ರಜ್ಞಾನ ದೈತ್ಯ ಎಂದು ಕರೆಯಲ್ಪಡುವ ಗೂಗಲ್​ನಲ್ಲಿ ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು ಎಂದು ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿದೆ. ಆ ಮೂಲಕ ಕನ್ನಡ ಭಾಷೆಗೆ, ಕನ್ನಡಿಗರಿಗೆ ಅವಮಾನ ಎಸಗುವ ಹುನ್ನಾರ ನಡೆದಿದೆ.
ನೀವೇನಾದರೂ ಗೂಗಲ್​ ಸರ್ಚ್​ಗೆ ಹೋಗಿ ಭಾರತದ ಅತ್ಯಂತ ಕೊಳಕು ಭಾಷೆ ಯಾವುದು? (which is the ugliest Language in India) ಎಂದು ಸರ್ಚ್ ಮಾಡಿದರೆ ಅಲ್ಲಿ ಬರುವ ಉತ್ತರವೆಂದರೆ ಕನ್ನಡ! ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ ಇರುವ ಭಾಷೆ ಕನ್ನಡ ಎಂದು ಕ್ರಿ.ಶ. 1675ರಲ್ಲೇ ಮಹಾಕವಿಗಳು ಕನ್ನಡ ಭಾಷೆಯ ಬಗ್ಗೆ ಹಾಡಿ ಹೊಗಳಿದ್ದರು. ಆದರೆ, ಈ ಸುಂದರವಾದ ಭಾಷೆಗೆ ಕೊಳಕು ಭಾಷೆ ಎಂದು ಸರ್ಟಿಫಿಕೇಟ್ ನೀಡಿರುವ ಗೂಗಲ್ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.
ಕನ್ನಡಿಗರನ್ನು ಕೆಣಕುವಂತೆ ಅತ್ಯಂತ ಕೆಟ್ಟ ಭಾಷೆ ಎಂದು ಗೂಗಲ್ ನಲ್ಲಿ ಕನ್ನಡಕ್ಕೆ ಅಪಮಾನ ಮಾಡಿರುವುದಕ್ಕೆ ಇದೀಗ ಇನ್​ಸ್ಟಾಗ್ರಾಂ, ಫೇಸ್​ಬುಕ್, ಟ್ವಿಟ್ಟರ್​ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಕೋಟ್ಯಂತರ ಜನರು ಮಾತನಾಡುವ ಕನ್ನಡ ಭಾಷೆಯನ್ನು ಕೊಳಕು ಭಾಷೆ ಎಂದಿರುವುದಕ್ಕೆ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. 6 ಕೋಟಿ ಜನರು ಮಾತನಾಡುವ ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸವಿದೆ. ಈ ಭಾಷೆಯನ್ನು ಹೀಗೆ ಹೀಗಳೆಯಲು ಯಾವ ಆಧಾರವಿದೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ಆರು ಕೋಟಿ ಕನ್ನಡಿಗರು ಮಾತನಾಡುವ ಹಾಗೂ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವುಳ್ಳ ಸುಂದರ ಭಾಷೆಯಾದ ಕನ್ನಡಕ್ಕೆ ಈಗ ಮಸಿ ಬಳೆಯುವ ಮತ್ತೊಂದು ಅಕ್ಷಮ್ಯ ಕೆಲಸ ನಡೆದಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಅನಾವಶ್ಯಕವಾಗಿ ಕನ್ನಡಿಗರನ್ನು, ಕನ್ನಡ ಭಾಷೆಯನ್ನು ಕೀಳೆಂದು ಬಿಂಬಿಸುವ ಯತ್ನದ ವಿರುದ್ಧ ಧ್ವನಿ ಎತ್ತಲಾಗುತ್ತಿದೆ. ಗೂಗಲ್​ನಂತಹ ದೊಡ್ಡ ಸಂಸ್ಥೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಹಾಗೂ ಈ ಕೂಡಲೇ ಪ್ರಮಾದವನ್ನು ಸರಿಪಡಿಸಬೇಕು ಎಂದು ಕನ್ನಡಿಗರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ. debtconsolidationsquad.com ಎಂಬ ಜಾಲತಾಣದಲ್ಲಿ ಇದು ಮೊದಲು ಕಂಡುಬಂದಿದ್ದು, ಸದ್ಯ ಆ ಲೇಖನವನ್ನು ಹಿಂಪಡೆಯಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ನಾವು ಈ ವಿಚಾರವಾಗಿ ಕಾನೂನು ಹೋರಾಟಕ್ಕೆ ಇಳಿದಿದ್ದೇವೆ. ಗೂಗಲ್​ನಲ್ಲಿ ಕನ್ನಡವನ್ನು ಅವಮಾನಿಸಿದ್ದನ್ನು ಖಂಡಿಸಿ ಲೀಗಲ್​ ನೋಟಿಸ್ ಕಳುಹಿಸಿದ್ದೇವೆ. ನೆಲ, ಜಲ, ಭಾಷೆ, ಸಂಸ್ಕೃತಿಯ ವಿಚಾರದಲ್ಲಿ ಇನ್ನೊಬ್ಬರನ್ನು ಅಪಮಾನ ಮಾಡುವುದನ್ನು ಸಹಿಸಲಾಗದು. ಇದೊಂದು ಬಗೆಯ ವ್ಯವಸ್ಥಿತ ಸಂಚು ಎನ್ನುವುದು ಸ್ಪಷ್ಟ. ಕನ್ನಡಿಗರನ್ನು, ಕನ್ನಡ ಭಾಷೆಯನ್ನು ನಿಕೃಷ್ಟವಾಗಿ ಕಾಣುವ ಮನಸ್ಥಿತಿಗಳು ಇಂತಹ ಅವಕಾಶ ಸೃಷ್ಟಿಸಲು ಹೊಂಚು ಹಾಕಿ ಕುಳಿತಿರುತ್ತವೆ. ಈ ತೆರನಾದ ಘಟನೆಗಳು ಜರುಗದಂತೆ ಕಾವಲಿರಬೇಕು. ನಮ್ಮತನಕ್ಕೆ ಧಕ್ಕೆಯಾಗುವ ಸಣ್ಣ ವಿಚಾರವನ್ನೂ ಸಹಿಸುವುದಿಲ್ಲ ಎನ್ನುವುದನ್ನು ಕನ್ನಡಿಗರು ಗಟ್ಟಿ ಧ್ವನಿಯಲ್ಲಿ ಹೇಳಬೇಕು ಎಂದು ಹೇಳಿದ್ದಾರೆ.
ಗೂಗಲ್​ನಲ್ಲಿ Ugliest Language in India ಎಂದು ಹುಡುಕಿದಾಗ ಕನ್ನಡ ಎಂಬ ಉತ್ತರ ಸಿಗುತ್ತಿದ್ದು, ಆ ಉತ್ತರದ ಕೆಳಗಿರುವ debtconsolidationsquad.com ಎಂಬ ಜಾಲತಾಣದ ಕೊಂಡಿಯನ್ನು ತೆರೆಯಲು ಪ್ರತ್ನಿಸಿದರೆ ಅದು ಈಗ ಕೆಲಸ ಮಾಡುತ್ತಿಲ್ಲ. ಗೂಗಲ್​ನಲ್ಲಿ ಈ ರೀತಿಯ ಉತ್ತರ ಬರಲು ಕಾರಣ ಈ ವೆಬ್​ಸೈಟ್​ನಲ್ಲಿ ಪ್ರಕಟವಾದ ಲೇಖನವಾಗಿದ್ದು ಸದ್ಯ ಅದು ಮರೆಯಾಗಿರುವುದರಿಂದ ಲೇಖನದಲ್ಲಿ ಏನಿತ್ತು, ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು ಎಂಬ ಮಾಹಿತಿ ಸಿಕ್ಕಿಲ್ಲ. ಆದರೆ, ಗೂಗಲ್​ನಂತಹ ಸಂಸ್ಥೆ ಇಂತಹ ವಿಚಾರಗಳತ್ತ ಸೂಕ್ಷ್ಮವಾಗಿ ಗಮನ ನೀಡಬೇಕು. ಯಾವುದೇ ರೀತಿಯಲ್ಲಿ ಸೌಹಾರ್ದತೆಗೆ ಭಂಗ ತರುವ ವಿಚಾರಗಳು ಪ್ರಕಟಗೊಳ್ಳಲು ಆಸ್ಪದ ನೀಡಬಾರದು. ಕನ್ನಡಿಗರು ಇಂತಹವುಗಳನ್ನುಪ್ರಶ್ನಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

4.5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement